ಪುಟ:ಕ್ರಾಂತಿ ಕಲ್ಯಾಣ.pdf/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮಾನವನು ದಾನವನಾದಾಗ

೨೮೭


“ಅವರು ನಿನ್ನನ್ನು ಈ ವಿವಾಹ ಬಂಧನಕ್ಕೆ ತಳ್ಳಿ ಅಪರಾಧಿಗಳಾಗಿದ್ದರೆ,” ಎಂದು ಬಿಜ್ಜಳನು ಮತ್ತೆ ಹೇಳಿದನು.

“ಒತ್ತಾಯಪಡಿಸಿದವಳು ನಾನು. ಮದುವೆ ನಮ್ಮ ಒಮ್ಮತದಿಂದ ನಡೆಯಿತು. ವಾಸ್ತವದಲ್ಲಿ ನನ್ನ ತಂದೆಯವರಿಗಾಗಲಿ, ಹರಳಯ್ಯನವರಿಗಾಗಲಿ, ಈ ಸಂಬಂಧ ಇಷ್ಟವಿರಲಿಲ್ಲ, -ಎಂದು ಲಾವಣ್ಯವತಿ, ತಾನು ಮೊದಲಸಾರಿ ಆರೋಗ್ಯಧಾಮದಲ್ಲಿ ಶೀಲವಂತನನ್ನು ಕಂಡಾಗಿನಿಂದ ನಡೆದುದೆಲ್ಲವನ್ನೂ ವಿವರಿಸಿದಳು. ಸರ್ಪದ್ರಷ್ಟವಾಗಿ ದೇವಗಿರಿಯಿಂದ ಕಲ್ಯಾಣಕ್ಕೆ ಹಿಂತಿರುಗಿದಾಗ ಶೀಲವಂತ ಸ್ಮ್ರತಿಭಂಗದಿಂದ ಮೂಕನಾಗಿದ್ದದ್ದು, ಅವನ ನೆನಪುಗಳನ್ನು ಎಚ್ಚರಗೊಳಿಸಲು ಕುಸುಮಾವಳಿಯಂತೆ ನಟಿಸಿದ್ದು, ಅದರಿಂದ ತನ್ನಲ್ಲಾದ ಮನೋಪರಿವರ್ತನೆ, ಚಿತ್ರಸ್ಥೆಯಾದ ರಾಗಿಣಿ ಮತ್ತು ಮೃತಳಾದ ಕುಸುಮಾವಳಿ -ಈ ಇಬ್ಬರನ್ನು ಕುರಿತ ಚಿಂತನೆ ಅನುಶೀಲನಗಳಿಂದ ಮನಸ್ಸಿನ ಮೇಲಾದ ಪರಿಣಾಮ, ಮಧುವಯ್ಯನವರ ಯೌಗಿಕ ಚಿಕಿತ್ಸೆ, ಶೀಲವಂತನಲ್ಲಿ ತನ್ನ ಪ್ರಗಾಢ ಪ್ರೇಮವನ್ನು ತಂದೆ ತಿಳಿದು ಹರಳಯ್ಯನವರನ್ನು ಮದುವೆಗೆ ಒಪ್ಪಿಸಿದ್ದು-ಈ ಎಲ್ಲ ವಿಚಾರಗಳನ್ನು ವಿವರಿಸಿದಳು.

“ವಿವಾಹ ಅಪರಾಧವೆಂದು ನೀವು ಭಾವಿಸುವುದಾದರೆ ತಪ್ಪಿತಸ್ಥಳು ನಾನು. ನನ್ನ ತಂದೆಯವರಾಗಲಿ, ಹರಳಯ್ಯ ಶೀಲವಂತರಾಗಲಿ, ಮಹಮನೆಯ ಶರಣರಾಗಲಿ, ಇದರ ಕಾರಣವಲ್ಲ. ಅಪರಾಧ ಮಾಡಿದವಳು ನಾನು. ನನ್ನನ್ನು ವಧಿಸಲು ಆಜ್ಞೆ ಮಾಡಿರಿ. ನಾನು ಸಂತೋಷದಿಂದ ಸಾವನ್ನಪ್ಪುತ್ತೇನೆ” ಎಂದು ಅವಳು ತನ್ನ ವಿವರಣೆಯನ್ನು ಮುಗಿಸಿದಳು.

ಬಿಜ್ಜಳನು ಎಲ್ಲವನ್ನೂ ಕೇಳಿದನು. ನ್ಯಾಯಪೀಠ ನಡೆಸಿದ ವಿಚಾರಣೆಯಲ್ಲಿ ಸಂದಿಗ್ಧವಾಗಿದ್ದ ಅನೇಕ ವಿಷಯಗಳು ಲಾವಣ್ಯವತಿ ಕೊಟ್ಟ ವಿವರಗಳಿಂದ ಪರಿಷ್ಕಾರವಾದಂತೆ ಅವನು ತಿಳಿದನು. ವಿದ್ವೇಷ ಪೂರ್ವಾಗ್ರಹಗಳಿಗೆ ಅಧೀನನಾಗಿ ಕ್ರಮಿತನಂತೆ ತಾನೂ ತಪ್ಪುದಾರಿ ಹಿಡಿಯುತ್ತಿರುವೆನೆಂದು ಅರಿತುಕೊಂಡನು. ಇದುವರೆಗೆ ಇಷ್ಟು ಧೈರ್ಯದಿಂದ ಯಾವ ಹೆಣ್ಣೂ ಅವನೊಡನೆ ವಾದಿಸಿರಲಿಲ್ಲ. ಶರಣ ಧರ್ಮದಲ್ಲಿ ಬೆಳೆದ ಬ್ರಾಹ್ಮಣ ಕನ್ಯೆ! ರತ್ನಕ್ಕೆ ಚಿನ್ನದ ಚೌಕಟ್ಟು ಹಾಕಿದಂತೆ!

ಬಿಜ್ಜಳನು ಅವಾಕ್ಕಾಗಿ ಕೆಲವು ಕ್ಷಣಗಳು ಯೋಚಿಸುತ್ತಿದ್ದು ಬಳಿಕ, “ಶೀಲವಂತ ಹೀನಕುಲದವನೆಂದು ತಿಳಿದೂ ನೀನು ಅವನನ್ನು ಪ್ರೀತಿಸಿದ್ದು ಹೇಗೆ ?” ಎಂದು ಕೇಳಿದನು.

ಲಾವಣ್ಯವತಿ ಹೇಳಿದಳು : “ಪ್ರೇಮಕ್ಕೆ ಕಣ್ಣಿಲ್ಲವೆಂದು ನೀವು ಕೇಳಿಲ್ಲವೆ ? ತಮಂಧದ ಕಗ್ಗತ್ತಲಲ್ಲಿ ತನ್ನಂತೆಯೇ ಅಂಧವಾದ ಮತ್ತೊಂದು ಆತ್ಮವನ್ನು ಹುಡುಕುತ್ತ