ಪುಟ:ಕ್ರಾಂತಿ ಕಲ್ಯಾಣ.pdf/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೧೪

ಕ್ರಾಂತಿ ಕಲ್ಯಾಣ


ಗಣಾಚಾರಿ ಜಂಗಮದಳದ ಉದ್ಬೋಧನೆಗೆಂದು ಹೊಸದಾಗಿ ತಾವೇ ರಚಿಸಿದ ಈ ವಚನವನ್ನು ಮಾಚಿದೇವರು ಪಠಿಸಿದಾಗ ಚೆನ್ನಬಸವಣ್ಣನವರ ಉತ್ಸಾಹ ಇಮ್ಮಡಿಸಿತು. ಅವರು ಅಂದೇ ಸಕಲೇಶಮಾದರಸರ ಅನುಮತಿ ಪಡೆದು, ಕಲ್ಯಾಣದ ಎಲ್ಲ ಶೈವಮಠಗಳಿಗೆ ಆಹ್ವಾನ ಕಳುಹಿಸಿದರು :

“ಮುಂದೆ ಕಲ್ಯಾಣದಲ್ಲಿ ಮಹಾ ಕದನವಾಗುವುದು,
ನೆತ್ತರ ಕೋಡಿ ಹರಿಯುವುದು.-ಅದು ಕಾರಣ,
ನಿಮ್ಮೆಲ್ಲರಿಗೆ ಸಾಷ್ಟಾಂಗ ನಮಸ್ಕಾರಮಂ ಮಾಡಿ
ವಿಭೂತಿ ವೀಳಯಗಳಂ ಮುಂದಿರಿಸಿ, ಕರಗಳ ಮುಗಿದು,
-ಎಲೈ ಸ್ವಾಮಿಗಳಿರಾ, ಉಳುವೆಯ ಮಹಾಮನೆಗೆ
ಪೋಪ ಪಯಣ ನಮಗಾಯಿತ್ತು. ನೀವು
ಸಂಗಡ ಚಿತ್ತೈಸುವುದು-ಎಂದು ಬೇಡುವೆವು,”
-ಎಂದು ಆಹ್ವಾನಪತ್ರ ಮುಗಿದಿತ್ತು.

ಸ್ನಾನ ಮಾಡಿ ಮಡಿಬಟ್ಟೆಗಳನ್ನು ಧರಿಸಿದ್ದ ಐನೂರು ಮಂದಿ ಗಣಾಚಾರದ ಜಂಗಮರು, ಕೈಯಲ್ಲಿ ತಾಂಬೂಲ ವಿಭೂತಿಗಳನ್ನು ಹಿಡಿದು ಕಲ್ಯಾಣದ ಸಾವಿರದೊಂದು ಜಂಗಮ ಮಠಗಳಿಗೆ ಆಹ್ವಾನ ಮುಟ್ಟಿಸಲು "ಹರಹರ ಮಹಾದೇವ!” ಎಂದು ಜಯಘೋಷ ಮಾಡುತ್ತ ಹೊರಟರು.

ವಲಸೆಯ ನಿಜವಾದ ಅರ್ಥ ಶರಣರ ದೃಷ್ಟಿಪಥದಿಂದ ಅಳಿಸಿ ಮಂಗಳ ಯಾತ್ರೆಯ ರೂಪತಾಳಬೇಕೆಂಬುದು ಮಾಚಿದೇವ ಚೆನ್ನಬಸವಣ್ಣನವರ ಉದ್ದೇಶವಾಗಿತ್ತು. ಸಂಪ್ರದಾಯಕ್ಕೆ ಅನುಗುಣವಾಗಿ ಈ ಕಾರ್ಯವನ್ನು ಮುಗಿಸಿ ಸಕಲೇಶ ಮಾದರಸರು, ಮಾಚಿದೇವರು, ಸೊಡ್ಡಳ ಬಾಚರಸರು, ಚೆನ್ನಬಸವಣ್ಣನವರು ಅನುಭವಮಂಟಪ ಓಲಗಶಾಲೆಯಲ್ಲಿ ಕುಳಿತಿದ್ದಾಗ ವಿದ್ಯಾರ್ಥಿ ವಟುವೊಬ್ಬನು ಅಲ್ಲಿಗೆ ಬಂದು, “ಮಂಗಳವೇಡೆಯಿಂದ ಅಪರಿಚಿತ ಭಕ್ತರೊಬ್ಬರು ಸಂದರ್ಶನಕ್ಕಾಗಿ ಬಂದಿದ್ದಾರೆ,” ಎಂದು ಬಿನ್ನವಿಸಿಕೊಂಡನು.

ಮಂಗಳವೇಡೆಯಿಂದ! ಮಾಚಿದೇವರ ಕಿವಿಗಳು ನಿಮಿರಿದವು. “ಸಂಗಡ ಯಾರಿದ್ದಾರೆ ?” ಎಂದು ವಟುವನ್ನು ಕೇಳಿದರು.

“ಹೆಂಗಸೊಬ್ಬಳು, ಮತ್ತು ಐದಾರು ವರ್ಷಗಳ ಒಬ್ಬ ಬಾಲಕ.”

ಅವರನ್ನು ಒಳಗೆ ಕರೆತರುವಂತೆ ಮಾಚಿದೇವರು ಹೇಳಿದರು.

ಶ್ರೀಮಂತ ಹರದನಂತೆ ಅಂಗಿ ಮುಂಡಾಸುಗಳನ್ನು ಧರಿಸಿದ್ದ ಮಧ್ಯವಯಸ್ಸಿನ ಒಬ್ಬ ಪುರುಷನೂ, ಶರಣೆಯಂತೆ ವಿಭೂತಿಯಿಟ್ಟು ತಲೆ ತುಂಬ ಮುಸುಕುಹಾಕಿದ್ದ