ಪುಟ:ಕ್ರಾಂತಿ ಕಲ್ಯಾಣ.pdf/೩೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಮಾನವನು ದಾನವನಾದಾಗ ೩೦೭ ಕೂಡಲೆ ಅವರನ್ನು ವಧಿಸತಕ್ಕದ್ದೆಂದು ಮಾಧವ ದಂಡನಾಯಕನು ಸೈನಿಕರಿಗೆ ಕಟ್ಟಾಜ್ಞೆಮಾಡಿದ್ದನು. ದಳದ ನಾಯಕನು ಪಂಜುಹಿಡಿದ ಮತ್ತೊಬ್ಬ ಸೈನಿಕನೊಡನೆ ಅಲ್ಲಿಗೆ ಬಂದಾಗ ಲಾವಣ್ಯವತಿ ಮೃತಳಾಗಿದ್ದಳು. ಬಲ್ಲೆಯಗಳ ಗಾಯದಿಂದ ರಕ್ತ ಹರಿದಿತ್ತು. “ಹೆಂಗಸೊಬ್ಬಳನ್ನು ತಡೆದು ನಿಲ್ಲಿಸಲು ನಿಮ್ಮಿಂದಾಗಲಿಲ್ಲವೆ?”-ದಳದ ನಾಯಕನು ಅಸಮಾಧಾನದಿಂದ ಸೈನಿಕರನ್ನು ಕೇಳಿದನು. “ಕತ್ತಲಲ್ಲಿ ಹೆಂಗಸೆಂದು ನಮಗೆ ತಿಳಿಯಲಿಲ್ಲ, ಒಡೆಯರೆ.” -ಸೈನಿಕರು ತಲೆಬಾಗಿ ಉತ್ತರ ಕೊಟ್ಟರು. ತಮ್ಮ ಅವಸರದ ಬೀಭತ್ಸಕ ವರ್ತನೆಯಿಂದ ಅವರಿಗೆ ಲಜ್ಜೆಯಾಗಿತ್ತು. 'ಹೆಣ್ಣು ಶರಣೆಯಂತಿದೆ. ಶೂಲಕ್ಕೇರಿಸಲ್ಪಟ್ಟವರ ಬಂಧುವಾಗಿರಬೇಕು. ಸುದ್ದಿ ಕೇಳಿ ನೋಡಲು ಬಂದವಳು ಸೈನಿಕರ ಅವಿವೇಕಕ್ಕೆ ಬಲಿಯಾದಳು. ಈ ವಿಚಾರ ಮಾಧವ ದಂಡನಾಯಕರಿಗೆ ತಿಳಿದರೆ ಏನು ಹೇಳುವರು ? ತಿಳಿಯದಂತೆ ದೇಹವನ್ನು ಮುಚ್ಚಿಡುವುದು ಸಾಧ್ಯವೆ?” -ಎಂದು ದಳದ ನಾಯಕನು ಯೋಚಿಸುತ್ತಿದ್ದಂತೆ ಮಾಚಿದೇವರ ನೇತೃತ್ವದಲ್ಲಿ ಶರಣರ ತಂಡವೊಂದು ಅಲ್ಲಿಗೆ ಬಂದಿತು. - ದಳದ ನಾಯಕನು ಹೆಣ್ಣಿನ ವಿಚಾರವನ್ನು ಮರೆತು, “ಇಲ್ಲಿರಿ! ಅಲ್ಲಿಯೆ ನಿಲ್ಲಿರಿ!” ಎಂದು ಕೂಗಿ ಹೇಳಿ ತಂಡದ ಕಡೆ ಹೋದನು. ಶರಣರು ನಿಂತರು. ವಧೆಯ ದಂಡಾಜ್ಞೆ ಕಾರ್ಯಗತವಾದ ಸುದ್ದಿಯನ್ನು ಧರ್ಮಾಧಿಕರಣದಿಂದ ಅಧಿಕೃತವಾಗಿ ತಿಳಿದು, ದೇಹಗಳನ್ನು ಸಂಸ್ಕಾರಕ್ಕಾಗಿ ತೆಗೆದುಕೊಂಡು ಹೋಗಲು ಅವರು ಬಂದಿದ್ದರು. ವಧಾಸ್ಥಾನಕ್ಕೆ ಅತಿಕ್ರಮ ಪ್ರವೇಶ ಮಾಡುವ ಉದ್ದೇಶ ಅವರಿಗಿರಲಿಲ್ಲ. ದಳದ ನಾಯಕನು ಬರುತ್ತಲೇ ಮಾಚಿದೇವರು ಧರ್ಮಾಧಿಕರಣದ ಅನುಮತಿ ಪತ್ರವನ್ನು ಕೊಟ್ಟು “ನಾವು ದೇಹಗಳಿಗಾಗಿ ಬಂದಿದ್ದೇವೆ,” ಎಂದರು. ದಳದ ನಾಯಕನು ಮಾಚಿದೇವರೊಡನೆ ಪ್ರತ್ಯೇಕವಾಗಿ, “ನಿಮಗೆ ದೇಹಗಳನ್ನು ಒಪ್ಪಿಸುವುದಕ್ಕಾಗಿಯೇ ನಾವಿಲ್ಲಿ ಕಾವಲಿದ್ದಾಗ ಒಂದು ಅಚಾತುರ್ಯ ನಡೆಯಿತು, ಹೆಣ್ಣೂಬ್ಬಳು ಕಳ್ಳತನದಿಂದ ವಧಾಸ್ಥಾನಕ್ಕೆ ಬಂದಾಗ ಕತ್ತಲಲ್ಲಿ ಯಾರೆಂದು ತಿಳಿಯದೆ ನಮ್ಮ ಸೈನಿಕರು ಅವಳನ್ನು ಇರಿದು ಕೊಂದರು,” ಎಂದು ಹೇಳಿ ಲಾವಣ್ಯವತಿಯ ದೇಹವನ್ನು ತೋರಿಸಿದನು.