ಪುಟ:ಕ್ರಾಂತಿ ಕಲ್ಯಾಣ.pdf/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೯೭

ಜವರಾಯ ಕೈ ಮುಗಿದು ಹೇಳಿದನು: "ನೀವು ಮಹಾನುಭಾವರು ಅಣ್ಣನವರೆ, ದಶಗಣದ ಸಿಂಗಿರಾಜರು ಹೇಳುತ್ತಿದ್ದರು,-ಮರಣಕ್ಕೆ ಸಿದ್ಧರಾದವರು ಬಂಧುಗಳನ್ನು ನೋಡುವುದರಿಂದ ಅವರ ದುಃಖವನ್ನು ಹೆಚ್ಚಿಸುವರು. ತಮ್ಮ ಸಂಕಲ್ಪ ಸಡಿಲವಾಗಲು ಅವಕಾಶ ಕಲ್ಪಿಸುವರು. ಈ ಎರಡು ವಿಪತ್ತುಗಳಿಂದ ಆತ್ಮವನ್ನು ರಕ್ಷಿಸಿಕೊಳ್ಳುವುದು ವಿವೇಕದ ಹಾದಿ' ಎಂದು."

"ಸೆರೆಮನೆಯ ನಿನ್ನ ಅನುಭವ ಅದನ್ನು ದೃಢಪಡಿಸುವುದೇ ಜವರಾಯ?"

"ನಿಸ್ಸಂದೇಹವಾಗಿ ದೃಢಪಡಿಸುತ್ತದೆ, ಒಡೆಯರೆ. ಕೊನೆಗಾಲದಲ್ಲಿ ಬಂಧು ಬಾಂಧವರನ್ನು ನೋಡಿದಾಗ ಮರಣದ ಭೀತಿ ಮರುಕಳಿಸಿ ಸ್ಥೈರ್ಯ ಸಂಕಲ್ಪಗಳು ಮುಗ್ಗುರಿಸುತ್ತವೆ. ಬಂಧುಗಳಿಂದ ಬೀಳ್ಕೊಂಡು ವಧಾಸ್ಥಾನಕ್ಕೆ ಹೋದವರು ಬಿಕ್ಕಿ ಬಿಕ್ಕಿ ಅಳುತ್ತಾ ಕಂಡಕಂಡವರಿಗೆ ಕೈಮುಗಿದು ಪ್ರಾಣಭಿಕ್ಷೆ ಬೇಡುವುದನ್ನು ನೋಡಿದ್ದೇನೆ. ಈಗ ಒಡೆಯರು ದಯಮಾಡಿ ಸಂಗಡ ಬಂದರೆ ಕಮ್ಮಾರ ಶಾಲೆಗೆ ಕರೆದುಕೊಂಡು ಹೋಗುತ್ತೇನೆ," -ಎಂದು ಜವರಾಯ ಮಧುವರಸನನ್ನು ಅಲ್ಲಿಂದ ಕರೆದುಕೊಂಡು ಸೆರೆಮನೆಯ ಮೇಲಿನ ಅಂಗಣಕ್ಕೆ ಹೋದನು. ಅಲ್ಲಿ ಕಮ್ಮಾರರು ಅಂದೇ ಬಂದ ಇಬ್ಬರು ಬಂಧಿಗಳಿಗೆ ಸಂಕಲೆ ತೊಡಿಸುತ್ತಿದ್ದರು. ಆ ಕಾರ್ಯ ಮುಗಿದ ಕೂಡಲೆ ಅವರು ಪಶುವೊಂದಕ್ಕೆ ಗೊಲಸು ಕಟ್ಟುವಂತೆ ನಿರ್ಲಿಪ್ತಭಾವದಿಂದ, ಮಧುವರಸನನ್ನು ಹಿಂದಕ್ಕೆ ಮುಂದಕ್ಕೆ ನಿಲ್ಲಿಸಿ ಸಂಕಲೆಗಳನ್ನು ತೆಗೆದರು. ಮಧುವರಸನು ಯಾರು? ಏತಕ್ಕಾಗಿ ಅವನನ್ನು ಸೆರೆಮನೆಗೆ ಕಳುಹಿಸಿದ್ದಾರೆ? ಇಂದು ಸಂಕಲೆಗಳನ್ನು ತೆಗೆದ ಉದ್ದೇಶವೇನು? ಈ ವಿಚಾರಗಳಲ್ಲಿ ಅವರಿಗೆ ಯಾವ ಆಸಕ್ತಿಯೂ ಇರಲಿಲ್ಲ.

ಬಂಧವಿಮುಕ್ತವಾದ ಹಕ್ಕಿ ಗರಿಗೆದರಿ ಗಗನಕ್ಕೆ ಹಾರುವಂತೆ ಮಧುವರಸ, ಹಗುರವಾದ ಹೆಜ್ಜೆಗಳಿಂದ ಪಾವಟಿಗೆಗಳನ್ನು ಇಳಿದು ಪುನಃ ನೆಲೆಮನೆ ಸೇರಿದನು. ಅಲ್ಲಿಯೇ ಒಂದು ಕಡೆ ಸ್ನಾನಕ್ಕಾಗಿ ಬೇರ್ಪಡಿಸಿದ್ದ ಸ್ಥಳದಲ್ಲಿ ಸ್ನಾನಮಾಡಿ ಮಡಿಬಟ್ಟೆಗಳನ್ನುಟ್ಟು, ಇನ್ನೊಂದು ಮೂಲೆಯಲ್ಲಿ ತೃಣಾಸನವನ್ನು ಹರಡಿ ಪೂಜೆಗೆ ಕುಳಿತನು. ಪೂಜೆಗೆ ಬೇಕಾದ ಉಪಕರಣಗಳೊಂದೂ ಇಲ್ಲದಿದ್ದರೂ ಎಂದಿನಂತೆ ಜವರಾಯ ಹೊಸಕುಡಿಕೆಯಲ್ಲಿ ನೀರನ್ನೂ ಎಲೆಯ ಸಂಪುಟದಲ್ಲಿ ಅಂದೇ ತಿರಿದ ಹೂವು ಬಿಲ್ವದಳಗಳನ್ನೂ ಸಿದ್ಧಪಡಿಸಿದ್ದನು.

ಪೂಜಾರಂಭಮಾಡಿ ಲಿಂಗದೇವನನ್ನು ಕರಸ್ಥಲದಲ್ಲಿ ಪ್ರತಿಷ್ಠಿಸಿ ಏಕಾಗ್ರಚಿತ್ತದಿಂದ ಧ್ಯಾನಮಗ್ನನಾದ ಮಧುವರಸನು ಮಧ್ಯಾಹ್ನವಾಗಿ ಮಹಮನೆಯಿಂದ ತಿಂಡಿಯ ಪೊಟ್ಟಣಗಳು ಬಂದಾಗಲೂ ಏಳಲಿಲ್ಲ. ಜವರಾಯ ಎಚ್ಚರಿಸುವ ಪ್ರಯತ್ನವನ್ನೂ ಮಾಡಿರಲಿಲ್ಲ.