ಪುಟ:ಕ್ರಾಂತಿ ಕಲ್ಯಾಣ.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೧೯

ಬೇಕಾಗುವ ಶಿಲ್ಪಿಗಳು, ಹುಂಡಿಕಾರರು, ಬಣಜಾರರು, ಚಂಗೂಲಿಗಳು ಮುಂತಾದವರ ದೊಡ್ಡ ದಳಗಳು, ಬಿಜ್ಜಳನ ಅಧೀನದಲ್ಲಿತ್ತು. ರಾಜ್ಯದ ಪ್ರಮುಖ ನಗರಗಳಲ್ಲಿ, ದುರ್ಗಗಳಲ್ಲಿ, ಬಿಜ್ಜಳನ ಕಡೆಯವರು ಅಧಿಕಾರಿಗಳೂ ನಿಯುಕ್ತರೂ ಆಗಿದ್ದರು. ಈ ಮಹಾಸೈನ್ಯದ ಪಾಲನ ಪೋಷಣ ವೇತನಗಳಿಗಾಗಿ ಚಾಲುಕ್ಯ ಭಂಡಾರದಿಂದ ಅಪರಿಮಿತ ಹಣ ವೆಚ್ಚವಾಗುತ್ತಿದ್ದರೂ ವಾಸ್ತವದಲ್ಲಿ ಅದು ಬಿಜ್ಜಳನ ಸ್ವಂತ ಸೈನ್ಯವಾಗಿತ್ತು. ರಾಜ್ಯದ ದಕ್ಷಿಣ ಭಾಗದ ಕೆಲವು ಮಂದಿ ಸಾಮಂತರ ಹೊರತಾಗಿ ಉಳಿದ ಮಂಡಲಾಧಿಕಾರಿಗಳು ಬಿಜ್ಜಳನ ಆಡಳಿತವನ್ನು ಅನುಮೋದಿಸುತ್ತಿದ್ದರು. ಈ ವಿಪುಳ ಸೈನ್ಯದ ಬಲದಿಂದ ಬಿಜ್ಜಳನು ತ್ರಿಭುವನಮಲ್ಲ, ಭುಜಬಲಿ ಚಕ್ರವರ್ತಿ, ಶನಿವಾರ ಸಿದ್ದಿ ಮುಂತಾದ ಬಿರುದುಗಳಿಂದ ಹೊಗಳಿಸಿಕೊಳ್ಳಲು ಪ್ರಾರಂಭಿಸಿದ್ದನು.

ಬಿಜ್ಜಳನ ದಕ್ಷ ಆಡಳಿತ ಅವನ ಜನಪ್ರಿಯತೆಯ ಎರಡನೆಯ ಕಾರಣವಾಗಿತ್ತು. ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಚಾಲುಕ್ಯ ರಾಜ್ಯದಲ್ಲಿ ಆಚರಣೆಗೆ ಬಂದ ಆಡಳಿತ ಕ್ರಮ, ಆಮೇಲಿನ ಎರಡು ತಲೆಮಾರುಗಳಲ್ಲಿ ಸುವ್ಯವಸ್ಥಿತವಾಗಿ ನಡೆದು ಬಂದು, ಜಗದೇಕಮಲ್ಲನ ಆಳ್ವಿಕೆಯಲ್ಲಿ ಸ್ವಲ್ಪ ಸಡಿಲವಾಗಿ, ನೂರ್ಮಡಿ ತೈಲಪನ ಆಳ್ವಿಕೆಯಲ್ಲಿ ಅವನ ಉದಾಸೀನ ಅದಕ್ಷತೆಗಳ ಕಾರಣದಿಂದ ಕೆಲವೇ ವರ್ಷಗಳಲ್ಲಿ ಹದಗೆಟ್ಟಿತು. ಮಂಡಲಾಧಿಕಾರಿಗಳು, ಸಾಮಂತರು ರಾಜ್ಯದ ಹಿತಾಸಕ್ತಿಗಳನ್ನು ಕಡೆಗಣಿಸಿ, ಸ್ವಾರ್ಥಪರರಾಗಿ ನ್ಯಾಯ ವಿರುದ್ಧವಾದ ದುರ್ಮಾರ್ಗಗಳಿಂದ ಧನಸಂಗ್ರಹ ಮಾಡಲು ಪ್ರಾರಂಭಿಸಿದರು. ರಾಜಮಾರ್ಗಗಳು ಅರಕ್ಷಿತವಾದವು. ಕಳ್ಳಕಾಕರು ಹೆಚ್ಚಿದರು. ಲೂಟಿ ದರೋಡೆಗಳು ರಾಜ್ಯದ ಅನೇಕ ಕಡೆಗಳಲ್ಲಿ ಪ್ರತಿನಿತ್ಯದ ಘಟನೆಗಳಾದವು. ವಾಣಿಜ್ಯ ವ್ಯವಹಾರಗಳ ಕಾಲು ಮುರಿದಂತಾಗಿ ದೇಶದ ಆರ್ಥಿಕ ಭದ್ರತೆ ಕದಲಿತು. ರಾಜ ಭಂಡಾರಗಳು ಬರಿದಾದವು.

ಆಗ ತೈಲಪನು ತನ್ನ ಮಂಡಲಾಧೀಶ್ವರರಲ್ಲಿ ಪ್ರಮುಖನೂ, ದಕ್ಷನೂ, ರಾಜ್ಯದ ಹಿರಿಯ ದಂಡನಾಯಕನೂ ಆಗಿದ್ದ ಬಿಜ್ಜಳನಿಗೆ ತನ್ನ ಎಲ್ಲ ಅಧಿಕಾರಗಳನ್ನು ಒಪ್ಪಿಸಿ ಅಂತಃಪುರದಲ್ಲಿ ಗಣಿಕಾ ಪರಿವಾರದ ವಿಹಾರ ವಿನೋದಗಳಲ್ಲಿ ಮಗ್ನನಾದನು.

ಬಿಜ್ಜಳನ ದಕ್ಷತೆಯಿಂದ ಒಂದೇ ವರ್ಷದಲ್ಲಿ ಆಡಳಿತ ಉತ್ತಮಗೊಂಡಿತು. ರಾಜಮಾರ್ಗಗಳು ಸುರಕ್ಷಿತವಾಗಿ ವಾಣಿಜ್ಯ ವ್ಯವಹಾರಗಳು ಹೆಚ್ಚಿದವು. ಕಳ್ಳಕಾಕರ ಹೆಸರಡಗಿತು. ರಾಜ್ಯದ ಸಾಮಂತ ಶ್ರೀಮಂತರು, ಪ್ರಭು ಮನ್ನೆಯರು, ಕೃಷಿಕ ಕಾರ್ಮಿಕರು, ವರ್ತಕ ವ್ಯವಹಾರಿಗಳು ಬಿಜ್ಜಳನ ಆಡಳಿತ ದಕ್ಷತೆಯನ್ನು ಬಿಚ್ಚುಗೊರಳಿಂದ ಹೊಗಳಿದರು. ಆಗ ಪ್ರಾರಂಭವಾದ ರಾಜ್ಯಾಪಹಾರ, ತೈಲಪನ ಅವಸಾನ ಕಾಲಕ್ಕೆ ಪೂರ್ಣವಾಗಿ, ಆಗಲೇ ಆರು ವರ್ಷಗಳು ಕಳೆದಿದ್ದವು.