ಪುಟ:ಕ್ರಾಂತಿ ಕಲ್ಯಾಣ.pdf/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೧೨

ಕ್ರಾಂತಿ ಕಲ್ಯಾಣ


ಬಂದಿದ್ದ ಆ ವಿನಯಭೂಷಣ ಮಂತ್ರಿಯೆಲ್ಲಿ? ಪಂಜರ ಬದ್ಧವಾದ ಸಿಂಹದಂತೆ ಗರ್ಜಿಸುವ ಈ ಶರಣಪ್ರತಿನಿಧಿಯೆಲ್ಲಿ? ಕೆಲವೇ ದಿನಗಳ ಅಂತರದಲ್ಲಿ ಇಷ್ಟೊಂದು ಪರಿವರ್ತನೆ ಸಾಧ್ಯವೆ? ಎಂದು ಅವನಿಗೆ ಆಶ್ಚರ್ಯವಾಯಿತು.

“ನಮ್ಮಿಂದ ಶರಣರಿಗಾದ ಹಾನಿಯೇನು? ರಾಜ್ಯದ ಇತರ ಪ್ರಜೆಗಳಂತೆಯೇ ನಾವು ಅವರನ್ನು ನಡೆಸಿಕೊಳ್ಳುತ್ತಿದ್ದೇವೆ,” ಎಂದು ಬಿಜ್ಜಳನು ನಯವಾಡಿದನು.

ಚೆನ್ನಬಸವಣ್ಣನವರು ಹೇಳಿದರು : “ಬಸವಣ್ಣನವರ ನಿರ್ವಾಸನ, ವಿಚಾರಣೆ ನಡೆಸದೆ ಮಧುವರಸ ಹರಳಯ್ಯ ಶೀಲವಂತರನ್ನು ಶೂಲಕ್ಕೇರಿಸಿದ್ದು, ಇವು ಶರಣರ ವಿರುದ್ಧ ನಡೆದ ಹಿಂಸಾಕ್ರಿಯೆಗಳಲ್ಲವೆ? ಶರಣಧರ್ಮದ ಆಜನ್ಮಶತೃವಾದ ಮಾಧವ ದಂಡನಾಯಕನನ್ನು ಮಹಾಸೇನಾನಿಯಾಗಿ ನಿಯಮಿಸಿ ಕಲ್ಯಾಣ ನಗರದ ರಕ್ಷಣೆಯನ್ನು ಅವನಿಗೆ ಒಪ್ಪಿಸಿರುವುದು ಶರಣರ ಮೇಲೆ ನಡೆಯಲಿರುವ ದಬ್ಬಾಳಿಕೆಯ ಉಗ್ರರೂಪವನ್ನು ಸೂಚಿಸುವುದಲ್ಲವೆ? ಈಗಲೂ ಶರಣರು ಜಾಗ್ರತರಾಗದೆ ಹೋದರೆ, ಎಂದಿನಂತೆ ಮುಂದೆಯೂ ನಾವು ಕಲ್ಯಾಣದಲ್ಲಿ ಸುಖದ ಬಾಳ್ವೆ ನಡೆಸುವೆವೆಂದು ಭಾವಿಸಿದರೆ, ಅದು ಆತ್ಮಘಾತದಷ್ಟೇ ಅವಿವೇಕ. ಶರಣರ ನಿರ್ಧಾರ ಚಲಿಸುವುದಿಲ್ಲ. ಪ್ರಭುಗಳು ದಯಮಾಡಿ ಕಲ್ಯಾಣವನ್ನು ಬಿಡಲು ಅನುಮತಿ ಕೊಡಬೇಕಾಗಿ ಬೇಡುತ್ತೇನೆ.”

ಬಿಜ್ಜಳನು ಯೋಚಿಸಿ ಉತ್ತರ ಕೊಟ್ಟನು : “ನೀವು ಪ್ರಭುತ್ವದ ಮೇಲೆ ಮಾಡುವ ಈ ಆಪಾದನೆಗಳನ್ನು ನಾನು ನಿರಾಕರಿಸುತ್ತೇನೆ. ತಮ್ಮ ನಿರ್ವಾಸನಕ್ಕೆ ಬಸವಣ್ಣನವರೇ ಕಾರಣರು. ಪ್ರಭುತ್ವದ ನಿಬಂಧನೆಗಳಿಗೊಪ್ಪಿ ಅವರು ಕಲ್ಯಾಣದಲ್ಲಿರಬಹುದಾಗಿತ್ತು. ಮಧುವರಸಾದಿಗಳು ಧರ್ಮಾಧಿಕರಣದ ನಿಬಂಧನೆಯಂತೆ ಶಿಕ್ಷೆಗೊಳಗಾದರು. ತೀರ್ಪನ್ನು ಕಾರ್ಯಗತ ಮಾಡುವುದು ಪ್ರಭುತ್ವದ ಹೊಣೆ. ಈ ಸಾಮಾನ್ಯ ಘಟನೆಗಳನ್ನು ಶರಣರ ಮೇಲಿನ ದಬ್ಬಾಳಿಕೆಯೆಂದು ತಿಳಿದು ನೀವು ಕಲ್ಯಾಣವನ್ನು ಬಿಟ್ಟು ಹೋಗುವುದು ನಮಗೆ ಅಸಮ್ಮತ. ನಮ್ಮ ವಿಶೇಷ ಅನುಮತಿಯಿಲ್ಲದೆ ಶರಣರಾರೂ ಕಲ್ಯಾಣವನ್ನು ಬಿಡಲಾಗದು. ನಗರದ ಕಾವಲು ಪಡೆಗಳನ್ನು ಹೆಚ್ಚಿಸುವಂತೆ ಇಂದೇ ಮಾಧವ ನಾಯಕರಿಗೆ ಆಜ್ಞೆ ಮಾಡುತ್ತೇನೆ.”

ಈ ದರ್ಪದ ನುಡಿಗಳೊಡನೆ ಸಂದರ್ಶನ ಮುಗಿಸುವುದು ಬಿಜ್ಜಳನ ಉದ್ದೇಶವಾಗಿತ್ತು. ಆದರೆ ಚೆನ್ನಬಸವಣ್ಣನವರು ಅದಕ್ಕೆ ಅವಕಾಶ ಕೊಡಲಿಲ್ಲ. “ನಮ್ಮ ವಲಸೆಯ ದಿನ ಗೊತ್ತಾಗಿದೆ. ಸಿದ್ಧತೆಗಳು ನಡೆಯುತ್ತಿವೆ. ನಮ್ಮನ್ನು ತಡೆಯುವುದು ಯಾರಿಗೂ ಸಾಧ್ಯವಲ್ಲ. ಇನ್ನುಳಿದಿರುವ ಕೆಲವೇ ದಿನಗಳ ಅವಧಿಯಲ್ಲಿ ಪ್ರಭುಗಳ ಅಭಿಪ್ರಾಯ ಬದಲಾದರೆ ಒಳ್ಳೆಯದು, ನಿಮ್ಮ ಮಂತ್ರಿಮಂಡಲದ