ಪುಟ:ಕ್ರಾಂತಿ ಕಲ್ಯಾಣ.pdf/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೧೬

ಕ್ರಾಂತಿ ಕಲ್ಯಾಣ


ಮೊಗಶಾಲೆಯಲ್ಲಿದ್ದು ಆಮೇಲೆ ಬಿಡಾರಕ್ಕೆ ಹಿಂದಿರುಗಿದರೆಂದೂ, ಆಗ ಅವರ ವಿಷಣ್ಣತೆಯ ನಡೆನುಡಿಗಳು ಯಾವುದೋ ಅತ್ಯಾಚಾರಕ್ಕೆ ಸಿಕ್ಕು ತಪ್ಪಿಸಿಕೊಂಡು ಬಂದವರ ನಡೆನುಡಿಗಳಂತಿದ್ದುವೆಂದೂ ಸಮೀಪದ ದಾಸಿ-ಉಷಾವತಿ ಹೇಳುತ್ತಾಳೆ. ರಾತ್ರಿ ಕಳೆದು ಬೆಳಕು ಹರಿಯುತ್ತಿದ್ದಂತೆ ರಾಣಿಯವರು ಜಗದೇಕಮಲ್ಲರಸರಿಗೆ ಸಂದೇಶವೊಂದನ್ನು ಉಷಾವತಿಗೆ ಪಾಠಮಾಡಿಸಿ, ಕುಮಾರ ಪ್ರೇಮಾರ್ಣವನನ್ನು ಅವಳ ರಕ್ಷಣೆಯಲ್ಲಿ ಹೊರಗೆ ಕಳುಹಿಸಿದರು. ಮುಂದೆ ರಾಣಿಯ ಉದ್ದೇಶವೇನೆಂಬುದು ದಾಸಿಗೆ ತಿಳಿಯದು. ಪಾನಶಾಲೆಯಿಂದ ತಪ್ಪಿಸಿಕೊಂಡು ಉದ್ಯಾನದಲ್ಲಿ ಅವಿತುಕೊಂಡಿದ್ದ ನಾನು ದಾಸಿಯನ್ನು ಹಿಂಬಾಲಿಸಿ ನಗರ ಮಧ್ಯದ ಯಾತ್ರಾಶಿಬಿರಕ್ಕೆ ಹೋದೆ. ಯಾತ್ರಾತಂಡದ ನಾಯಕನು ರಾಣಿಯವರ ಮುದ್ರೆಯುಂಗುರವನ್ನು ನೋಡಿ ನಮಗೆ ಆಶ್ರಯ ಕೊಟ್ಟನು. ಅವನ ಸಲಹೆಯಂತೆ ನಾನು ಈ ಹರದನ ವೇಷ ಧರಿಸಿದೆ. ಆ ಪ್ರಾತಃಕಾಲವೇ ನಾವು ಮಂಗಳವೇಡೆಯನ್ನು ಬಿಟ್ಟು ನಾಲ್ಕು ವಾರಗಳ ಅನಂತರ ನನ್ನೆ ಸಂಜೆ ಕಲ್ಯಾಣಕ್ಕೆ ಬಂದೆವು. ತೀರ್ಥಸ್ಥಾನಗಳಲ್ಲಿ ಕೆಲವು ದಿನಗಳು ಉಳಿದದ್ದರಿಂದ ಪಯಣ ತಡವಾಯಿತು. ಕುಮಾರ ಪ್ರೇಮಾರ್ಣವನ್ನು ನಿಮ್ಮ ರಕ್ಷಣೆಗೊಪ್ಪಿಸಿ, ಅವನನ್ನು ಸುರಕ್ಷಿತವಾಗಿ ಕರ್ಹಾಡಕ್ಕೆ ವಿಜಯಾರ್ಕದೇವರ ಬಳಿಗೆ ಕಳುಹಿಸಬೇಕೆಂದು ರಾಣಿಯವರು ಬೇಡಿಕೊಳ್ಳುತ್ತಾರೆ.”

-ಎಂದು ಅಗ್ಗಳನು ಕುಮಾರ ಪ್ರೇಮಾರ್ಣವನನ್ನು ಚೆನ್ನಬಸವಣ್ಣನವರ ಕಾಲುಗಳ ಮೇಲೆ ಹಾಕಿದನು. ಆಮೇಲೆ ಪ್ರೇಮಾರ್ಣವನು ಸಭೆಯಲ್ಲಿದ್ದವರೆಲ್ಲರ ಪಾದಗಳಿಗೆ ನಮಸ್ಕಾರ ಮಾಡಿದನು. ಮಾಚಿದೇವರು ಬಾಲಕನ ತಲೆಯನ್ನು ಆದರದಿಂದ ನೇವರಿಸಿ ಹತ್ತಿರ ಕುಳ್ಳಿರಿಸಿಕೊಂಡರು.

“ಅಗ್ನಿ ಅಪಘಾತ ನಡೆದದ್ದು ನೀವು ಮಂಗಳವೇಡೆಯನ್ನು ಬಿಟ್ಟ ದಿನವೇ ಅಲ್ಲವೆ?” -ತುಸು ಹೊತ್ತಿನ ಮೇಲೆ ಚೆನ್ನಬಸವಣ್ಣನವರು ಕೇಳಿದರು.

“ಆ ದಿನ ಮಧ್ಯಾಹ್ನ ಎಲ್ಲರೂ ವಿಜಯೋತ್ಸವದ ಮೆರವಣಿಗೆಗೆ ಹೋಗಿದ್ದಾಗ ಅಗ್ನಿ ಅಪಘಾತ ನಡೆದದ್ದು. ಆಗ ಬಿಡಾರದಲ್ಲಿ ಮಹಾರಾಣಿಯವರೊಬ್ಬರೇ ಇದ್ದರೆಂದು ಹೇಳುತ್ತಾರೆ. ಸುಟ್ಟು ಭಸ್ಮವಾಗಿದ್ದ ಒಂದು ದೇಹದ ಅಸ್ತಿಗಳು ಮಾತ್ರ ಅವಶೇಷದಲ್ಲಿ ಸಿಕ್ಕವು, ಬಿಜ್ಜಳರಾಯರು ಅದನ್ನು ಕುಂಭದಲ್ಲಿಟ್ಟು ಕರ್ಹಾಡಕ್ಕೆ ಕಳುಹಿಸಿದರಂತೆ,”

-ಎಂದು ಅಗ್ಗಳನು ಉತ್ತರ ಕೊಟ್ಟನು.
“ರಾಣಿಯ ಪರಿವಾರದವರೇನಾದರು?

“ಬಿಜ್ಜಳನು ಕುಂಭದೊಡನೆ ಅವರನ್ನು ಕರ್ಹಾಡಕ್ಕೆ ಕಳುಹಿಸಿದುದಾಗಿ ಹೇಳುತ್ತಾರೆ.”