ಪುಟ:ಕ್ರಾಂತಿ ಕಲ್ಯಾಣ.pdf/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೨೧

ಮೀಸೆಗಳು ಕೃತಕವಾದರೂ, ಉಳಿದ ವಿಚಾರಗಳಲ್ಲಿ ಅವರು ನಿಜವಾದ ಜಂಗಮ ಸನ್ಯಾಸಿಯೇ ಆಗಿದ್ದಾರೆ. ಕರ್ಣದೇವರಸರು ಈಗೊಂದು ವಾರಕ್ಕೆ ಮೊದಲು ರಾಜಗೃಹದ ತಮ್ಮ ಬಿಡಾರಕ್ಕೆ ಬಂದರು. ಈಗ ಅಲ್ಲಿ ಅವರದೇ ಸರ್ವಾಧಿಕಾರ. ಮೊದಲೆರಡು ದಿನಗಳು ಏನನ್ನೋ ಕಳೆದುಕೊಂಡವನಂತೆ ಪೆಚ್ಚುಮೋರೆ ಹಾಕಿಕೊಂಡು ಮಲಗಿದ್ದವರು ಈಗ ಗೆಲುವಾಗಿದ್ದಾರೆ. ಗಣಿಕಾ ಪರಿವಾರದ ಹೆಗ್ಗಡತಿಯರ ಸರದಿ ಪುನಃ ಪ್ರಾರಂಭವಾಗಿದೆ. ಅವರೊಂದು ದಿನ, 'ಈ ಜಂಗಮಯ್ಯಗಳ ಪ್ರಭಾವದಿಂದ ನನ್ನ ಭಂಡರಾಜ ಯೋಗಿರಾಜನಾಗಿದ್ದಾನೆ,' ಎಂದು ಜಗದೇಕಮಲ್ಲರಸರನ್ನು ಗೇಲಿಮಾಡಿದರಂತೆ. ಪರಿವಾರದವರಿಗೆ ಇದು ನಿತ್ಯಹಾಸ್ಯದ ವಿಷಯವಾಗಿದೆ. ನಿಮ್ಮ ಖಾಸಾ ದಾಸಿ ವಸಂತಾ, ದಿನಕ್ಕೆರೆಡು ಸಾರಿ, 'ಒಡೆಯರು ಎಂದು ಬರೋದು?” ಎಂದು ಕೇಳುತ್ತಿರುತ್ತಾಳೆ. ನಿಮ್ಮೊಡನೆ ಅವಳ ವ್ಯವಹಾರ ಜಗದೇಕಮಲ್ಲರಸರ ರಾಜಕೀಯಕ್ಕಿಂತ ಆತುರದ್ದು ಎಂತ ಕಾಣುತ್ತದೆ.”

ಬ್ರಹ್ಮಶಿವನ ಚುಚ್ಚುನುಡಿಗಳನ್ನು ಕೇಳಿಯೂ ಕೇಳದಂತೆ ಅಗ್ಗಳನು, “ಮಂಗಳವೇಡೆಯ ಅಗ್ನಿ ಅಪಘಾತದ ವಿಚಾರ ನಿಮಗೇನಾದರೂ ತಿಳಿದಿದೆಯೆ?” ಎಂದು ಕೇಳಿದನು.

“ನಗರದಲ್ಲಿ ಜನರಾಡಿಕೊಳ್ಳುವುದನ್ನು ಜಗದೇಕಮಲ್ಲರಸರಿಗೆ ತಿಳಿಸಿದೆ, ಅವರು ನಂಬಲಿಲ್ಲ.”
“ಯಾವುದನ್ನು ನಂಬಲಿಲ್ಲ?”
“ಅಪಘಾತದಲ್ಲಿ ರಾಣಿ ಕಾಮೇಶ್ವರೀದೇವಿಯವರು ಮಡಿದರೆಂಬುದನ್ನು.”
ಅಗ್ಗಳನು ನಿಟ್ಟುಸಿರಿಟ್ಟು ಹೇಳಿದನು : “ನಿಜವಾಗಿ ರಾಣಿಯವರ ಅವಸಾನವಾಯಿತು ಬ್ರಹ್ಮಶಿವ, ಅಗ್ನಿ ಅಪಘಾತ ನಡೆಯುವ ಮೊದಲು ರಾಣಿಯವರು ಜಗದೇಕಮಲ್ಲರಸರಿಗೆ ಒಂದು ರಹಸ್ಯ ಸಂದೇಶ ಕಳುಹಿಸಿದ್ದಾರೆ. ಅದನ್ನು ಅವರಿಗೆ ಮುಟ್ಟಿಸುವುದು ಹೇಗೆ ಎಂದು ಯೋಚಿಸುತ್ತಿದ್ದೇನೆ.”

“ಕಾಮೋಪದೇಶಿಯಾಗಿ ನೀವೇ ರಾಜಗೃಹಕ್ಕೆ ಬರಬಹುದು. ಇಲ್ಲವೇ ಸಂದೇಶವನ್ನು ನನ್ನ ಕೈಗೆ ಕೊಟ್ಟರೆ ರಹಸ್ಯವಾಗಿ ಜಗದೇಕಮಲ್ಲರಸರಿಗೆ ತಲುಪಿಸುತ್ತೇನೆ.”

“ಆ ಎರಡು ಮಾರ್ಗಗಳೂ ಈಗ ಸಾಧ್ಯವಲ್ಲ.” ಎಂದು ಅಗ್ಗಳನು ಮಂಗಳವೇಡೆಯ ಪಾನಶಾಲೆಯಲ್ಲಿ ನಡೆದ ಘಟನೆಯನ್ನು ವಿವರಿಸಿ, “ಈಗ ನಾನು ರಾಜಕೀಯ ಅಪರಾಧಿಯಂತೆ ಮಂಗಳವೇಡೆಯಿಂದ ಓಡಿಬಂದು ಮಹಮನೆಯಲ್ಲಿ ಆಶ್ರಯ ಪಡೆದಿದ್ದೇನೆ. ನಾನು ಇಲ್ಲಿರುವ ವಿಚಾರ ಕರ್ಣದೇವನಿಗೆ