ಪುಟ:ಕ್ರಾಂತಿ ಕಲ್ಯಾಣ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೧೭

ಅರಸರು. ಕುಮಾರ ಪ್ರೇಮಾರ್ಣವರಿಗೆ ಯುವರಾಜ ಪಟ್ಟಕಟ್ಟಲು ಅವರ ಅನುಮತಿ ಅಗತ್ಯ. ಇದುವರೆಗೆ ಅವರು ಅನುಮತಿ ಕೊಟ್ಟಿಲ್ಲ. ನಮ್ಮ ಅನುನಯ ಒತ್ತಾಯಗಳೆಲ್ಲ ವಿಫಲವಾಗಿವೆ."

"ಜಗದೇಕಮಲ್ಲರಸರ ಅಭಿಮತವೇನು?” ಅಗ್ಗಳನ್ನು ಪ್ರಶ್ನಿಸಿದನು. ಬಿಜ್ಜಳನು ನಡುವೆ ಬಂದು, "ಅವರ ಅಭಿಪ್ರಾಯವೇನೆಂಬುದನ್ನು ತಿಳಿಯಲು ಇದುವರೆಗೆ ನಾವು ಸಮರ್ಥರಾಗಿಲ್ಲ. ನೀವು ಈ ವಿಚಾರದಲ್ಲಿ ನಮಗೆ ಸಹಾಯ ಮಾಡಬೇಕು,” ಎಂದನು.

"ಜಗದೇಕಮಲ್ಲರಸರ ಪರಿಚಯವೇ ಇಲ್ಲದ ನನ್ನಿಂದ ನಿಮಗೆ ಸಹಾಯವೆ? ಪ್ರಭುಗಳು ಹಾಸ್ಯಪ್ರಿಯರು!"-ಅಗ್ಗಳನು ನಸುನಕ್ಕು ಉತ್ತರ ಕೊಟ್ಟನು.

"ನೀವು ಮಹಾರಾಣಿ ಕಾಮೇಶ್ವರೀದೇವಿಯ ಮನೆಹೆಗ್ಗಡೆಯೆಂದು ತಿಳಿದಾಗ ಜಗದೇಕಮಲ್ಲರಸರು ನಿಮ್ಮ ಮಾತುಗಳಿಗೆ ಕಿವಿಗೊಡುವರು. ನಮ್ಮಿಂದ ಆಗದಿದ್ದ ಕಾರ್ಯವನ್ನು ಒಂದೇ ದಿನದಲ್ಲಿ ಮುಗಿಸಲು ನೀವು ಸಮರ್ಥರಾಗುವಿರಿ."

"ಆದರೆ ಕರ್ಣದೇವರಸರ ಸರ್ಪಕಾವಲನ್ನು ದಾಟಿ ನಾನು ಜಗದೇಕಮಲ್ಲರಸರನ್ನು ನೋಡುವುದು ಹೇಗೆ?"–ಅಗ್ಗಳನ್ನು ಸಹಜವಾಗಿ ಕೇಳಿದನು. ಜಗದೇಕ ಮಲ್ಲನ ಬಂಧನದ ವಿಚಾರದಲ್ಲಿ ಕುಚೋದ್ಯವಾಡುವ ಇಚ್ಚೆಯೂ ಅವನಿಗಿರಲಿಲ್ಲ.

ಬಿಜ್ಜಳನ ತುಟಿಗಳು ಕಂಪಿಸಿದವು. ಹಣೇ ಸುಕ್ಕಿಟ್ಟಿತು. ಪ್ರತಿಕ್ಷಣದಲ್ಲಿ ಅವನು ಮನಸ್ಸಿನ ಉದ್ವೇಗವನ್ನು ಮುಚ್ಚಿಟ್ಟು ಸರ್ವಾಧಿಕಾರಿಯ ದೃಢಕಂಠದಿಂದ, "ನಾರಣ ಕ್ರಮಿತರು ತಮ್ಮ ಬುದ್ದಿ ಚತುರತೆಯಿಂದ ಆ ಕಾರ್ಯ ಮಾಡುವರು. ಅಪೇಕ್ಷಿಸುವುದಾದರೆ ನೀವು ಜಗದೇಕಮಲ್ಲರಸರ ಅತಿಥಿಯಾಗಿ ಎರಡು ದಿನಗಳೂ ರಾಜಗೃಹದಲ್ಲಿರಬಹುದು. ಅವರ ಮನಸ್ಸು ತಿರುಗಿಸಲು ನೀವು ಸಮರ್ಥರಾದರೆ ಕಾಮೇಶ್ವರೀದೇವಿಯವರ ಆಸೆ ಪೂರೈಸುವುದು. ನಮ್ಮ ತೊಂದರೆ ಪರಿಹಾರವಾಗುವುದು,"-ಎಂದು, ಹೇಳಿ ಸಂದರ್ಶನ ಮುಗಿಯಿತೆಂಬುದನ್ನು ಸೂಚಿಸಲು ಕೈಮುಗಿದು ಅಲ್ಲಿಂದ ಹೊರಟನು. ಪಸಾಯಿತರ ಪರಿವಾರ ಬಿಜ್ಜಳನ ಹಿಂದೆ ಹೋಯಿತು.

ಅಗ್ಗಳನ್ನು ಕ್ರಮಿತನ ಕಡೆ ತಿರುಗಿ, "ಈಗ ನನ್ನನ್ನೇನು ಮಾಡುವಿರಿ, ಧರ್ಮಾಧಿಕಾರಿಗಳೇ? ಬಂಧನವೋ ನಿರ್ವಾಸನವೋ?” ಎಂದನು.

ಕ್ರಮಿತನು ನಕ್ಕು, "ನೀವು ಎರಡಕ್ಕೂ ಯೋಗ್ಯರಲ್ಲ, ಅಗ್ಗಳದೇವರಸರೆ. ನಿಮ್ಮನ್ನು ರಾಜಗೃಹಕ್ಕೆ ಕರೆದುಕೊಂಡುಹೋಗಿ ಜಗದೇಕಮಲ್ಲರಸರಿಗೆ ಒಪ್ಪಿಸುತ್ತೇನೆ.