ಪುಟ:ಕ್ರಾಂತಿ ಕಲ್ಯಾಣ.pdf/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೯೯

ಮಾನವನು ದಾನವವಾದಾಗ

ಅಂತಹ ಅವಕಾಶ ದೊರಕುವುದೋ ಇಲ್ಲವೋ ಎಂದು ಈಗ ಸಂದೇಹವಾಗುತ್ತಿದೆ.
ನೀನು ಈ ಸಂದೇಶವನ್ನು ನನ್ನ ನುಡಿಗಳಲ್ಲಿಯೇ ಶರಣರಿಗೆ ಮುಟ್ಟಿಸಬೇಕು. ಆ
ಕಾರ್ಯ ನಿನ್ನಿಂದಾಗುವುದೆ?
“ಆಗುತ್ತದೆ, ಒಡೆಯರೆ,” -ಜವರಾಯ ದೃಢಕಂಠದಿಂದ ಹೇಳಿದನು.
“ಹಾಗಾದರೆ ಮನಮುಟ್ಟಿ ಕೇಳು,” ಎಂದು ಮಧುವರಸ ದನಿ ತಗ್ಗಿಸಿ,
ಬಿಡಿಸಿ ಬಿಡಿಸಿ, ನಿಧಾನವಾಗಿ ಹೇಳಿದನು.
“ಶರಣರ ಅಗ್ನಿಪರೀಕ್ಷೆ ಆರಂಭವಾಗಿದೆ. ಅದಕ್ಕಾಗಿ ಬಿಜ್ಜಳರಾಯರು
ಯಾಗಶಾಲೆ ರಚಿಸಿದ್ದಾರೆ. ಸಮಿಧೆ ಸಂಗ್ರಹಿಸಲ್ಪಟ್ಟಿದೆ. ಬಲಿಪೀಠ ಸಿದ್ಧವಾಗಿದೆ.
ಅಭಿಚಾರದ ಮಂತ್ರಘೋಷ ಆರಂಭವಾಗಿ ಯಜ್ಞಕುಂಡದಲ್ಲಿ ಅಗ್ನಿ ಪ್ರಜ್ವಲಿಸುತ್ತಿದೆ.
ಮುಂದೆ ನಡೆಯಲಿರುವ ದಯಾಶೂನ್ಯವಾದ ಧರ್ಮವರ್ಜಿತವಾದ ದಬ್ಬಾಳಿಕೆಯಿಂದ
ಶರಣರನ್ನು ರಕ್ಷಿಸಲು ಭಕ್ತಿ ಪ್ರಧಾನವಾದ ಶರಣಧರ್ಮದಲ್ಲಿ ವೀರತ್ವವನ್ನು
ಮೂಡಿಸಲು ನಾವು ಪಣತೊಡಬೇಕು. ಶರಣರು ವೀರರಾಗಬೇಕು. ಶರಣಶೈವಧರ್ಮ
ವೀರಶೈವಧರ್ಮವಾಗಬೇಕು. ಆತ್ಮಧರ್ಮಗಳ ರಕ್ಷಣೆಗಾಗಿ ಅಸ್ತ್ರ ಧರಿಸುವುದು
ಶರಣರ ಅಹಿಂಸಾವಾದಕ್ಕೆ ಪ್ರತಿವಾದಿಯಲ್ಲ. ಆತ್ರೋದ್ದಾರಕ್ಕಾಗಿ, ತನ್ನ ಮನೆ ಮಠ
ಮಡದಿ ಮಕ್ಕಳ ರಕ್ಷಣೆಗಾಗಿ, ಅಸ್ತ್ರ ಧರಿಸುವುದನ್ನು ಶರಣಧರ್ಮ ನಿಷೇಧಿಸಲಾಗದು.
ಬಲಪಂಯೋಗ ವನ್ನು ಬಲಪ್ರಯೋಗದಿಂದ ಎದುರಿಸುವುದು
ಮಾನವಧರ್ಮವೆಂಬುದನ್ನು ಶರಣರು ಅರಿಯಲಿ. ಶಿವಂ ಭೂಯಾತ್.”
ನಾಲ್ಕಾರು ಸಾರಿ ಹೇಳಿದ ಮೇಲೆ ಜವರಾಯನಿಗೆ ಸಂದೇಶವು ಪೂರ್ಣವಾಗಿ
ಕಂಠಗತವಾಯಿತು
. ಆಮೇಲೆ ಮಧುವರಸನು ಕೈಕಾಲುಗಳನ್ನು ತೊಳೆದು, ಜವರಾಯ
ತಂದುಕೊಟ್ಟ ಹಾಲು ಕುಡಿದು ಮಲಗಿ ಹೊದಿಕೆಯನ್ನು ತಲೆ ಮುಚ್ಚುವಂತೆ
ಮೇಲೆಳೆದುಕೊಂಡನು. ಜವರಾಯ ಸಂದೇಶದ ನುಡಿಗಳನ್ನು ನೆನಪಿಸಿಕೊಳ್ಳುತ್ತ
ಬಾಗಿಲಲ್ಲಿ ಕುಳಿತನು.
ಪ್ರಹರಗಳು ಕಳೆದವು. ಸೆರೆಮನೆಯ ಆ ಭಾಗವೆಲ್ಲ ನೀರವ, ನಿಸ್ತಬ್ಧ .
ಅರ್ಧರಾತ್ರಿ ಮುಗಿದು ಸ್ವಲ್ಪ ಹೊತ್ತಿನ ಮೇಲೆ ಸೆರೆಮನೆಯ ಮೇಲಿನ ಅಂಗಣದಲ್ಲಿ
ಹೆಜ್ಜೆಯ ಸಪ್ಪಳ ಕೇಳಿ ಜವರಾಯ ಎದ್ದು ನಿಂತನು.

ಪಂಜುಗಳನ್ನು ಹಿಡಿದು ನಾಲ್ವರು ಭಟರೊಡನೆ ಧರ್ಮಾಧಿಕರಣದ

ಅಧಿಕಾರಿಯೊಬ್ಬನು ಅಲ್ಲಿಗೆ ಬಂದು, ಸಲಿಕೆಯ ಆಜ್ಞಾಪತ್ರವನ್ನು ಜವರಾಯನಿಗೆ
ಕೊಟ್ಟು “ಬಂಧಿಯನ್ನು ನಮಗೊಪ್ಪಿಸಿರಿ,” ಎಂದನು.