ಪುಟ:ಕ್ರಾಂತಿ ಕಲ್ಯಾಣ.pdf/೩೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೩೨ ಕ್ರಾಂತಿ ಕಲ್ಯಾಣ ಅರ್ಧ ಗಳಿಗೆಯ ಅನಂತರ ಸೆರೆಮನೆಯ ಇನ್ನೊಂದು ಮುಚ್ಚುಗಾಡಿ ಭಟರ ರಕ್ಷಣೆಯಲ್ಲಿ ಅಲ್ಲಿಗೆ ಬಂದಿತು. ಭಟರು ಬಾಗಿಲನ್ನು ತೆರೆದು ಶೀಲವಂತನನ್ನು ಕೆಳಗಿಳಿಸಿದರು. ಅವನ ಕೈಗಳನ್ನು ಹಿಂದಕ್ಕೆ ಎಳೆದು ಕಟ್ಟಿತ್ತು. ಧರ್ಮಾಧಿಕರಣದ ವಿಧಿಯಂತೆ ದಂಡಾಜೆ ಶೀಲವಂತನಿಗೆ ಪ್ರಚಾರವಾಗಿರಲಿಲ್ಲ. ತನನ್ನು ಎಲ್ಲಿಗೆ, ಏತಕ್ಕಾಗಿ ಕರೆದುಕೊಂಡು ಬಂದರೆಂಬುದು ಅವನಿಗೆ ತಿಳಿಯದು. ಭಟರು ಅವನನ್ನು ವೇದಿಕೆಯ ಬಳಿ ಕರೆದುಕೊಂಡುಹೋದಾಗ, ಶೂಲದ ಮರದಿಂದ ಎರಡು ದೇಹಗಳು ಜೋತು ಬಿದ್ದಿರುವುದನ್ನು ಕಂಡು ಅವನಿಗೆ ವಾಸ್ತವದ ಅರಿವಾಯಿತು. ಶೂಲಕ್ಕೇರಿಸಲ್ಪಟ್ಟವರು ಹರಳಯ್ಯ ಮಧುವರಸರೆಂದು ತಿಳಿದು, ತಲೆಬಾಗಿ ವಂದಿಸಿದನು. ಕಣ್ಣೀರು ಧಾರೆಯಾಗಿ ಸುರಿಯುತ್ತಿತ್ತು. ಕೆಲವು ಕ್ಷಣಗಳ ನಂತರ ಅವನು ತಲೆಯೆತ್ತಿ ಶೂಲದ ಮರದಿಂದ ಜೋತಾಡುತ್ತಿದ್ದ ದೇಹಗಳನ್ನು ಏಕಾಗ್ರದೃಷ್ಟಿಯಿಂದ ನೋಡುತ್ತಿದ್ದಂತೆ ಒಂದು ಅದ್ಭುತ ನಡೆಯಿತು. ಗಾಳಿಯಿಂದ ದೇಹಗಳು ಅಲುಗಿದವು. ವಾಯುಮಂಡಲದಲ್ಲಿ ಬೆರೆತಿದ್ದ ಮಂತ್ರಪಠನೆಯ ಅಲೆಯೊಂದು ಚಲಿಸಿ, ಉದ್ವೇಗದಿಂದ ತೀವ್ರತೆ ಪಡೆದಿದ್ದ ಶೀಲವಂತನ ಕಿವಿಗಳಿಗೆ ಅಸ್ಪುಟವಾಗಿ ಕೇಳಿಸಿತು. ಶೀಲವಂತ ಚಮತ್ಕತನಾದನು. ಕಲಾವಂತಿಕೆಯಿಂದ ಸ್ವಚ್ಚವಾಗಿದ್ದ ಅವನ ಪ್ರತಿಭೆಯ ದರ್ಪಣದಲ್ಲಿ ಆ ಶಬ್ದದ ಅಲೆಗಳು ಪ್ರತಿಫಲಿಸಿ ದೊಡ್ಡದಾಗಿ ಷಡಕ್ಷರ ಮಂತ್ರದ ತಾರಕರೂಪ ತಳೆಯಿತು. ಮನಸ್ಸನ್ನು ಏಕಾಗ್ರಗೊಳಿಸಿ ಶೀಲವಂತ ತಾನೂ ಮಂತ್ರವನ್ನು ಪಠಿಸಿದನು. ಆ ಪ್ರದೇಶದಲ್ಲಿ ಆಗ ನೆಲೆಸಿದ್ದ ವಿದ್ಯುತೂರ್ಣವಾದ ಉದ್ರಿಕ್ತ ವಾತಾವರಣದ ಒತ್ತಡದಿಂದ ಕೆಲವೇ ಕ್ಷಣಗಳಲ್ಲಿ ಅವನಿಗೆ ಎಚ್ಚರ ತಪ್ಪಿತು; ಸಮಾಧಿಸ್ಥನಾದಂತೆ ಬಾಹ್ಯಜಗತ್ತಿನೊಡನೆ ಎಲ್ಲ ಸಂಬಂಧಗಳನ್ನೂ ಕಳೆದುಕೊಂಡನು. ಆಮೇಲಿನ ಘಟನೆಗಳು ಅವನ ಅರಿವಿಲ್ಲದೆ ಯಾಂತ್ರಿಕವಾಗಿ ನಡೆದವು. ಭಟರು ಅವನನ್ನು ವಧಾಪೀಠದ ಬಳಿ ಕರೆದುಕೊಂಡು ಹೋಗಿ ವಧಕನಿಗೆ ಒಪ್ಪಿಸಿದರು. ಮುಖವಾಡ ಧರಿಸಿದ್ದ ಯೋಧನು ನಿಂತಿದ್ದ ಸ್ಥಳದಿಂದಲೇ ಮಂಜನಾಡಿಸಿ ಸಂಕೇತದಿಂದ ವಧೆಗೆ ಆಜ್ಞೆ ಮಾಡಿದನು. ಧರ್ಮಾಧಿಕರಣದ ಅಧಿಕಾರಿ ದಂಡಾಜ್ಞೆಯನ್ನು ಓದಿ ಹೇಳಿದನು. ವಧಕನು ಶೀಲವಂತನ ಕೊರಳನ್ನು ವಧಾಪೀಠದ ಮೇಲಿಟ್ಟು ಕತ್ತಿಯ ಒಂದೇ ಏಟಿಗೆ ಮುಂಡದಿಂದ ರುಂಡ ಬೇರೆಯಾಗುವಂತೆ ಹೊಡೆದನು. ತಲೆ ನೆಲಕ್ಕುರುಳಿ ಕೊರಳಿಂದ ಧಾರೆಯಾಗಿ ರಕ್ತ ಹರಿಯಿತು.