ಪುಟ:ಕ್ರಾಂತಿ ಕಲ್ಯಾಣ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦

ಕ್ರಾಂತಿ ಕಲ್ಯಾಣ

ನೂರ್ಮಡಿ ತೈಲಪನ ಸಹೋದರನೂ, ಚಾಲುಕ್ಯ ಅರಸೊತ್ತಿಗೆಗೆ ನ್ಯಾಯವಾದ ಉತ್ತರಾಧಿಕಾರಿಯೂ ಆದ ಜಗದೇಕಮಲ್ಲನನ್ನು ಬಿಜ್ಜಳನು ಹೆಸರಿಗೆ ಸಿಂಹಾಸನದಲ್ಲಿ ಕುಳ್ಳಿರಿಸಿ, ಬಂಧನದಲ್ಲಿಟ್ಟು ತಾನೇ ನಿಜವಾದ ಅರಸನಾಗಿದ್ದನು.

ತೈಲಪನಂತೆ ಜಗದೇಕಮಲ್ಲನೂ ವಿಲಾಸಪ್ರಿಯನಾಗಿದ್ದನು. ಗಣಿಕೆಯರು, ಮಧುಪಾನ, ಬೇಟೆ, ಇವು ಮೂರು ಅವನ ನಿತ್ಯವ್ಯಸನಗಳು. ಕಲ್ಯಾಣದಿಂದ ಎರಡು ಗಾವುದ ದೂರದಲ್ಲಿದ್ದ ಒಂದು ದೊಡ್ಡ ಅರಣ್ಯದಲ್ಲಿ ಅವನ ಬೇಟೆಗಾಗಿಯೆ ಜಿಂಕೆ, ಹಂದಿ, ಕಾಡುಕೋಣ, ಕಡವೆ ಮುಂತಾದ ವನ್ಯಮೃಗಗಳನ್ನು ರಕ್ಷಿಸಿಟ್ಟಿದ್ದರು. ತಿಂಗಳಲ್ಲಿ ಒಂದು ಸಾರಿಯಾದರೂ ಜಗದೇಕಮಲ್ಲನು ಬೇಟೆಗಾಗಿ ಅಲ್ಲಿಗೆ ಹೋಗಿ ಕೆಲವು ದಿನಗಳು ಶಿಬಿರವಾಸದಲ್ಲಿದ್ದು ಹಿಂದಿರುಗುವನು. ಜಗದೇಕಮಲ್ಲನಿಗಾಗಿ ಸುಂದರ ಗಣಿಕೆಯರನ್ನು ಹುಡುಕಿ ತರಲು ಒಬ್ಬ ಪ್ರತ್ಯೇಕ ಅಧಿಕಾರಿಯಿದ್ದನು. ತ್ರಿಪುರಿ, ಗೋವೆ, ಜಗನ್ನಾಥ, ಕಾಂಚೀ, ಮಧುರೆ ಮುಂತಾದ ಸ್ಥಳಗಳಿಂದ ಆರಿಸಿ ತಂದ ಚಲುವೆಯರಾದ ಗಾಯಕಿಯರು, ನರ್ತಕಿಯರು ಅವನ ಗಣಿಕಾಪರಿವಾರದಲ್ಲಿದ್ದರು. ಈ ವಿಲಾಸಜೀವನದ ಹೊನ್ನ ಪಂಜರದಿಂದ ಪಾರಾಗಿ ಚಾಲುಕ್ಯ ರಾಜ್ಯವನ್ನು ಪುನಃ ಪ್ರತಿಷ್ಠಿಸುವೆನೆಂಬ ದೂರದ ಆಸೆಯೂ ಜಗದೇಕಮಲ್ಲನಿಗಿಲ್ಲವೆಂದು ಬಿಜ್ಜಳನಿಗೆ ದೃಢವಾಗಿತ್ತು. ಈ ಕಾರಣದಿಂದ ಜಗದೇಕಮಲ್ಲನನ್ನು ಸೆರೆಯಲ್ಲಿಟ್ಟಿದ್ದ ಅರಮನೆಯ ಕಟ್ಟುಕಾಯಿದೆಗಳು ಬಹುಮಟ್ಟಿಗೆ ಸಡಲಿಸಲ್ಪಟ್ಟಿದ್ದುವು.

ರಾಜಗೃಹದ ಮಹಾದ್ವಾರದಲ್ಲಿ ರಥ ನಿಂತಿತು. ನಾರಣಕ್ರಮಿತನು ಭಟನೊಬ್ಬನನ್ನು ಹತ್ತಿರ ಕರೆದು, "ಕರ್ಣದೇವರಸರು ಚಾವಡಿಯಲ್ಲಿರುವರೆ? ನಾವು ಅವರನ್ನು ನೋಡಬೇಕಾಗಿದೆ" ಎಂದನು.

ರಥದ ಅಚ್ಚುಕಟ್ಟು, ಒಳಗಿದ್ದವರ ಶ್ರೀಮಂತ ಉಡಿಗೆ ತೊಡಿಗೆಗಳು, ರಥಕ್ಕೆ ಕಟ್ಟಿದ್ದ ಜಾತಿ ಕುದುರೆಗಳ ಅಲಂಕಾರ, ಸಾರಥಿ ಕುಳಿತಿದ್ದ ಠೀವಿ, ಇವುಗಳನ್ನು ಕಂಡು ಬೆದರಿದ ಭಟನು, "ಹೆಗ್ಗಡೆಯನ್ನು ಕರೆಯುತ್ತೇನೆ," ಎಂದು ಒಳಗೆ ಹೋದನು.

ಕೊಂಚ ಹೊತ್ತಿನ ಮೇಲೆ ಚಾವಡಿಯ ಕರಣಿಕನು ರಥದ ಬಳಿಗೆ ಬಂದು, "ಸಂಜೆ ವೈಹಾಳಿಗೆ ಹೋದ ಕರ್ಣದೇವರಸರು ಇನ್ನೂ ಹಿಂದಿರುಗಿಲ್ಲ," ಎಂದು ಹೇಳಿದನು.

ನಗರದ ವಿಲಾಸ ಗೃಹವೊಂದರಲ್ಲಿ ಯಾವಳೋ ಶ್ರೀಮಂತ ಸಾಮಂತ ಪುತ್ರಿಯೊಡನೆ ಕರ್ಣದೇವನು ವಿಹರಿಸುತ್ತಿರುವನೆಂದೂ, ಸರಿರಾತ್ರಿಯವರೆಗೆ