ಪುಟ:ಕ್ರಾಂತಿ ಕಲ್ಯಾಣ.pdf/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೬

ಕ್ರಾಂತಿ ಕಲ್ಯಾಣ

ಸಮಾಧಾನಗಳಿಂದ ವಧೆಯ ದಂಡಾಜ್ಞೆಯನ್ನು ಸ್ವಾಗತಿಸಿದವರಾರನ್ನೂ ನಾನು ನೋಡಿಲ್ಲ," ಎಂದನು.

ಮಧುವರಸನು ಕುತೂಹಲದಿಂದ, "ಹಾಗಾದರೆ ನೀನು ದಂಡಾಜ್ಞೆಯನ್ನು ಕೊಟ್ಟಾಗ ಅವರೇನು ಮಾಡುತ್ತಿದ್ದರು?" ಎಂದು ಕೇಳಿದನು.

ಜವರಾಯ ಹೇಳಿದನು: "ಕೆಲವರು ಚೀತ್ಕಾರ ಮಾಡುತ್ತಿದ್ದರು. ಕೆಲವರು ಗಟ್ಟಿಯಾಗಿ ಅಳುತ್ತಿದ್ದರು. ಕೆಲವರು ತಲೆ ಚಚ್ಚಿಕೊಂಡು ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದರು. ಹೊಡೆದಾಟದಲ್ಲಿ ಎದುರಾಳಿಯನ್ನು ಕೊಂದ ಬಂಧಿಯೊಬ್ಬನು ಆಜ್ಞೆ ಕೇಳಿ ಮೂರ್ಛೆ ಹೋದನು, ವಧಾಸ್ಥಾನಕ್ಕೆ ಕರೆದುಕೊಂಡು ಹೋದಾಗಲೂ ಅವನಿಗೆ ಎಚ್ಚರವಾಗಲಿಲ್ಲ."

ಮಧುವರಸನು ತುಸು ಹೊತ್ತು ಮೌನವಾಗಿ ಯೋಚಿಸುತ್ತಿದ್ದು ಬಳಿಕ ಹೇಳಿದನು: "ಮರಣಕ್ಕೆ ಹೆದರುವುದೇ ಈ ಎಲ್ಲ ವಿಕಾರಗಳ ಕಾರಣ. ಜನರು ಭಾವಿಸುವಂತೆ ಜೀವನ ಮರಣಗಳು ಪರಸ್ಪರ ಶತೃಗಳಲ್ಲ. ಒಂದಕ್ಕೊಂದು ಪೂರಕ. ಜೀವನದಿಂದ ಮರಣ, ಮರಣದಿಂದ ಜೀವನ. ಒಂದೇ ಬಾಳಿನ ಎರಡು ಧೃವಗಳು ಅವು. ಇದನ್ನು ತಿಳಿದುಕೊಳ್ಳಲಾರದೆ ನಾವು ಮೃತ್ಯುವನ್ನು ಶತೃವೆಂದು ಭಾವಿಸಿ, ಅದರಿಂದ ತಪ್ಪಿಸಿಕೊಂಡು ಸಾಧ್ಯವಿದ್ದಷ್ಟು ಕಾಲ ಬದುಕಿರಲು ಹವಣಿಸುತ್ತೇವೆ. ನಮ್ಮ ಅವಿವೇಕದ ಫಲವಾಗಿ ಮಿತ್ರನಂತೆ ಸಹಜವಾಗಿ ಬರಬೇಕಾದ ಮೃತ್ಯು, ಶತೃವಿನಂತೆ ಬಂದು ಆಕ್ರಮಣ ನಡೆಸಬೇಕಾಗುತ್ತದೆ. ಹುಟ್ಟಿದವನು ಸಾಯಲೇಬೇಕು. ಅದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಲ್ಲ, ಎಂದು ತಿಳಿದಾಗ ಸಾವಿನ ಭಯವಳಿದು, ಮೃತ್ಯವನ್ನು ಮಿತ್ರನಂತೆ ಆದರದಿಂದ ಸ್ವಾಗತಿಸಲು ಶಕ್ತರಾಗುತ್ತೇವೆ. ಇಂತಹ ಸುಖೀಮೃತ್ಯುವಿಗೆ ಮಾನವನನ್ನು ಸಿದ್ಧಗೊಳಿಸುವುದು ಶರಣಧರ್ಮದ ಮಹೋದ್ದೇಶಗಳಲ್ಲೊಂದು."

"ಧನ್ಯರು ನೀವು ಒಡೆಯರೆ!" ಎಂದು ಹೇಳಿ ಜವರಾಯ ಮಧುವರಸನ ಮೇಲೆ ಭಕ್ತಿ ಗೌರವಗಳ ದೃಷ್ಟಿ ಬೀರಿ, ಕೆಲವು ಕ್ಷಣಗಳ ಅನಂತರ "ಯಾರಾದರೂ ಬಂಧುಗಳನ್ನು ನೋಡಲಿಚ್ಛಿಸುವರೇ ನಿನ್ನ ಬಂಧಿ? ಎಂದು ಕೇಳುತ್ತಾರೆ ಸೆರೆಮನೆಯ ಅಧಿಕಾರಿ. ಅವರಿಗೆ ಏನು ಉತ್ತರ ಹೇಳಲಿ?" ಎಂದು ಪ್ರಶ್ನಿಸಿದನು.

"ಮೃತ್ಯು ಸನ್ನಿಹಿತವಾದಾಗ ನಮಗೆ ನಾವೇ ಬಂಧುಗಳು, ಜವರಾಯ. ನಾನಾಗಿ ಯಾರನ್ನೂ ನೋಡಲಿಚ್ಛಿಸುವುದಿಲ್ಲ. ತಾವಾಗಿ ಯಾರಾದರೂ ಬಂದರೆ ಬೇಡವೆನ್ನುವುದಿಲ್ಲ. ಅಧಿಕಾರಿಗೆ ಇದನ್ನು ತಿಳಿಸು." -ಒಂದು ಕ್ಷಣವೂ ಯೋಚಿಸದೆ ಮಧುವರಸ ಉತ್ತರ ಕೊಟ್ಟನು.