ಪುಟ:ಕ್ರಾಂತಿ ಕಲ್ಯಾಣ.pdf/೩೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಮಾನವನು ದಾನವನಾದಾಗ ೩೦೧ “ಚಿಂತಿಸಬೇಡಿರಿ ಹರಳಯ್ಯನವರೆ. ಈ ಮಹಾಪ್ರಸ್ಥಾನದಲ್ಲಿ ನಾನು ನಿಮ್ಮ ಸಹಯಾತ್ರಿ !” -ಎಂದು ಮಧುವರಸನು ಅವನನ್ನು ಸಂತೈಸಿದನು. ವಧಕರು ಅವರನ್ನು ಬೇರ್ಪಡಿಸಿ ಶೂಲದ ಮರದಡಿಯಲ್ಲಿ ನಿಲ್ಲಿಸಿದರು. ಕುಣಿಕೆ ಹಾಕಿದ ಎರಡು ಹಗ್ಗಗಳು ಮರದ ಮುಡಿಗಂಬದಿಂದ ಜೋತು ಕೆಳಗೆ ಬಿದ್ದಿದ್ದವು, ಯೂಪಸ್ತಂಭಕ್ಕೆ ಕಟ್ಟಿದ ಜೊಂಡುಹುಲ್ಲಿನ ಹಗ್ಗಗಳಂತೆ. ಹಗ್ಗದ ಕೊನೆಗಳನ್ನು ಮರದ ಹಿಂದೆ ನಿಂತಿದ್ದ ಭಟರು ಹಿಡಿದಿದ್ದರು. ವಧಕರು ಕುಣಿಕೆಗಳನ್ನು ಕೊರಳಿಗೆ ಹಾಕಿದಾಗ ಹರಳಯ್ಯ ಮೂರ್ಛ ಹೋದನು. ಮಧುವರಸ ಹತ್ತಿರ ಸರಿದು ಕಿವಿಯಲ್ಲಿ ಷಡಕ್ಷರ ಮಂತ್ರವನ್ನು ಪಠಿಸಿದಾಗ ಹರಳಯ್ಯ ಎಚ್ಚೆತ್ತನು. ಕೆಲವು ಕ್ಷಣಗಳ ಮೇಲೆ ಅವನು ತಲೆಯೆತ್ತಿ, ಸೆಟೆದು ನಿಂತು ಮಧುವರಸನೊಡನೆ ದನಿಗೂಡಿಸಿ ತಾನೂ ಹೇಳಿದನು : 'ಓಂ ನಮಃ ಶಿವಾಯ' ಎಂದು. ಇರುಳ ಗಂಭೀರ ಶಾಂತಿಯಲ್ಲಿ ಆ ಮಂತ್ರರಾಜದ ಅಮೃತಾಕ್ಷರಗಳು ಗಾಳಿಯಲ್ಲಿ ಅರಳಿದ ಶಬ್ದರೂಪವಾದ ಹೂವುಗಳಂತೆ ವಧಾಸ್ಥಾನವನ್ನು ಶಬ್ದಮಯವಾಗಿ ಮಾಡಿದವು. ವಧಕರು, ಭಟರು, ಸೈನಿಕರು, ಪಂಜಿನವರು, ಕೇಳುತ್ತ ಮಂತ್ರಮುಗ್ಧರಂತೆ ಸ್ತಬ್ಧರಾಗಿ ನಿಂತರು. ಪಿಸುದನಿಯಲ್ಲಿ ಪ್ರಾರಂಭವಾದ ಮಂತ್ರಪಠನೆ ಕೆಲವೇ ಕ್ಷಣಗಳಲ್ಲಿ ಘೋಷಣೆ ಯಾಗಿ ಗಾಳಿಯಲ್ಲಿ ಹರಡಿ ದೂರದಲ್ಲಿ ನಿಂತಿದ್ದ ಮಾಧವ ದಂಡನಾಯಕನ, ಮುಖವಾಡ ಹಾಕಿಕೊಂಡಿದ್ದ ಅವನ ಗೆಳೆಯನ ಕಿವಿಗಳಿಗೆ ಮುಟ್ಟಿದವು. - ಅಸಹನೆ ಆಕ್ರೋಶಗಳಿಂದ ಅವರು ತಳಮಳಿಸಿದರು. ಮುಖವಾಡ ಧರಿಸಿದ್ದ ಯೋಧನು ಸಿಟ್ಟಿಗೆದ್ದ ಸಿಂಹದಂತೆ ಹೂಂಕಾರಮಾಡಿ ಹತ್ತಿರಿದ್ದ ಭಟನ ಕೈಯಿಂದ ಪಂಜನ್ನು ತೆಗೆದುಕೊಂಡು ಮೊದಲೇ ಗೊತ್ತಾಗಿದ್ದ ಸಂಕೇತದಂತೆ ಮೇಲಿಂದ ಕೆಳಗೆ ಆಡಿಸಿದನು. - ಆಜ್ಞಾರೂಪವಾದ ಆ ಸಂಕೇತಕ್ಕಾಗಿ ಕಾಯುತ್ತಿದ್ದ ಭಟರು ನೇಣಿನ ಹಗ್ಗಗಳನ್ನು ಮೇಲಕ್ಕೆಳೆದರು. ಮಂತ್ರಘೋಷ ತಟ್ಟನೆ ನಿಂತಿತು. ಕಾವಲಿದ್ದ ಸೈನಿಕರು ತಲೆಯೆತ್ತಿ ನೋಡಿದಾಗ ಶೂಲದ ಮರದಿಂದ ಎರಡು ದೇಹಗಳು ನೇತಾಡುತ್ತಿದ್ದವು. ವಧಾಸ್ಥಾನದಲ್ಲಿ ಗಂಭೀರ ಶಾಂತಿ ! ನಿಸ್ತಬ್ದ ಮೌನ ! ಸೈನಿಕರು, ಭಟರು, ವಧಕರು, ಮತ್ತೊಂದು ಮಹಾಘೋರಕ್ಕಾಗಿ ಕಾಯುತ್ತಿದ್ದರು. ಮಾಧವ ದಂಡನಾಯಕನು ಕೈಕಟ್ಟಿ ಗಂಭೀರವಾಗಿ ನಿಂತಿದ್ದನು. ಮಖವಾಡ ಹಾಕಿಕೊಂಡಿದ್ದ ಯೋಧನು ವಿಚಲಿತನಾಗಿ ಶತಪಥ ತಿರುಗಾಡುತ್ತಿದ್ದನು.