ಪುಟ:ಕ್ರಾಂತಿ ಕಲ್ಯಾಣ.pdf/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೩೦೩


ಬಳಿಕ ವಧಕನು ಶೀಲವಂತನ ಬಟ್ಟೆಗಳನ್ನು ಹರಿದು ಬಿಸಾಡಿ, ದಂಡಾಜ್ಞೆಯಲ್ಲಿ ಹೇಳಿದ್ದಂತೆ ದೇಹವನ್ನು ಅರ್ಧಕ್ಕೆ ಸೀಳಿಸಿ ತುಂಡುತುಂಡಾಗಿ ಕತ್ತರಿಸಿ ಪಾರ್ಶ್ವದಲ್ಲಿದ್ದ ಬಿದಿರು ಬುಟ್ಟಿಯೊಳಗೆ ಹಾಕಿದನು. ಕರುಳನ್ನು ಬೇರೆಯಾಗಿ ತೆಗೆದು ತುಂಡುಗಳ ಮೇಲೆಸೆದನು.

ನೆಲದಮೇಲೆ ಬಿದ್ದಿದ್ದ ತಲೆಯನ್ನು ಜುಟ್ಟು ಹಿಡಿದೆತ್ತಿ ಅದಕ್ಕಾಗಿ ಸಿದ್ಧಗೊಳೀಸಿದ್ದ ತಂತಿಯ ಜಾಳಿಗೆಯಲ್ಲಿಟ್ಟು ಕಾದುನಿಂತಿದ್ದ ಅಶ್ವಾರೋಹಿ ಘಟನಿಗೆ ಕೊಟ್ಟನು. ಭಟನು ಅದನ್ನು ಕಲ್ಯಾಣದ ಕೋಟೆಯ ದಕ್ಷಿಣ ಮಹಾದ್ವಾರದ ಮೇಲೆ ಕಟ್ಟಬೇಕಾಗಿತ್ತು.

ಭಟನು ಜಾಳಿಗೆಯನ್ನು ತೆಗೆದುಕೊಂಡು ಒಳಗಿದ್ದ ತಲೆಯ ಕಡೆಗೆ ದೃಷ್ಟಿಹಾಯಿಸಿದನು. ಅದರ ಕಣ್ಣುಗಳು ಚಲಿಸಿ ನೆಟ್ಟದೃಷ್ಟಿಯಿಂದ ತನ್ನನ್ನೇ ನೋಡುತ್ತಿರುವಂತೆ ಕಂಡಿತು. ತುಟಿಗಳು ಅಲುಗಿ ಮಂತ್ರೋಚ್ಛಾರಣೆಯ ಸುಳುಹು ಅಸ್ಫುಟವಾಗಿ ಕೇಳಿಸಿತು. ಭಟನು ಬೆಚ್ಚಿ ಜಾಳಿಗೆಯನ್ನು ಬಟ್ಟೆಯಿಂದ ಮುಚ್ಚಿ,ಕುದುರೆಯ ಮೇಲೆ ಹಾರಿ ಕುಳಿತು ಕಡಿವಾಣಗಳನ್ನು ಸಡಿಲ ಬಿಟ್ಟನು. ಕುದುರೆ ನಾಗಾಲೋಟದಿಂದ ಕೋಟೆಯ ದಕ್ಷಿಣದ ಬಾಗಿಲ ಕಡೆ ಓಡಿತು.

ಚಾಲುಕ್ಯ ಧರ್ಮಾಧಿಕರಣದ ಹೆಸರಿನಲ್ಲಿ ನಡೆದ ಈ ಅಮಾನುಷ ಹತ್ಯೆಯಿಂದ ವಧಾಪೀಠ ರಕ್ತಮಯವಾಗಿತ್ತು. ವಧಕನ ಕೈಕಾಲು ತೋಳುಗಳು ರಕ್ತದಿಂದ ಕೆಂಪಾಗಿದ್ದವು. ವಧೆಯಲ್ಲಿ ಉಪಯೋಗಿಸಿದ ಕತ್ತಿಯನ್ನು ಬಟ್ಟೆಯನ್ನು ಸುತ್ತಿ ಕಂಕುಳಲ್ಲಿ ಇಟ್ಟುಕೊಂಡು, ಮುಖ ಕಾಣದಂತೆ ಹಚ್ಚಡವನ್ನು ಹೊಡೆದು ವಧಕನು ಸದ್ದಿಲ್ಲದೆ ಅಲ್ಲಿಂದ ಸರಿದನು.

ಕಡಿದ ದೇಹದ ತುಂಡುಗಳಿದ್ದ ಬಿದಿರು ಬುಟ್ಟಿಯನ್ನು ಅರಣ್ಯಕ್ಕೊಯ್ದು ನಾಯಿ ನರಿಗಳಿಗೆ ಹಂಚುವುದು ಬೇರೊಬ್ಬ ವಧಕನ ಕಾರ್ಯವಾಗಿತ್ತು.

ಎಂಟು ಜನ ಸೈನಿಕರ ಸಣ್ಣ ದಳವೊಂದನ್ನು ವಧಾಸ್ಥಾನದ ಕಾವಲಿಗೆ ಬಿಟ್ಟು ಮುಖ್ಯಸೈನ್ಯ ದಳಬದ್ಧವಾಗಿ ಆ ಅಭಿಶಪ್ತ ಪ್ರದೇಶವನ್ನು ಬಿಡುತ್ತಿದ್ದಂತೆ ಮಾಧವ ದಂಡನಾಯಕನೂ ಮುಖವಾಡ ಧರಿಸಿದ್ದ ಯೋಧನೂ ರಥವನ್ನು ಹತ್ತಿದರು. ರಥ ಚಲಿಸಿತು.

ಯೋಧನು ಮುಖವಾಡವನ್ನು ತೆಗೆದಿಟ್ಟು ದುಗುಡದ ದನಿಯಿಂದ, “ವೈದಿಕ ವರ್ಣಧರ್ಮದ ರಕ್ಷಣೆಗಾಗಿ ಇಷ್ಟೆಲ್ಲ ಘೋರ ನಡೆಯಬೇಕಾಗಿತ್ತೆ ಎಂದು ಈಗ ನನಗೆ ಸಂದೇಹವಾಗುತ್ತಿದೆ,” ಎಂದು ಹೇಳಿ ನಿಟ್ಟುಸಿರಿಟ್ಟನು.

ಯೋಧನ ಮೇಲೆ ಅನುಕಂಪದ ದೃಷ್ಟಿ ಬೀರಿ ಮಾಧವ ದಂಡನಾಯಕನು, “ರಾಜಪುರೋಹಿತರಾದ ನಿಮಗೆ ಈ ಕಾತರತೆ ಸಲ್ಲದು, ಕ್ರಮಿತರೆ. ಯೋಧ