ಪುಟ:ಕ್ರಾಂತಿ ಕಲ್ಯಾಣ.pdf/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೦೦

ಕ್ರಾಂತಿ ಕಲ್ಯಾಣ


ಅವರು ಸೆರೆಮನೆಗೆ ಹೋದಾಗ ಮಧುವರಸನು ಮಂಚದಿಂದೆದ್ದು ನಿಂತು ಉಡಿಗೆ ತೊಡಿಗೆಗಳನ್ನು ಸರಿಪಡಿಸಿಕೊಳ್ಳುತ್ತಿದ್ದನು. ನಿರ್ಲಿಪ್ತತೆಯ ಗಂಭೀರ ಶಾಂತಿ ಅವನ ಚಹರೆಯಂತೆ ಒಂದೊಂದು ಚಲನೆಯಲ್ಲಿಯೂ ಎದ್ದು ಕಾಣುತ್ತಿತ್ತು.

ಭಟರು ಹಗ್ಗಗಳಿಂದ ಮಧುವರಸನ ಕೈಗಳನ್ನು ಹಿಂದಕ್ಕೆಳೆದು ಕಟ್ಟಿ ಹೊರಗೆ ಕರೆದುಕೊಂಡು ಹೋಗುತ್ತಿದ್ದಂತೆ ಜವರಾಯ ನೀರವವಾಗಿ ಕಣ್ಣೀರಿಡುತ್ತ ಮಧುವರಸನ ಕಾಲುಗಳ ಮೇಲೆ ಬಿದ್ದನು. ಆ ಕರ್ತವ್ಯನಿಷ್ಠ ವೃದ್ಧ ಕಾವಲುಗಾರನ ವಿಚಿತ್ರ ಆವೇಗ ಉದ್ವೇಗಗಳ ಪರಿಚಯವಿದ್ದ ಭಟರು ನಿಷೇಧಿಸಲಿಲ್ಲ.

ರಾಜಬೀದಿಗೆದುರಾಗಿ ಸೆರೆಮನೆಯ ಅಂಗಣದಲ್ಲಿ ಮುಚ್ಚಿದ ರಥವೊಂದು ನಿಂತಿತ್ತು. ಎಂಟು ಮಂದಿ ಸೈನಿಕರು ರಥದ ಸುತ್ತ ಕಾವಲಿದ್ದರು. ಭಟರು ಮಧುವರಸನನ್ನು ರಥದಲ್ಲಿ ಕುಳ್ಳಿರಿಸಿ ಬಾಗಿಲನ್ನು ಬಂಧಿಸಿದರು. ರಥ ಬರಮಪ್ಪನ ಗುಡ್ಡದಡಿಯ ವಧಾಸ್ಥಾನವನ್ನು ಸೇರಿದಾಗ ರಾತ್ರಿ ಮೂರನೆಯ ಪ್ರಹರ ಮುಗಿದ ಗಂಟೆ ಹೊಡೆಯಿತು. ಶೂಲದ ಮರದ ಸುತ್ತ ಪಂಜುಗಳು ಉರಿಯುತ್ತಿದ್ದವು. ಸೈನಿಕರು ಪಹರೆ ಕೊಡುತ್ತಿದ್ದರು. ವಧಕರು ಸಿದ್ದರಾಗಿ ನಿಂತಿದ್ದರು.

ಭಟರು ರಥದ ಬಾಗಿಲು ತೆರೆದು ಮಧುವರಸನನ್ನು ಕೆಳಗಿಳಿಸಿ ಶೂಲದ ಮರದ ಬಳಿಗೆ ಕರೆದುಕೊಂಡು ಹೋಗುತ್ತಿದ್ದಂತೆ ಎರಡು ಕುದುರೆಗಳ ಸುಸಜ್ಜಿತ ರಥವೊಂದು ಅಲ್ಲಿಗೆ ಬಂದಿತು. ಮಾಧವ ದಂಡನಾಯಕನೂ, ಮುಖವಾಡ ಹಾಕಿಕೊಂಡಿದ್ದ ಇನ್ನೊಬ್ಬ ಯೋಧನೂ ರಥದಿಂದ ಇಳಿದರು.

ತನ್ನಂತೆ ಕೈಗಳನ್ನು ಹಿಂದಕ್ಕೆ ಕಟ್ಟಿದ್ದ ಇನ್ನೊಬ್ಬ ಬಂಧಿ ಶೂಲದ ಮರದಡಿ ನಿಂತಿರುವುದನ್ನು ಕಂಡು ಮಧುವರಸನು ಚಕಿತನಾದನು. ಪಂಜುಗಳ ಬೆಳಕಿನಲ್ಲಿ ಬಂಧಿ ಹರಳಯ್ಯನೆಂದು ತಿಳಿಯಲು ಹೆಚ್ಚು ಹೊತ್ತಾಗಲಿಲ್ಲ.

“ಶರಣು ಶರಣಾರ್ಥಿ, ಹರಳಯ್ಯನವರೆ. ನಿಮ್ಮ ಈ ಬವಣೆಗೆ ಕಾರಣನಾದ ನನ್ನನ್ನು ಕ್ಷಮಿಸಿರಿ,” -ಎಂದು ಹೇಳುತ್ತಾ, ಮಧುವರಸ ಕ್ಷಮಾಯಾಚನೆಗಾಗಿ ತಲೆಬಾಗಿದನು.

ಗರಬಡಿದಂತೆ ನಿಶ್ಚೇಷ್ಟನಾಗಿ ನಿಂತಿದ್ದ ಹರಳಯ್ಯ ಮಧುವರಸನನ್ನು ಗುರುತಿಸಲು ಕೆಲವು ಕ್ಷಣಗಳಾದವು. ಆಗ ಅವನು ದುಃಖಾವೇಗದಿಂದ ನಿಟ್ಟುಸಿರಿಟ್ಟು ಗದ್ಗದ ಕಂಠದಿಂದ, “ಒಂದು ಸಾರಿ ನಿಮ್ಮನ್ನು ನೋಡಬೇಕೆಂದು ಹಾರೈಸುತ್ತಿದ್ದೆ. ಶಿವನು ಕರುಣಿಸಿದನು. ಇನ್ನು ಸಮಾಧಾನದಿಂದ ಸಾಯುವೆ,” ಎಂದು ಹೇಳುತ್ತ ಮಧುವರಸನಿಗೆ ತಲೆಬಾಗಿ ವಂದನೆ ಸಲ್ಲಿಸಿದನು. ಮುಖದಲ್ಲಿ ಕಣ್ಣೀರು ಧಾರೆಯಾಗಿ ಹರಿಯುತ್ತಿತ್ತು.