ಪುಟ:ಕ್ರಾಂತಿ ಕಲ್ಯಾಣ.pdf/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೦೮

ಕ್ರಾಂತಿ ಕಲ್ಯಾಣ


ಅವಳಾರೆಂಬುದನ್ನು ಮಾಚಿದೇವರು ಕೂಡಲೆ ತಿಳಿದರು. ಆದರೆ ಪರಿಚಯ ಹೇಳುವುದರಿಂದ ಯಾವ ಪ್ರಯೋಜನವೂ ಇಲ್ಲವೆಂದು ಭಾವಿಸಿ, “ಹೆಣ್ಣು ಮೃತರ ಬಂಧು. ದೇಹವನ್ನು ನಮಗೊಪ್ಪಿಸಿದರೆ ಸಂಸ್ಕಾರ ನಡೆಸುತ್ತೇವೆ,” ಎಂದರು.

“ಬೇರೆ ದೇಹಗಳೊಡನೆ ನೀವು ಇದನ್ನೂ ತೆಗೆದುಕೊಂಡು ಹೋಗಬಹುದು. ಆದರೆ ಹೆಂಗಸು ಎಲ್ಲಿ, ಹೇಗೆ ಸತ್ತಳೆಂಬುದನ್ನು ನೀವು ರಹಸ್ಯವಾಗಿಡಬೇಕು.”

ಮಾಚಿದೇವರು ಒಪ್ಪಿಕೊಂಡರು. ಆಗಿನ ವಿಷಮ ಪರಿಸ್ಥಿತಿಯಲ್ಲಿ ಮಾಧವ ದಂಡನಾಯಕನ ಸೇನಾದಳದೊಡನೆ ಘರ್ಷಣೆ ಪ್ರಾರಂಭಿಸುವ ಉದ್ದೇಶ ಅವರಿಗಿರಲಿಲ್ಲ.

ಆಮೇಲೆ ಶರಣರು ಶೂಲದ ಮರಕ್ಕೆ ಕಟ್ಟಿದ್ದ ಹಗ್ಗಗಳನ್ನು ಬಿಚ್ಚಿ ದೇಹಗಳನ್ನು ಕೆಳಗಿಳಿಸಿದರು. ಭಕ್ತಿಯ ಮೃದುಹಸ್ತದಿಂದ ಕೊರಳನ್ನು ಬಿಗಿದಿದ್ದ ಕುಣಿಕೆಯನ್ನು ಸಡಲಿಸಿ, ಬಿರಿಗಣ್ಣುಗಳನ್ನು ಮುಚ್ಚಿ ಮಧುವರಸ ಹರಳಯ್ಯಗಳನ್ನು ಸಿದ್ಧವಾಗಿದ್ದ ಚಟ್ಟಗಳ ಮೇಲಿಟ್ಟರು. ಅಲ್ಲಿದ್ದ ಬಿದಿರು ಹಗ್ಗಗಳಿಂದ ಲಾವಣ್ಯಗತಿಗೆ ಹೊಸ ಚಟ್ಟವನ್ನು ಕಟ್ಟಿದರು.

ಎಂದಿನಂತೆ ಸೂರ್ಯನ ಹೊಂಗಿರಣಗಳೂ ಆ ಪಾಪಮಯ ಕಲುಷಿತ ಪ್ರದೇಶವನ್ನು ಬೆಳಗುತ್ತಿದ್ದಂತೆ ಅವರು, ಬಿಜ್ಜಳನ ದುರಾಗ್ರಹದ ಮೊದಲ ಬಲಿಯಾದ ಆ ಮೂವರು ಹುತಾತ್ಮರ ದೇಹಗಳನ್ನು ಹೊತ್ತು ಅಲ್ಲಿಂದ ಹೊರಟರು.

ನಗರದ ದಕ್ಷಿಣಕ್ಕಿದ್ದ ರುದ್ರಭೂಮಿಯಲ್ಲಿ ಮೃತರ ಅಂತ್ಯಕರ್ಮಗಳು ನಡೆದವು. ಮಹಮನೆಯ ಶರಣಶರಣೆಯರೆಲ್ಲ ಮೃತರ ಅಂತ್ಯದರ್ಶನಕ್ಕಾಗಿ ಅಲ್ಲಿಗೆ ಬಂದಿದ್ದರು. ನಾಗಲಾಂಬೆ ನೀಲಲೋಚನೆಯರು ಲಾವಣ್ಯವತಿಯ ದೇಹವನ್ನು ತೊಳೆದು ಭಸ್ಮ ಬಿಲ್ವದಳಗಳು ಹರಡಿದ್ದ ಸಮಾಧಿಯಲ್ಲಿಟ್ಟರು. ನಾಗಲಾಂಬೆಯ ಸಲಹೆಯಂತೆ ಶೀಲವಂತನ ತೋಳನ್ನು ಅದೇ ಸಮಾಧಿಯಲ್ಲಿ, ಲಾವಣ್ಯವತಿಯ ಪಾರ್ಶ್ವದಲ್ಲಿಟ್ಟರು.

ಸಮಾಧಿಗಳು ರಚಿತವಾದ ಮೇಲೆ ಮಾಚಿದೇವರು, ಚೆನ್ನಬಸವಣ್ಣನವರು, ಮೋಳಿಗೆಯ ಮಾರಯ್ಯನವರು, ಪರೋಕ್ಷ ವಿನಯಕ್ಕಾಗಿ ಪ್ರಶಂಸೆಯ ನುಡಿಗಳನ್ನಾಡಿದರು.

ಆ ಸಂದರ್ಭದಲ್ಲಿ ಮೋಳಿಗೆಯ ಮಾರಯ್ಯನವರು ಹೇಳಿದುದನ್ನು ಶರಣರು ಮುಂದೆಂದೂ ಮರೆಯಲಿಲ್ಲ :

“ಜಾತಿ ಪಂಥಗಳ ಭಿನ್ನಭೇದಗಳನ್ನು ನಿರ್ಮೂಲಗೊಳಿಸಿ, ಜನತೆಯಲ್ಲಿ