ಪುಟ:ಕ್ರಾಂತಿ ಕಲ್ಯಾಣ.pdf/೩೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ ತನ್ನ ಸ್ವಗ್ರಾಮಕ್ಕೆ ಹೋದವನು ಪುನಃ ಕಲ್ಯಾಣಕ್ಕೆ ಹಿಂದಿರುಗಲಿಲ್ಲ. ಮಧುವರಸನ ಸಂದೇಶ ಶರಣರಿಗೆ ಸ್ಫೂರ್ತಿದಾಯಕವಾಯಿತು. ಶರಣಧರ್ಮದ ರಕ್ಷಣೆಗೆ ಮುಂದೇನು ಮಾಡಬೇಕೆಂಬ ವಿಚಾರವಾಗಿ ಕೆಲವು ನಿರ್ಣಯಗಳು ಅಂಗೀಕರಿಸಲ್ಪಟ್ಟವು, ಶರಣರು ಕಲ್ಯಾಣವನ್ನು ಬಿಟ್ಟು ನೆರೆಹೊರೆಯ ರಾಜ್ಯಗಳಿಗೆ ವಲಸೆ ಹೋಗುವುದು, ಅನುಭವಮಂಟಪದಲ್ಲಿ ಸಂಗ್ರಹವಾಗಿದ್ದ ಗ್ರಂಥಭಂಡಾರವನ್ನು ಸುರಕ್ಷಣೆಗಾಗಿ ಸಹ್ಯಾದ್ರಿ ಮಧ್ಯದ ಉಳಿವೆಗೆ ಕಳುಹಿಸುವುದು, ಅನುಭಾವಿ ಶರಣರ ಸಾಧನೆ ಸಹಜೀವನಗಳಿಗಾಗಿ ಪುರಾಣಪ್ರಸಿದ್ಧವಾದ ನೈಮಿಷಾರಣ್ಯದ ಮಾದರಿಯಲ್ಲಿ ಉಳಿವೆಯ ಸಮೀಪದ ಅರಣ್ಯದಲ್ಲಿ ಆಶ್ರಮವನ್ನು ಸ್ಥಾಪಿಸುವುದು, ಶರಣಧರ್ಮದ ಪ್ರಸಾರ ಮತ್ತು ಶರಣರ ರಕ್ಷಣೆಗಾಗಿ ಮಾಚಿದೇವರ ನೇತೃತ್ವದಲ್ಲಿ ಗಣಾಚಾರದ ಜಂಗಮದಳಗಳನ್ನು ರಚಿಸುವುದು, ಇವೇ ಆ ನಿರ್ಣಯಗಳು. ಶರಣಧರ್ಮದ ಮೂಲತತ್ವಗಳಲ್ಲಿ ಒಂದಾದ ಅಹಿಂಸಾಧರ್ಮದ ವಿವೇಚನಾತ್ಮಕ ವಿಶ್ಲೇಷಣೆ ಸಭೆಯಲ್ಲಿ ನಡೆದು, ಆತ್ಮರಕ್ಷಣೆಗಾಗಿ ಆಯುಧಗಳನ್ನು ಧರಿಸುವುದು, ಸ್ವಧರ್ಮ ಸ್ವರಾಜ್ಯಗಳಿಗಾಗಿ ಹೋರಾಡುವುದು, ಅಹಿಂಸಾ ತತ್ವಕ್ಕೆ ವಿರುದ್ಧವಲ್ಲವೆಂಬ ಅಭಿಪ್ರಾಯಕ್ಕೆ ಮನ್ನಣೆ ದೊರೆಯಿತು. ಅಧ್ಯಕ್ಷತೆ ವಹಿಸಿದ್ದ ಸಕಲೇಶಮಾದರಸರ ಆದೇಶದಂತೆ ಈ ನಿರ್ಣಯಗಳನ್ನು ಚಾಲುಕ್ಯರಾಜ್ಯದ ಎಲ್ಲ ಶೈವಮಠಗಳಿಗೆ, ಶರಣರ ಸಂಘ ಸಂಸ್ಥೆ ಸಮಾಜಗಳಿಗೆ, ಪ್ರಮುಖ ಶರಣರಿಗೆ ಶೃತಪಡಿಸಲು ಮಾಚಿದೇವರು ವಿಶೇಷ ದೂತರನ್ನು ಕಳುಹಿಸಿದರು. ಈ ಎಲ್ಲ ಘಟನೆಗಳ ವರದಿಯನ್ನು ತೆಗೆದುಕೊಂಡು ಹಡಪದ ಅಪ್ಪಣ್ಣನು ಕೂಡಲ ಸಂಗಮಕ್ಕೆ ಬಸವಣ್ಣನವರ ಬಳಿಗೆ ಹೋದನು. ಗೂಢಚಾರರಿಂದ ಬಿಜ್ಜಳನು ಈ ವಿಷಯಗಳನ್ನು ತಿಳಿದನು. ಕೂಡಲೆ ಅವನು ಚೆನ್ನಬಸವಣ್ಣನವರನ್ನು ಕರೆಸಿಕೊಂಡು, “ಇದೇನು ನಿಮ್ಮ ಯೋಜನೆ? ಶರಣರನ್ನು ತಪ್ಪು ದಾರಿಗೆಳೆಯುತ್ತಿದ್ದೀರಿ ನೀವು?” ಎಂದು ಜಂಕಿಸಿ ನುಡಿದನು. “ಶರಣರನ್ನು ಸರಿಯಾದ ದಾರಿಯಲ್ಲಿ ನಡೆಸಲು ನಾನು ಪ್ರಯತ್ನಿಸುತ್ತಿದ್ದೇನೆ. ಎಲ್ಲಿ ಪ್ರಜಾರಕ್ಷಕನಾದ ಅರಸು ಪ್ರಜಾಪೀಡಕನಾಗುವನೋ, ಎಲ್ಲಿ ಧರ್ಮಾಧಿಕರಣದ ನ್ಯಾಯಪೀಠ ವಧಾಪೀಠವಾಗುವದೋ ಅಲ್ಲಿ ಶರಣರಿಗೆ ಸ್ಥಾನವಿಲ್ಲ. ಅದರಿಂದ ನಾವು ಕಲ್ಯಾಣವನ್ನು ತ್ಯಜಿಸುತ್ತಿದ್ದೇವೆ,” -ಎಂದು ಚೆನ್ನಬಸವಣ್ಣನವರು ದೃಢಕಂಠದಿಂದ ಗಂಭೀರವಾಗಿ ಉತ್ತರ ಕೊಟ್ಟರು. ಬಿಜ್ಜಳನು ಚಕಿತನಾದನು. ಮಧುವರಸ ಹರಳಯ್ಯಗಳ ಕ್ಷಮಾಯಾಚನೆಗಾಗಿ