ಪುಟ:ಕ್ರಾಂತಿ ಕಲ್ಯಾಣ.pdf/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೧೮

ಕ್ರಾಂತಿ ಕಲ್ಯಾಣ


ವೇಡೆಯಿಂದ ಅದೃಶ್ಯನಾದ ಚಾಲುಕ್ಯರಾಜ್ಯದ ಉತ್ತರಾಧಿಕಾರಿ ಬಾಲಕನು ಕಲ್ಯಾಣಕ್ಕೆ ಬಂದನೆಂಬುದನ್ನು ಬಿಜ್ಜಳನ ಗೂಢಚಾರರು ತಿಳಿಯಲು ಹೆಚ್ಚು ತಡವಾಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ನಾವು ಈ ಬಾಲಕನನ್ನು ಮಹಮನೆಯಲ್ಲಿಟ್ಟುಕೊಳ್ಳುವುದು ಅಪಘಾತಕ್ಕೆ ಆಹ್ವಾನವಿತ್ತಂತೆ. ಅಗ್ಗಳದೇವರು ಒಪ್ಪುವುದಾದರೆ ನಾನು ಈಗಲೆ ಈ ಬಾಲಕನನ್ನು ನಗರಕ್ಕೆ ಸಮೀಪವಿರುವ ಒಂದು ರಹಸ್ಯ ಸ್ಥಾನಕ್ಕೆ ಕಳುಹಿಸುತ್ತೇನೆ. ಅಲ್ಲಿ ಬಾಲಕನು ಸುರಕ್ಷಿತವಾಗಿ ಎರಡು ದಿನಗಳು ವಿಶ್ರಮಿಸಿಕೊಳ್ಳಲಿ. ಕರ್ಹಾಡದ ಯಾತ್ರೆಗೆ ಏರ್ಪಡಿಸಲು ನಮಗೆ ಅವಕಾಶವಾಗುವುದು.”

ಅಗ್ಗಳ ಉಷಾವತಿಯರು ಇದಕ್ಕೊಪ್ಪಿದರು. ಆದರೆ ಪರಿಚಯವಿಲ್ಲದ ಜನರೊಡನೆ ಹೋಗಲು ಬಾಲಕನು ನಿರಾಕರಿಸಿದರೇನು ಮಾಡುವುದು? ಅಗ್ಗಳನು ಈ ಸಮಸ್ಯೆಯ ಪರಿಹಾರವನ್ನು ಯೋಚಿಸುತ್ತಿದ್ದಂತೆ ಉಷಾವತಿ ಚತುರತೆಯಿಂದ ಪ್ರೇಮಾರ್ಣವನನ್ನು ಒಪ್ಪಿಸಿದಳು.

ಆ ದಿನ ಮುಂಜಾವಿನಲ್ಲಿ ಸಮೀಪದ ಗ್ರಾಮದಿಂದ ಮಹಮನೆಗೆ ಬೇಕಾದ ಕಾಯಿಪಲ್ಲೆಗಳನ್ನು ತಂದಿದ್ದ ಗ್ರಾಮಸ್ಥರು ಮಧ್ಯಾಹ್ನ ಹಿಂದಿರುಗಿದಾಗ ಅವರ ಸಂಗಡಿದ್ದ ಮೂವರು ಬಾಲಕರಲ್ಲಿ ಒಬ್ಬನು ಚಾಲುಕ್ಯರಾಣಿ ಕಾಮೇಶ್ವರಿಯ ಮಗನೆಂಬುದನ್ನು ಯಾರೂ ತಿಳಿಯುವಂತಿರಲಿಲ್ಲ. ಬಾಲಕನು ತೊಟ್ಟಿದ್ದ ಮಾಸಿದ ಅಂಗಿ ಚಲ್ಲಣಗಳು, ಕೊಳೆ ತುಂಬಿ ಕಂಗೆಟ್ಟಿದ್ದ ಮುಖ, ಇವುಗಳು ಅವನು ಗ್ರಾಮವಾಸಿ ಎಂಬುದನ್ನು ಸ್ಪಷ್ಟಗೊಳಿಸಿತ್ತು.

ಉಷಾವತಿಯ ಪ್ರಸಾದನ ನೈಪುಣ್ಯ, ರಾಜಕುಮಾರನನ್ನು ಹಳ್ಳಿಗಾಡಿನ ಬಾಲಕನನ್ನಾಗಿ ಮಾಡಿತ್ತು.

***

ತಾನು ಕಲ್ಯಾಣದಲ್ಲಿಲ್ಲದಿದ್ದಾಗ ರಾಜಗೃಹದಲ್ಲಿ ಏನು ನಡೆಯಿತು? ಜಂಗಮ ವೇಷದಲ್ಲಿ ಜಗದೇಕಮಲ್ಲನ ಧರ್ಮೋಪದೇಶಿಯಾಗಿದ್ದ ಬೊಮ್ಮರಸ ಅರ್ಥಾತ್ ಬ್ರಹ್ಮೇಂದ್ರ ಶಿವಯೋಗಿಯೂ, ಅವರ ಶಿಷ್ಯ ಬ್ರಹ್ಮಶಿವ ಪಂಡಿತನೂ ಏನಾದರು? ಈ ವಿಷಯಗಳೊಂದೂ ಅಗ್ಗಳನಿಗೆ ತಿಳಿಯದು.

ಯಾತ್ರಾಶಿಬಿರದಿಂದ ಬಾಡಿಗೆಯ ರಥದಲ್ಲಿ ಮಹಮನೆಗೆ ಬರುತ್ತಿದ್ದಾಗ ನಾಗರಿಕರ ಕಾತರದೃಷ್ಟಿ, ಸಂಯತ ವರ್ತನೆಗಳಿಂದ ಕಲ್ಯಾಣದ ರಾಜಕೀಯ ಪರಿಸ್ಥಿತಿಯಲ್ಲಿ ತಲೆದೋರಿದ್ದ ವಿಚಿತ್ರ ಪರಿವರ್ತನೆಯನ್ನು ಅವನು ತಿಳಿದನು. ಕಲ್ಯಾಣವನ್ನು ಬಿಟ್ಟು ದಕ್ಷಿಣಕ್ಕೆ ವಲಸೆ ಹೋಗುವ ಶರಣರ ನಿರ್ಧಾರವನ್ನು ಚೆನ್ನಬಸವಣ್ಣನವರು ತಿಳಿಸಿದಾಗ ಅವನು ನಿಜವಾಗಿ ಚಕಿತನಾಗಿದ್ದನು. ಕೆಲವೇ