ಪುಟ:ಕ್ರಾಂತಿ ಕಲ್ಯಾಣ.pdf/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೩೦೫


ಎಂದು ಬಾಗಿಲು ಮುಚ್ಚಿ ಹೊರಗೆ ಹೋದಳು.

ಆರೋಗಣೆಗೆ ಕರೆಯಲು ಪುನಃ ನಾಗಲಾಂಬೆ ಅಲ್ಲಿಗೆ ಬಂದಾಗ, ಲಾವಣ್ಯವತಿ ನಿದ್ದೆ ಮಾಡುತ್ತಿದ್ದಳು. ಎಚ್ಚರಗೊಳಿಸದೆ ದೊಡ್ಡ ಬಟ್ಟಲೊಂದರಲ್ಲಿ ಹಾಲು ತುಂಬಿ ಮಂಚದ ಬಳಿಯಿಟ್ಟು ಹೊರಗೆ ಹೋದಳು.

ಎಲ್ಲ ಕಡೆ ಸೂಚೀಭೇದ್ಯವಾದ ಗಭೀರ ತಮಂಧ. ನಡುವೆ ಪಂಜಿನ ಬೆಳಕಿನಲ್ಲಿ ಕಾಣುತ್ತಿದ್ದ ವಧಾಪೀಠ ರಕ್ತದಿಂದ ಕೆಂಪಾಗಿತ್ತು. ವಧಕನ ಕತ್ತಿಯ ಅಲಗು ಮಿಂಚಿನ ಲತೆಯಂತೆ ಮೇಲಿಂದ ಕೆಳಗೆ, ಕೆಳಗಿಂದ ಮೇಲೆ ಚಲಿಸುತ್ತಿತ್ತು. ವಧಕನು ಕಡಿದು ಕಡಿದು ಬುಟ್ಟಿಯಲ್ಲಿ ತುಂಬುತ್ತಿದ್ದ ಆ ಜಡವಸ್ತುವೇನು? ಕನಸಿನ ಮಾಯಾಲೋಕದಲ್ಲಿ ಅದನ್ನು ಗುರುತಿಸಲು ಅಸಮರ್ಥಳಾಗಿ ಲಾವಣ್ಯವತಿ ತಲೆಯೆತ್ತಿ ನೋಡಿದಳು.

ಮೇಲೆ ಎಲ್ಲ ಕಡೆ ಹರಡಿದ್ದ ಆ ಗಭೀರ ಸೂಚೀಭೇದ್ಯ ತಮಂಧದ ನಡುವೆ ದುಂಡಾದ ವಸ್ತುವೊಂದು ಬೆಳಗುತ್ತ ಕೈಯಾಡಿಸಿ ತನ್ನನ್ನು ಕರೆಯುತ್ತಿರುವಂತೆ ಲಾವಣ್ಯವತಿ ಭಾವಿಸಿದಳು. ಆ ವಸ್ತು ಶೀಲವಂತನ ತಲೆಯೆಂದು ತಿಳಿದಾಗ ಮೈ ನಡುಗಿ, ಹಣೆ ಬೆವರಿ, ತಟ್ಟನೆ ಎಚ್ಚರವಾಯಿತು.

ವಾಸಗೃಹದಲ್ಲಿ ಸಣ್ಣ ದೀಪವೊಂದು ಉರಿಯುತ್ತಿತ್ತು. ಹೊರಗಿನ ತೋಟದಲ್ಲಿ ಇರುಳ ಹಕ್ಕಿಯೊಂದು ಕೂಗಿತು. ಲಾವಣ್ಯವತಿ ಬಾಗಿಲು ತೆರೆದು ನಡುಮನೆ ಮೊಗಶಾಲೆಗಳನ್ನು ಹಾದು ಹೊರಗೆ ಹೋದಳು.

ಎಲ್ಲ ಕಡೆ ನೀರವ, ನಿಸ್ತಬ್ಧ ! ಆಗಿನ ದಿನಗಳಲ್ಲಿ ಕಲ್ಯಾಣದ ಶರಣರಿಗೆ ತೆರೆದ ಬಾಗಿಲ ಅತಿಥಿಶಾಲೆಯಾಗಿದ್ದ ಮಹಮನೆಯಲ್ಲಿ ಯಾರೂ ಎಚ್ಚೆತ್ತಿರಲಿಲ್ಲ.

ತೋಟವನ್ನು ದಾಟಿ ಅವಳು ಮುಚ್ಚಿದ್ದ ಮಹಾದ್ವಾರದ ಪಾರ್ಶ್ವದಲ್ಲಿನ ದಿಡ್ಡಿ ಬಾಗಿಲನ್ನು ತೆರೆದುಕೊಂಡು ರಾಜಮಾರ್ಗದಲ್ಲಿ ನಿಂತಳು. ಆ ಅಂಧಕಾರದಲ್ಲಿ ಎಲ್ಲಿಗೆ ಹೋಗುವುದೆಂಬ ಅರಿವೂ ಅವಳಿಗಿರಲಿಲ್ಲ. ಕನಸಲ್ಲಿ ಕಂಡ ಶೀಲವಂತನ ಶಿರಸ್ಸನ್ನು ಹುಡುಕುತ್ತ, ಅದು ಯಾವ ದಿಸೆಯಲ್ಲಿ ಕಾಣಿಸಿತೆಂದು ಭಾವಿಸಿದ್ದಳೋ ಆ ದಿಸೆಯತ್ತ ನಡೆದಳು.

ಹೀಗೆ ಅವಳು ಮಹಮನೆಯಿಂದ ಹೊರಟು ಅರ್ಧ ಪ್ರಹರ ಕಾಲ ನಡೆದಮೇಲೆ ದೂರದಲ್ಲಿ ಬೆಂಕಿ ಉರಿಯುತ್ತಿರುವುದನ್ನು ಕಂಡಳು. ವಧಾಸ್ಥಾನದಲ್ಲಿ ಕಾವಲಿದ್ದ ಸೈನಿಕರು ಶಿಬಿರಾಗ್ನಿಯನ್ನು ರಚಿಸಿಕೊಂಡು ಸುತ್ತ ಕುಳಿತಿದ್ದರು. ವಧಾಪೀಠ ಶೂಲದ ಮರಗಳು ಆ ಬೆಳಕಿನಲ್ಲಿ ಮಸುಕುಮಸುಕಾಗಿ ಕಾಣುತ್ತಿದ್ದವು.

ಶಿಬಿರಾಗ್ನಿಯ ಹಿಂದಿನ ಕಡೆಯಿಂದ ಲಾವಣ್ಯವತಿ ವಧಾಸ್ಥಾನವನ್ನು ಪ್ರವೇಶಿಸಿ