ಪುಟ:ಕ್ರಾಂತಿ ಕಲ್ಯಾಣ.pdf/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮಾನವನು ದಾನವನಾದಾಗ

೨೮೯

ಕೈಗೊಂಬೆಯಲ್ಲವೆಂದೂ ನಾನು ಭಾವಿಸಿದ್ದೆ. ನನ್ನ ಆ ಭ್ರಮೆ ಈಗ ಪರಿಹಾರವಾಗಿದೆ. ಕ್ರಮಿತರು ಬರಹದ ಮೂಲಕ ನನ್ನನ್ನು ಕೇಳಿದ ಪ್ರಶ್ನೆ, 'ಮದುವೆಗೆ ಮೊದಲು ನಿನಗೂ ಶೀಲವಂತನಿಗೂ ದೈಹಿಕ ಸಂಬಂಧವಿದ್ದಿತೆ?” ಎಂದು.”

ಬಿಜ್ಜಳನು ನಸುನಕ್ಕು, “ಅದಕ್ಕೆ ಈಗ ನಿನ್ನ ಉತ್ತರ?” ಎಂದನು.
ಲಾವಣ್ಯವತಿ ಹೇಳಿದಳು- “ಆಗ ನಾನು ಶೀಲವಂತನನ್ನು ಪತಿಯಂತೆ ಪ್ರೀತಿಸುತ್ತಿದ್ದೆ. ಇನ್ನೂ ಮದುವೆಯಾಗದಿದ್ದ ಕಾರಣ ದೇಹ ಸಂಬಂಧವಿರಲಿಲ್ಲ.”

ಸಂದರ್ಶನ ಪ್ರಾರಂಭವಾಗಿ ಆಗಲೆ ಅರ್ಧ ಪ್ರಹರ ಕಳೆದಿತ್ತು. ಸಭಾಂಗಣದ ಹೊರಗೆ ಪಸಾಯಿತರೂ ಪ್ರಹರಿಗಳೂ, ಪ್ರಭುವಿನ ಸಮಯವನ್ನು ನಿರೀಕ್ಷಿಸುತ್ತ ನಿಂತಿದ್ದರು. ಬೇಗ ಮುಗಿಸುವುದು ಉಚಿತವೆಂದು ಭಾವಿಸಿ ಬಿಜ್ಜಳನು, “ನೀನು ಬುದ್ದಿಮತಿ, ಪ್ರಗಲ್ಘೆ ಚತುರೆ. ನಿನ್ನ ಉತ್ತರಗಳೂ ಈ ಸಂದಿಗ್ಧ ವ್ಯವಹಾರದ ಮೇಲೆ ಹೊಸ ಬೆಳಕನ್ನು ಚೆಲ್ಲಿವೆ. ನಿನ್ನ ಕ್ಷಮಾಪ್ರಾರ್ಥನೆಯನ್ನು ಸಂಪೂರ್ಣವಾಗಿ ನಿರಾಕರಿಸುವುದು ನನಗಿಷ್ಟವಿಲ್ಲ. ಮೂವರು ಅಪರಾಧಿಗಳಲ್ಲಿ ಇಬ್ಬರನ್ನು ನಾನು ಕ್ಷಮಿಸುತ್ತೇನೆ. ಆದರೆ ಆ ಇಬ್ಬರನ್ನು ನೀನು ಆರಿಸಬೇಕು.” ಎಂದು ತನ್ನ ಕೊನೆಯ ನಿರ್ಧಾರವನ್ನು ತಿಳಿಸಿದನು.

ಲಾವಣ್ಯವತಿ ತೊಡಕಿನಲ್ಲಿ ಬಿದ್ದಳು. ತನ್ನನ್ನು ಸಂದಿಗ್ಧದಲ್ಲಿ ಹಾಕುವುದೇ ಬಿಜ್ಜಳನ ಉದ್ದೇಶವೆಂದು ಅವಳು ಭಾವಿಸಿದಳು. ತುಸುಹೊತ್ತು ಯೋಚಿಸುತ್ತಿದ್ದು ಬಳಿಕ ಹೇಳಿದಳು-

“ಸತ್ಯವಾನನ ಒಂದು ಜೀವನವನ್ನು ಕೈಯಲ್ಲಿ ಹಿಡಿದು ಯಮಧರ್ಮನು ಸಾವಿತ್ರಿಯನ್ನು ವರದಾನದ ತೊಡಕಿನಲ್ಲಿ ಹಾಕಿದನು. ನೀವು ಮೂರು ಜೀವಗಳನ್ನು ಸೆರೆಯಲ್ಲಿಟ್ಟು ನನ್ನೊಡನೆ ಆಡುತ್ತಿದ್ದೀರಿ. ಭುಜಬಲಿ ಚಕ್ರವರ್ತಿಯೆಂದು ವಿಖ್ಯಾತರಾದ ನಿಮಗೆ ಉಚಿತವೆ ಇದು ? ಪತಿ, ತಂದೆ, ಮಾವ, ಈ ಮೂವರಲ್ಲಿ ನಾನು ಯಾರಿಬ್ಬರನ್ನು ಉಳಿಸಿಕೊಂಡರೂ ಪಾಪಭಾಗಿನಿಯಾಗುತ್ತೇನೆ. ನನ್ನ ಸತೀತ್ವ ಶರಣ ಧರ್ಮ, ಇವರಡೂ ಒಕ್ಕೊರಲಿಂದ ಹೇಳುತ್ತಿವೆ -ಮೂವರೂ ನಿನಗೆ ಸಮಾನ, ಅವರಲ್ಲಿ ಯಾರಿಬ್ಬರನ್ನು ಉಳಿಸಿಕೊಂಡು ನೀನು ಸತಿಯಾಗಿ ಬಾಳಲಾರೆ ಎಂದು, ಶರಣೆ ಎನಿಸಲಾರೆ ಎಂದು. ಮಾನವನ ಬಾಳು ತನ್ನ ಸುಖಕ್ಕಾಗಿ ಮಾತ್ರವಲ್ಲ, ತನ್ನವರೆಲ್ಲರ ಸುಖಕ್ಕಾಗಿ, ಸಮಾಜದ ಕಲ್ಯಾಣಕ್ಕಾಗಿ, ವಿಶ್ವದ ಮಂಗಳಕ್ಕಾಗಿ, ಈ ಆದರ್ಶವನ್ನು ರಕ್ಷಿಸಿಕೊಳ್ಳಲು ನಾನು ಅಸಮರ್ಥಳಾದರೆ, ನನ್ನ ಉಳಿವಿಗಿಂತ ಅಳಿವೇ ಲೇಸು. `ಜಾತಸ್ಯ ಮರಣಂ ಧೃವಂ” ಎಂಬುದಾಗಿ ಶಿವನು ಬರೆದ ಬರಹವನಳಿಸಲು ಶಕ್ತಳೇ ನಾನು ! ಬರಿಗೈಯಲ್ಲಿ ಬಂದೆ, ಬರಿಗೈಯಲ್ಲಿ ಹಿಂದಿರುಗುತ್ತೇನೆ,”