ಪುಟ:ಕ್ರಾಂತಿ ಕಲ್ಯಾಣ.pdf/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೨೮೮

ಕ್ರಾಂತಿ ಕಲ್ಯಾಣ

ಅಲೆಯುವ ವಾಸನಾಜೀವಿಯೆಂದು ತತ್ವದರ್ಶಿಗಳು ಕರೆಯುತ್ತಾರೆ ಪ್ರೇಮವನ್ನು, ನಾನು ಪ್ರೇಮಾಂಧಳಾಗಿ ನನ್ನ ವರನನ್ನು ನಾನೇ ಆರಿಸಿಕೊಂಡೆ. ಜಾತಿಪಂಥವನ್ನು ನಿರಾಕರಿಸಿದೆ. ಸ್ತ್ರೀ ಪುರುಷರಿಗೆ ಸಮಾನಾಧಿಕಾರವನ್ನು ಕೊಡುವ ಶರಣ ಧರ್ಮ ನನ್ನ ಆರಿಕೆಯನ್ನು ಸಮರ್ಥಿಸಿತು. ಕಾಲದೇಶಗಳಿಗೆ ಅನುಗುಣವಾಗಿ ನಮ್ಮ ಸಂಸ್ಕೃತಿ ಸಂಪ್ರದಾಯಗಳಲ್ಲಿ ಮಾರ್ಪಾಟುಗಳೂ ನಡೆಯುವುದು ಅಗತ್ಯವೆಂದು ತಿಳಿದಿದ್ದಾರೆ ಶರಣರು. ಬಸವಣ್ಣನವರು ಆಚರಣೆಗೆ ತಂದ ಧಾರ್ಮಿಕ ಸಾಮಾಜಿಕ ಸುಧಾರಣೆಗಳು ಈ ವಿಶಾಲ ತಳಹದಿಯ ಮೇಲೆ ಕಟ್ಟಲ್ಪಟ್ಟಿವೆ.”

ಅಪರಾಧಿಗಳ ಪ್ರಾಣಭಿಕ್ಷೆ ಬೇಡಲು ಬಂದ ತರುಣಿಯೊಡನೆ ಧರ್ಮ ಸಮಾಜಗಳನ್ನು ಕುರಿತ ವಾದ ಅನುಚಿತವೆಂದು ಬಿಜ್ಜಳನು ತಿಳಿದನು. ಪಾರ್ಶ್ವದ ಪೀಠದ ಮೇಲಿದ್ದ ಕಟ್ಟೊಂದನ್ನು ತೆಗೆದುಕೊಂಡು, “ಇದು ನ್ಯಾಯಾಸ್ಥಾನದಲ್ಲಿ ನೀನು ಕೊಟ್ಟ ಸಾಕ್ಷ್ಯ. ಈ ಎಲ್ಲ ವಿಚಾರಗಳನ್ನು ಆಗ ನೀನೇಕೆ ತಿಳಿಸಲಿಲ್ಲ?” ಎಂದು ಕೇಳಿದನು.

ಲಾವಣ್ಯವತಿ ಕೆಲವು ಕ್ಷಣಗಳು ಯೋಚಿಸಿ, 'ನಾರಣಕ್ರಮಿತರು ಅಸಂಬದ್ಧ ಅಶ್ಲೀಲ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದರಿಂದ ನಾನು ಹಠಾತ್ತಾಗಿ ನ್ಯಾಯಾ ಸ್ಥಾನವನ್ನು ಬಿಡಬೇಕಾಯಿತು. ಅವಕಾಶ ಕೊಟ್ಟಿದ್ದರೆ ಎಲ್ಲವನ್ನೂ ತಿಳಿಸುತ್ತಿದ್ದೆ.” ಎಂದಳು.

“ನಿನ್ನ ಸಾಕ್ಷ್ಯವನ್ನು ನಾನು ಎಚ್ಚರದಿಂದ ಓದಿದ್ದೇನೆ, ಲಾವಣ್ಯವತಿ. ಕ್ರಮಿತರ ಪ್ರಶ್ನೆಗಳಲ್ಲಿ ನನಗೆ ಅಶ್ಲೀಲವೇನೂ ಕಾಣಲಿಲ್ಲ. ಹೆಣ್ಣಿಗೆ ಸಹಜವಾದ ಆವೇಶಕ್ಕೊಳಗಾಗಿ ನೀನು ಹಠಾತ್ತನೆ ನ್ಯಾಯಾಸ್ಥಾನವನ್ನು ಬಿಟ್ಟೆ, ವಾಸ್ತವವಿಚಾರಗಳನ್ನು ತಿಳಿಸಲು ನ್ಯಾಯಪೀಠ ನಿನಗೆ ಕೊಟ್ಟ ಅವಕಾಶವನ್ನು ನಿರಾಕರಿಸಿದೆ,” ಎಂದನು ಬಿಜ್ಜಳ.

ಲಾವಣ್ಯವತಿ ಉತ್ತರಕೊಡಲಿಲ್ಲ. ನ್ಯಾಯಪೀಠದ ಮುಂದೆ ತನ್ನ ಅವಸರದ ವರ್ತನೆ ಅನುಚಿತವೆಂದು ಅವಳಿಗೆ ಅರಿವಾಗಿತ್ತು.;

“ಕೊನೆಯಲ್ಲಿ ಕ್ರಮಿತರು ಹಲಿಗೆಯಲ್ಲಿ ಬರೆದು ಕೇಳಿದ ಪ್ರಶ್ನೆಯೇನು?” ಬಿಜ್ಜಳನು ಮತ್ತೆ ಪ್ರಶ್ನಿಸಿದನು.

“ಪ್ರಶ್ನೆಯೇನೆಂಬುದನ್ನು ವರದಿಯಲ್ಲಿ ತಿಳಿಸಿಲ್ಲವೆ?”
“ತಿಳಿಸಿದ್ದರೆ ನಾನು ಕೇಳುತ್ತಿದ್ದೆನೇ ?”
ಪ್ರಶ್ನೆಗೆ ಮರು ಪ್ರಶ್ನೆ. ಉತ್ತರ ಕೊಡದೆ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲವೆಂದು ತಿಳಿದ ಲಾವಣ್ಯವತಿ ಹೇಳಿದಳು – “ಆಗ ನಾನು ಕ್ರಮಿತರಿಗೆ ಉತ್ತರ ಕೊಡದಿರಲು ಒಂದು ಮುಖ್ಯ ಕಾರಣವಿತ್ತು. ನ್ಯಾಯಪೀಠ ಸ್ವತಂತ್ರವೆಂದೂ, ಸರ್ವಾಧಿಕಾರಿಯ