ಪುಟ:ಕ್ರಾಂತಿ ಕಲ್ಯಾಣ.pdf/೩೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ ೩೨೩ “ನೀವು ನನ್ನನ್ನು ವಂಚಿಸಿದಿರಿ, ಅಗ್ಗಳ, ದೂತನೆಂದು ಹೇಳಿ ದೂತಿಯನ್ನು ಕರೆತಂದಿರಿ ?” ಎಂದನು. ಅಗ್ಗಳನ್ನು ಹೇಳಿದನು : ನಿಮ್ಮ ಅವಿವೇಕ ನಿಮ್ಮನ್ನು ವಂಚಿಸಿತು, ಬ್ರಹ್ಮಶಿವ ಪಂಡಿತರೆ. ರಾಜದೂತನು ಹೆಂಗಸಾಗಲಿ, ಗಂಡಸಾಗಲಿ, ಪುರುಷನೆಂದು ತಿಳಿದು, ಪುರುಷನಂತೆ ಸಂಬೋಧಿಸುವುದು ರಾಜಕೀಯ ಸಂಪ್ರದಾಯ. ಅದನ್ನು ತಿಳಿಯದೆ ನೀವು ಮೋಸ ಹೋದಿರಿ.” ನೊಂದವನಂತೆ ದೈನ್ಯದಿಂದ ಬ್ರಹ್ಮಶಿವ, “ಈಗೇನು ಮಾಡಬೇಕೆಂದು ಹೇಳುತ್ತೀರಿ ?” ಎಂದು ಪ್ರಶ್ನಿಸಿದನು. - ಅಗ್ಗಳ ನಕ್ಕು ನುಡಿದನು : “ನೀವು ಚಿಕ್ಕವರಾಗಿದ್ದಾಗ ದೊಡ್ಡಾಟದಲ್ಲಿ ಹೆಣ್ಣುವೇಷ ಧರಿಸುತ್ತಿದ್ದರಂತೆ. ಆಗ ನನಗೆ ನೋಡಲನುವಾಗಲಿಲ್ಲ. ಈಗ ನೀವು ಕೃಪೆಯಿಂದ ಸಜ್ಜಾಗಿ ಎದುರಿಗೆ ನಿಂತರೆ ನೋಡಿ ಆನಂದಿಸುತ್ತೇನೆ.” ಎಲ್ಲವನ್ನೂ ಗಂಭೀರವಾಗಿ ನಿಂತು ನೋಡುತ್ತಿದ್ದ ಉಷಾವತಿ, “ನಿಮ್ಮ ಈ ನಗೆಯಾಟ ನಿಲ್ಲದೆ ಹೋದರೆ, ರಾಜಗೃಹಕ್ಕೆ ಹೋಗುವ ಯೋಚನೆಯನ್ನೇ ಬಿಡಬೇಕಾಗುವುದು, ಬ್ರಹ್ಮಶಿವ ಪಂಡಿತರೆ,” ಎಂದಳು. ಅಗ್ಗಳನು ಚಕಿತನಾಗಿ ಕೊಠಡಿಯ ಬೆಳಕಿಂಡಿಯ ಕಡೆ ದೃಷ್ಟಿ ಹಾಯಿಸಿದನು. ಸಂಜೆ ಮುಗಿಯುತ್ತ ಬಂದಿತ್ತು, ಅತಿಥಿಗೃಹದ ತಮ್ಮಡಿ ದೀಪ ಹಚ್ಚಿಟ್ಟು ಹೋಗಲು ಬರಬಹುದು. ಈ ನಿರರ್ಥಕ ನಗೆಯಾಟದಲ್ಲಿ ಎಷ್ಟು ಕಾಲ ಕಳೆದೆವು ನಾವು - ಎಂದು ಅವನು ಮನಸ್ಸಿನಲ್ಲಿಯೇ ಅಳುಕಿದನು. ಆದರೆ ಉಪಹಾಸದಲ್ಲಿ ಪ್ರಾರಂಭವಾದ ಸಲಹೆ ವಾಸ್ತವವಾದರೆ? ಬ್ರಹ್ಮಶಿವನ ಉಡುಪುಗಳನ್ನು ಹಾಕಿಕೊಂಡು ರಾಜಗೃಹಕ್ಕೆ ಹೋಗಲು ಉಷಾವತಿ ಸಿದ್ಧವಾಗಿದ್ದಳು. ಆದರೆ ಅವಳನ್ನು ಬುದ್ಧಿಪೂರ್ವಕವಾಗಿ ವಿಪತ್ತಿಗೆ ತಳ್ಳುವುದು ಯುಕ್ತವೆ? ಏನು ಮಾಡಬೇಕೆಂಬುದನ್ನು ನಿರ್ಧರಿಸಲಾರದೆ ಅಗ್ಗಳನು ಯೋಚಿಸುತ್ತಾ ನಿಂತನು. ಉಷಾವತಿ ಅವನ ಇಂಗಿತವನ್ನರಿತು, ದೃಢಕಂಠದಿಂದ, “ನೀವು ಏನೇ ಹೇಳಿರಿ, ಸಂದೇಶದ ನುಡಿಗಳನ್ನು ನಾನು ಬರೆದುಕೊಡುವುದಿಲ್ಲ. ಪ್ರಭುಗಳನ್ನು ನೋಡಿ ಅದನ್ನು ಅವರಿಗೆ ತಿಳಿಸುತ್ತೇನೆ. ನನ್ನ ವೇಷಾಂತರಕ್ಕೆ ಅನುವುಮಾಡಿಕೊಟ್ಟರೆ ಒಳ್ಳೆಯದು,” ಎಂದಳು. - ಅಗ್ಗಳನು ಬ್ರಹ್ಮಶಿವನ ಕಡೆ ತಿರುಗಿ, “ಸಂಚಿನ ಸೂತ್ರಗಳು ಈಗ ಹೆಣ್ಣಿನ ಕೈಯಲ್ಲಿವೆ, ಪಂಡಿತರೆ. ಶಕ್ತಿಯ ನೆಲೆ ಹೆಣ್ಣು ಎಂಬುದು ನನ್ನ ಅನುಭವ. ಉಷಾವತಿ ಈಗ ಶಕ್ತಿ ದೇವತೆ. ಅವಳು ಹೇಳಿದಂತೆ ನಾವು ಮಾಡಬೇಕು.