ಪುಟ:ಕ್ರಾಂತಿ ಕಲ್ಯಾಣ.pdf/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೯೫

ಅಲ್ಲಿ ತನಗಾಗುತ್ತಿದ್ದ ಸಂಕಷ್ಟಗಳಿಂದ ತನ್ನ ಮಾಲಿನ್ಯವೆಲ್ಲ ಕಳೆದು ಮುಕ್ತಿ ಸನ್ನಿಹಿತವಾಗುವುದೆಂದು ಅವನು ಭಾವಿಸಿದನು; ಬಾಹ್ಯ ಜಗತ್ತಿನೊಡನೆ ಎಲ್ಲ ಬಗೆಯ ಸಂಬಂಧಗಳನ್ನೂ ತೊರೆಯಲು ನಿರ್ಧರಿಸಿಕೊಂಡನು.

ತನ್ನಲ್ಲಾದ ಈ ಭಾವಪರಿವರ್ತನೆಯ ಫಲವಾಗಿ ಮಧುವರಸನು ತನ್ನ ಮೇಲೆ ನ್ಯಾಯಾಸ್ಥಾನದಲ್ಲಿ ನಡೆಯುತ್ತಿದ್ದ ವರ್ಣಸಂಕರದ ವ್ಯವಹಾರವನ್ನೇ ಮರೆತನು. ವಿಚಾರಣೆ ಅರ್ಧದಲ್ಲೇಕೆ ನಿಂತಿತು, ಅದು ಪುನಃ ಯಾವಾಗ ಆರಂಭವಾಗುವುದು, ತನ್ನ ಸಹ ಆಪಾದಿತರಾರು, ಈ ವಿಚಾರಗಳನ್ನು ತಿಳಿಯುವ ಆಸಕ್ತಿ ಈಗ ಅವನಲ್ಲಿರಲಿಲ್ಲ. ಜವರಾಯ ನೀರು ತಂದಾಗ ಸ್ನಾನಮಾಡುವನು. ಪೂಜೆಗೆ ಕುಳಿತರೆ ಪುನಃ ಜವರಾಯ ಕರೆಯುವವರೆಗೆ ಏಳುತ್ತಿರಲಿಲ್ಲ. ಮಹಮನೆಯಿಂದ ಬರುತ್ತಿದ್ದ ತಿಂಡಿಯ ಪೊಟ್ಟಣಗಳು, ಜವರಾಯ ದಿನಕ್ಕೆರಡು ಸಾರಿ ತಂದು ಕೊಡುತ್ತಿದ್ದ ಹಾಲು, ಅವನ ದೇಹರಕ್ಷಣೆಗೆ ಸಾಕಾಗುತ್ತಿದ್ದವು. ದಿನಗಳು ಕಳೆದಂತೆ ಲಾವಣ್ಯವತಿ ಶೀಲವಂತ ಹರಳಯ್ಯಗಳ ನೆನಪೂ ಕನಸಿನ ಚಿತ್ರದಂತೆ ಅವನ ಮನಸ್ಸಿನಿಂದ ಅಳಿಸಿ ಹೋಗಲು ಮೊದಲಾಗಿತ್ತು.

ಭಟನು ಮೌನವಾಗಿ ನಿಂತಿರುವುದನ್ನು ಕಂಡು ಮಧುವರಸನು, "ಏಕೆ ಜವರಾಯ? ಮೇಲಿಂದ ಏನಾದರೂ ಆಜ್ಞೆ ತಂದಿರುವೆಯಾ?" ಎಂದು ಕೇಳಿದನು.

"ಓಡೆಯರು ಹೇಳಿದ್ದು ನಿಜ. ಆಜ್ಞೆ ಬಂದಿದೆ,-ಚಿಹ್ನೆಗಳು ಮಿರುಗುವ ದೂರದ ಗಗನದಿಂದಲ್ಲ, ಸೆರೆಮನೆಯ ಅಧಿಕಾರಿಯಿಂದ," -ಎಂದು ಹೇಳಿ ಜವರಾಯ ಕಿಸೆಯಿಂದ ಪತ್ರದ ಸುರುಳಿಯೊಂದನ್ನು ತೆಗೆದು ಮಧುವರಸನಿಗೆ ಕೊಟ್ಟನು.

ಮಧರುವರಸನು ಪತ್ರವನ್ನು ಓದಿ ಹಿಂದಿರುಗಿ ಕೊಟ್ಟು, "ನನ್ನ ಬಿಡುಗಡೆ ಇಷ್ಟೊಂದು ಬೇಗ, ಇಷ್ಟೊಂದು ಸುಲಭವಾಗಿ ಸನ್ನಿಹಿತವಾಗುವುದೆಂದು ಯಾರು ತಿಳಿದಿದ್ದರು ಜವರಾಯ? ವಧೆಯ ದಂಡಾಜ್ಞೆ ಯಾವಾಗ ಕಾರ್ಯಗತವಾಗುವುದು? ಅದಕ್ಕೆ ಮೊದಲು ನನ್ನ ದೇಹವನ್ನು ಬಂಧಿಸಿರುವ ಈ ಸಂಕಲೆಗಳನ್ನು ತೆಗೆಸಬೇಕಲ್ಲವೆ?" ಎಂದು ಸಹಜ ಕಂಠದಿಂದ ಕೇಳಿದನು.

ಜವರಾಯ ಅವಾಕ್ಕಾದನು. ಅವನ ಸುದೀರ್ಘ ಜೀವನದಲ್ಲಿ ಇಂತಹ ದಂಡಾಜ್ಞೆಗಳನ್ನು ಬಂಧಿಗಳಿಗೆ ಮುಟ್ಟಿಸುವ ಪ್ರಸಂಗ ಅವನಿಗೆ ಅನೇಕ ಸಾರಿ ಒದಗಿ ಬಂದಿತ್ತು. ಆ ಸಂದರ್ಭಗಳಲ್ಲಿ ಬಂಧಿಗಳ ಪ್ರತಿಕ್ರಿಯೆ ಅವನಲ್ಲಿ ವಿಷಾದದ ನೆನಪುಗಳಾಗಿ ಉಳಿದಿದ್ದವು. ಅನುಕಂಪದ ದನಿಯಿಂದ ಅವನು, "ಒಡೆಯರು ಚಿತ್ತಸಮತೆಯನ್ನು ಚೆನ್ನಾಗಿ ಸಾಧಿಸಿಕೊಂಡಂತಿದೆ. ಇಷ್ಟೊಂದು ಸ್ಥೈರ್ಯ