ಪುಟ:ಕ್ರಾಂತಿ ಕಲ್ಯಾಣ.pdf/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೨೯೨

ಕ್ರಾಂತಿ ಕಲ್ಯಾಣ

ವಿಗ್ರಹ, ಬಿಜ್ಜಳನ ಆಶ್ರಯ ಪಡೆದು ಕಲ್ಯಾಣದಲ್ಲಿ ನೆಲೆಸಿದ್ದ ಚೋಳದೇಶದ ವಿಖ್ಯಾತ ಲೋಹ ಶಿಲ್ಪಿಯೊಬ್ಬನ ಶ್ರೇಷ್ಠ ಕಲಾಕೃತಿಯಾಗಿತ್ತು. ಎದುರಿಗೆ ತಟ್ಟೆಯಲ್ಲಿ ತಾವರೆ ಹೂಗಳ ಅರ್ಘ್ಯ, ಎರಡು ಕಡೆ ದೀಪಸ್ತಂಭಗಳಲ್ಲಿ ದೀಪಗಳು ಉರಿಯುತ್ತಿದ್ದವು. ವಿಗ್ರಹದ ಕಣ್ಣುಗಳಿಗೆ ಜೋಡಿಸಿದ್ದ ಗೋಮೇದಿಕದ ಹರಳುಗಳು ಆ ದೀಪಗಳ ಬೆಳಕಿನಲ್ಲಿ ಬಹು ವರ್ಣದ ಕಾಂತಿ ಕಿರಣಗಳನ್ನು ಚೆಲ್ಲುತ್ತಿದ್ದವು.

ಹಂಸಿಯಂತೆ ಚಲಿಸುತ್ತ ಲಾವಣ್ಯವತಿ, ಮಂದಾಸನದ ಬಳಿ ಹೋಗಿ ನಿಂತು, ಬಿಜ್ಜಳನ ಕಡೆ ತಿರುಗಿ ಸ್ಥಿರ ನಮ್ಮಕಂಠದಿಂದ ಹೇಳಿದಳು- “ಇದು ನಿಮ್ಮ ರಾಜಲಾಂಛನ, ಧರ್ಮದ ಪ್ರತೀಕವೆಂದು ಶರಣರು ಆರಾಧಿಸುವ ವೃಷಭ ಮೂರ್ತಿಯೂ ಇದೇ. ಈ ಮಂಗಳ ವಿಗ್ರಹದ ಸಾನ್ನಿಧ್ಯದಲ್ಲಿ ನಿಂತು ನಾನು ನಿಮ್ಮನ್ನು ಕೇಳುತ್ತಿದ್ದೇನೆ. ಪರನಾರೀಸಹೋದರರೆಂದು ಹೊಗಳಿಸಿಕೊಳ್ಳುವ ನಿಮಗೆ ಉಚಿತವಾದ ವರ್ತನೆಯೇ ಇದು? ಚಾಲುಕ್ಯ ಧರ್ಮಾಧಿಕರಣದ ಸರ್ವೋನ್ನತ ಪ್ರಭುವೆಂದು ತಿಳಿದು ನ್ಯಾಯಭಿಕ್ಷೆ ಬೇಡಲು ನಿಮ್ಮ ಬಳಿಗೆ ಬಂದ ಅನಾಥ ಅಬಲೆಯೊಡನೆ ನಿಮ್ಮ ಲಜ್ಜಾಹೀನ ಪ್ರೇಮದ ಅಸದ್ವ್ಯವಹಾರವೇ? ತಿಳಿಯಿರಿ ಪ್ರಭು, ಶರಣ ಧರ್ಮವು, ಸತೀ ಸಾದ್ವಿಯರ ಧರ್ಮ. ಕಾಮಾಸಕ್ತರಾದ ಕುಲಟೆಯರ, ಪತಿಯನ್ನು ವಂಚಿಸಿ ಪ್ರಿಯರನ್ನು ಹುಡುಕುವ ಸೈರಿಣಿಯರ, ಹಣದಾಸೆಗಾಗಿ ದೇಹವನ್ನು ಮಾರಿಕೊಳ್ಳುವ ವೇಶೈಯರ ಧರ್ಮವಲ್ಲ. ಸತ್ಯ ಧರ್ಮಗಳನ್ನು ಕಡೆಗಣಿಸಿ ನಾನು ನಿಮ್ಮ ಅಂತಃಪುರವಾಸಿನಿಯಾಗುವೆನೆಂದು, ನನ್ನ ಪತಿತ ಜೀವನದ ಮೌಲ್ಯವಾಗಿ ಬಂಧವಿಮುಕ್ತರಾಗುವ ನನ್ನ ತಂದೆ, ಪತಿ ಮತ್ತು ಮಾವಂದಿರು ಅಪಮಾನದ ಹೊರೆ ಹೊತ್ತು, ಶರಣರೆಲ್ಲರ ಅವಹೇಳನೆಗೆ ಗುರಿಯಾಗಿ ಜೀವಿಸುವರೆಂದು ಭಾವಿಸುವಿರಾ ನೀವು ? ಮಾನ ಅಪಮಾನಗಳು ಒಂದಾದವೆ ನಿಮ್ಮ ದೃಷ್ಟಿಯಲ್ಲಿ? ಸತ್ಯ ಧರ್ಮಗಳಿಗೆ ಯಾವ ಬೆಲೆಯೂ ಇಲ್ಲವೇ ನಿಮ್ಮಲ್ಲಿ? ನನ್ನ ಜಾರ ಜೀವನದ ಕಥೆ ಕೇಳಿ ನನ್ನ ಆ ಬಂಧುಗಳು ನಿಮ್ಮನ್ನು ಶಪಿಸುವರು. ಪ್ರತೀಕಾರದ ಪ್ರಯತ್ನದಲ್ಲಿಯೋ, ನಿರಾಶೆಯಿಂದ ಆತ್ಮಹತ್ಯೆ ಮಾಡಿಕೊಂಡೋ ಕೆಲವೇ ದಿನಗಳಲ್ಲಿ ಅವರು ಸಾವನ್ನಪ್ಪುವರು.”

ಬಿಜ್ಜಳನು ಬೆರಗಾಗಿ ಲಾವಣ್ಯವತಿಯ ಆವೇಶದ ನುಡಿಗಳನ್ನು ಕೇಳುತ್ತಿದ್ದನು. ಒಬ್ಬ ಸಾಮಾನ್ಯ ಹೆಣ್ಣಿಗೆ ಎಷ್ಟೊಂದು ದರ್ಪ ! ಭುಜಬಲಚಕ್ರವರ್ತಿ ! ನಿಶ್ಯಂಕ ಮಲ್ಲ, ಶನಿವಾರಸಿದ್ದಿ ಬಿಜ್ಜಳರಾಯನೆದುರಿಗೇ ಈ ದರ್ಪೋಕ್ತಿಗಳು !

“ರತ್ನಂ ಯತ್ ಕ್ವಚಿದಸ್ತಿ ತತ್ ಪರಿಣಮತ್ಯಸ್ಮಾಸು ಶಕ್ರಾದಪಿ !
“ರತ್ನವು ಎಲ್ಲಿರಲಿ, ಅದು ನಮಗೆ ಸೇರತಕ್ಕದ್ದು. ಇಂದ್ರನಿಂದಲೇ ಆಗಲಿ