ಪುಟ:ಕ್ರಾಂತಿ ಕಲ್ಯಾಣ.pdf/೩೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ ೩೧೩ ಸದಸ್ಯನಾಗಿ ಮಿತ್ರನಂತೆ ನಾನು ಈ ಸಲಹೆ ಕೊಡುತ್ತಿದ್ದೇನೆ” ಎಂದು ಹೇಳಿ ವಂದಿಸಿ ಅಲ್ಲಿಂದ ನಿರ್ಗಮಿಸಿದರು. ಈ ಉದ್ಧಟ ಜಂಗಮನ ಬಂಧನಕ್ಕೆ ಆಜ್ಞೆ ಮಾಡಲೇ ಎಂದು ಬಿಜ್ಜಳನು ಯೋಚಿಸಿದನು. ಪ್ರತಿಕ್ಷಣದಲ್ಲಿ, “ಮಹಮನೆಯ ಸುತ್ತ ಸೈನಿಕರ ಕಾವಲಿಡುತ್ತೇನೆ. ಇವರು ನನ್ನಿಂದ ಹೇಗೆ ತಪ್ಪಿಸಿಕೊಂಡು ಹೋಗುವರೋ ನೋಡೋಣ !” ಎಂದು ಸುಮ್ಮನಾದನು. ಸಂದರ್ಶನದ ವಿವರಗಳನ್ನು ಕೇಳಿದ ಮಾಚಿದೇವರು, 'ವಲಸೆಗೆ ಬಿಜ್ಜಳನ ಅನುಮತಿ ಕೋರಿದುದು ಉಚಿತವೇ ಎಂದು ನನಗೆ ಸಂದೇಹವಾಗುತ್ತಿದೆ, ಚೆನ್ನ ಬಸವಣ್ಣನವರೇ. ಅನುಮತಿ ನಿರಾಕರಿಸಿದರೆ ಮುಂದೇನು ಮಾಡುವುದು?” ಎಂದು ಪ್ರಶ್ನಿಸಿದರು. ಚೆನ್ನಬಸವಣ್ಣನವರು ಹೇಳಿದರು : “ಅನುಮತಿ ದೊರಕಲಿ, ದೊರಕದಿರಲಿ, ನಮ್ಮ ನಿರ್ಧಾರ ಚಲಿಸುವುದಿಲ್ಲ. ಮೊದಲೆ ಗೊತ್ತಾದಂತೆ ನಾವು ಕಲ್ಯಾಣವನ್ನು ಬಿಡುವುದು ಖಂಡಿತ. ಬಿಜ್ಜಳನ ಸೈನಿಕರಿಗೆ ನಮ್ಮನ್ನು ತಡೆಯುವ ಶಕ್ತಿಯಿದೆಯೇ ಎಂಬುದನ್ನು ಮುಂದೆ ನೋಡಬೇಕಾಗಿದೆ. ನಾವು ಮಡಿವಾಳ ಮಾಚಿದೇವರ ರಕ್ಷಣೆಯಲ್ಲಿ ಹೋಗುತ್ತಿರುವೆವೆಂಬುದನ್ನು ಅವರು ತಿಳಿಯಲಿ.” ಚೆನ್ನಬಸವಣ್ಣನವರು ತಮ್ಮಲ್ಲಿಟ್ಟ ಅನನ್ಯ ವಿಶ್ವಾಸವನ್ನು ಕಂಡು ಮಾಚಿದೇವರು ಸಂತುಷ್ಟರಾದರು. ಗಂಭೀರಭಾವದಿಂದ ದನಿಯೆತ್ತಿ ಅವರು ಹೇಳಿದರು : “ನಮ್ಮ ಪ್ರಮಥಗಣಂಗಳು ಉಳಿವೆಯ ಮಹಾಮನೆಗೆ ಹೋಹ ಪರಿಯಂತ ಒಬ್ಬರನು ಬಿಟ್ಟೆನಾದೊಡೆ, ನನ್ನ ಕೈಯಲಿರ್ಪ ವೀರಭದ್ರ ರಣವಿಜಯವೆಂಬ ಖಡ್ಗ ಉರಿದೇಳುತ್ತ ಸಿಡಿದುಹೋಗದೆ? ನನ್ನ ಕೈಯಲಿರ್ಪ ಕಾಲಾಗ್ನಿ ರುದ್ರವೆಂಬ ಮುರಿಗೆಯು ಅಳವಾಡಿ ನಗದೆ? ಕಾಲಕರ್ಮಂಗಳ ಗಂಡನೆಂಬ ಸುರಿಗೆಯು ಎದೆಯಲ್ಲಿ ಹಾಯ್ದು ಬೆನ್ನಲ್ಲಿ ಒಡಮೂಡದೆ? ಪರವಾದಿಗಳ ಗಂಡನೆಂಬ ಪದದ ಬಾವುಲಿಯ ಬೊಂಬೆಯ ತೊಡರು ಭಂಗಿಸುತ್ತ ಹೋಗದೆ? ಎನ್ನ ಕರ್ಣದಲ್ಲಿದ್ದ ಲಿಂಗಾಂಗವೆಂಬ ಘಂಟೆ ಬಿದ್ದುಹೋಗದೆ, ಅಯ್ಯಾ, ಕಲಿದೇವರ ಸಾಕ್ಷಿಯಾಗಿ, ಚೆನ್ನಬಸವಣ್ಣಾ !”