ಪುಟ:ಕ್ರಾಂತಿ ಕಲ್ಯಾಣ.pdf/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೮

ಕ್ರಾಂತಿ ಕಲ್ಯಾಣ

ಅಪರಾಹ್ನ ಮೊದಲ ಜಾವ ಮುಗಿಯುತ್ತಿದ್ದಂತೆ ಮಧುವರಸನು ಕಣ್ತೆರೆದು ಪೂಜೆ ಮುಗಿಸಿ ಕೂಗಿದಾಗ, ಬಾಗಿಲಲ್ಲಿ ತೂಕಡಿಸುತ್ತ ಕುಳಿತಿದ್ದ ಜವರಾಯ ಒಳಗೆ ಬಂದು ಕೈಜೋಡಿಸಿ ನಿಂತನು.

"ಎಷ್ಟು ಹೊತ್ತಾಗಿದೆ, ಜವರಾಯ? ನನಗಾಗಿ ಭಟರು ಬಂದರೆ?"—ಮಧುವರಸ ಕೇಳಿದನು.

"ಒಡೆಯರು ಎದ್ದು ಆರೋಗಣೆ ಮುಗಿಸಿ, ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡರೆ ಒಳಿತು. ಭಟರ ವಿಚಾರ ನನಗೆ ತಿಳಿಯದು," -ಎಂದು ಜವರಾಯ ಪೊಟ್ಟಣಗಳನ್ನು ಮುಂದಿಟ್ಟನು.

"ಚೆನ್ನಬಸವಣ್ಣನವರು ನನ್ನನ್ನು ಮರೆತಿಲ್ಲ. ಅವರು ಕಳುಹಿಸುತ್ತಿರುವ ಈ ಪ್ರಸಾದವೇ ಅದಕ್ಕೆ ಸಾಕ್ಷಿ," -ಎಂದು ಮಧುವರಸ ಉಣಲು ಪ್ರಾರಂಭಿಸಿದಂತೆ ಜವರಾಯ ಮೆಚ್ಚುಗೆಯ ಆವೇಗದಿಂದ, "ಶರಣರ ನುಡಿಚೆನ್ನ, ನಡೆಚೆನ್ನ, ಅವರು ಮಾಡುವುದೆಲ್ಲ ಚೆನ್ನ. ಅದು ಕಾರಣ ಹೊರಗಿನ ಆ ಹುಚ್ಚು ಜಗತ್ತಿನಲ್ಲಿ ಅವರಿಗೆ ಇಷ್ಟೆಲ್ಲ ಬವಣೆ ಆಗುತ್ತಿರುವುದು!" ಎಂದು ಉದ್ಗಾರ ತೆಗೆದನು.

"ಶರಣರ ಅನಪೇಕ್ಷೆಯೇ ಅವರ ವರ್ತನೆ ಚೆನ್ನಾಗಲು ಕಾರಣ, ಜವರಾಯ. 'ತ್ಯಕ್ತೇನ ಭೂಂಜೀಥ" ಎಂದು ಉಪನಿಷತ್ತು ಹೇಳುತ್ತದೆ. ನಾವು ಕರ್ಮಠರಾಗಿ ಮರೆತಿದ್ದ ಆ ಸತ್ಯವನ್ನು ಶರಣಧರ್ಮ ಪುನಃ ನೆನಪಿಗೆ ತಂದಿದೆ. ನಾಲ್ಕು ವಾರಗಳ ಸೆರೆಮನೆಯ ವಾಸದಿಂದ ನನಗೆ ಅದರ ಅರಿವಾಯಿತು." -ಮಧುವರಸನು ಊಟ ಮುಗಿಸಿ ಹೇಳಿದನು.

ಆಮೇಲೆ ಬಹಳ ಹೊತ್ತು ಅವನು ಸರೆಮನೆಯ ಮಂಚದ ಮೇಲೆ ಮಲಗಿ ವಿಶ್ರಮಿಸಿಕೊಂಡು ಸಂಜೆಯಾಗುತ್ತಿದ್ದಂತೆ ಜವರಾಯನನ್ನು ಕರೆದು, "ನಿನ್ನಿಂದ ನನಗೊಂದು ಉಪಕಾರವಾಗಬೇಕಾಗಿದೆ. ಮಾಡುವೆಯಾ?" ಎಂದು ಕೇಳಿದನು.

"ಮಾಡುತ್ತೇನೆ, ಒಡೆಯರೆ -ಆದರೆ ಸೆರೆಮನೆಯ ನಿಬಂಧನೆಗಳಿಗೆ ಹೊರತಲ್ಲದಿದ್ದರೆ ಮಾತ್ರ."

"ನಿಬಂಧನೆಗಳು ಎಷ್ಟೇ ಉತ್ತಮವಾಗಿರಲಿ, ಅನಿವಾರ್ಯವಾಗಿರಲಿ, ಎಲ್ಲಕಾಲ ಎಲ್ಲದೇಶಗಳಿಗೆ ಏಕಪ್ರಕಾರವಾಗಿ ಸಲ್ಲುವುದಿಲ್ಲ. ವಿಶೇಷ ಸಂದರ್ಭಗಳಲ್ಲಿ ನಾವು ನಿಬಂಧನೆಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಬೇಕಾಗುತ್ತದೆ."

"ಒಡೆಯರ ಆಜ್ಞೆ. ನಿಬಂಧನೆಗೆ ಹೊರತಾದರೂ ಸರಿ, ಮಾಡುತ್ತೇನೆ."

ಮಧುವರಸ ಹೇಳಿದನು: "ಶರಣರಿಗೆ ನನ್ನ ಕೊನೆಯ ಸಂದೇಶವೊಂದಿದೆ. ಶೂಲದ ಮರದಡಿಯಲ್ಲಿ ನಿಂತು ನೆರೆದ ಪ್ರಜಾವರ್ಗಕ್ಕೆ ಅದನ್ನು ಹೇಳಬೇಕೆಂದಿದ್ದೆ.