ಪುಟ:ಕ್ರಾಂತಿ ಕಲ್ಯಾಣ.pdf/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೨೪

ಕ್ರಾಂತಿ ಕಲ್ಯಾಣ


ಆ ಗಂಟಿನಲ್ಲಿ ನನ್ನ ಬಟ್ಟೆಗಳಿವೆ. ಅವುಗಳಲ್ಲಿ ನಿಮಗೆ ಬೇಕಾದ್ದನ್ನು ತೆಗೆದುಕೊಂಡು ನಿಮ್ಮ ಬಟ್ಟೆಗಳನ್ನು ಹೊರಗೆಸೆದರೆ ನಮ್ಮ ಹೊಣೆ ಮುಗಿಯಿತು,” ಎಂದು ಹೇಳಿ ಉಷಾವತಿಯನ್ನು ಕರೆದುಕೊಂಡು ಹೊರಗೆ ಹೋದನು.

ದೀಪ ತೆಗೆಸಿಕೊಂಡು ಪುನಃ ಅಗ್ಗಳನು ಅಲ್ಲಿಗೆ ಬಂದಾಗ ಸಂಗಡಿದ್ದ ವ್ಯಕ್ತಿ ಬ್ರಹ್ಮಶಿವನಂತೆ ವೇಷಧರಿಸಿದ ಉಷಾವತಿಯಾಗಿದ್ದಳು.

ಮಹಮನೆಯಿಂದ ರಾಜಗೃಹಕ್ಕೆ ಹೋಗಲು, ನಗರದ ಅಂಚಿನಲ್ಲಿದ್ದ ಜನನಿಬಿಡವಲ್ಲದ ರಾಜಮಾರ್ಗದಲ್ಲಿ ಸುಮಾರು ಅರ್ಧಪ್ರಹರಕಾಲ ನಡೆಯಬೇಕಾಗಿತ್ತು. ಅಗ್ಗಳ ಬ್ರಹ್ಮಶಿವರು ದಾರಿಯುದ್ದಕ್ಕೂ ಉಷಾವತಿಯ ಸಂಗಡಿದ್ದು, ರಾಜಗೃಹದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು ವಿವರಿಸಿದರು.

ಮಹಾದ್ವಾರದ ಬೆಳಕು ಕಂಡಾಗ ಅವರು ರಾಜಮಾರ್ಗದ ಪಾರ್ಶ್ವದಲ್ಲಿ ನಿಂತರು. ಬೀಳ್ಕೊಡುವ ಮುನ್ನ ಅಗ್ಗಳನು, “ಈ ಸಾಹಸದಲ್ಲಿ ನೀನು ಸಿಕ್ಕಿಬಿದ್ದರೆ ಏನು ಮಾಡುವೆ ?” ಎಂದು ಉಷಾವತಿಯನ್ನು ಕೇಳಿದನು.

ರಾಣಿಯವರು ನನಗೆ ಕೊಟ್ಟಿರುವ ಈ ಉಂಗುರದಲ್ಲಿ ವಿಷವಿದೆ. ಭಟರು ನನ್ನನ್ನು ಹಿಡಿಯುವಷ್ಟರಲ್ಲಿ ದೇಹದಿಂದ ಪ್ರಾಣವಾಯು ಹಾರಿಹೋಗುತ್ತದೆ.

ಅಗ್ಗಳನು ಹೇಳಿದನು : “ನೀನು ಚತುರೆಯೆಂದು ಒಪ್ಪಿಕೊಳ್ಳುತ್ತೇನೆ. ಉಷಾವತಿ. ಆದರೂ ನಿನ್ನನ್ನು ಬುದ್ಧಿಪೂರ್ವಕವಾಗಿ ವಿಪತ್ತಿಗೆ ತಳ್ಳುತ್ತಿರುವೆನೆಂದು ಮನಸ್ಸು ಅಳುಕುತ್ತಿದೆ, ಇನ್ನೂ ಕಾಲ ಮೀರಿಲ್ಲ. ಸಂದೇಶವನ್ನು ಬ್ರಹ್ಮಶಿವ ಪಂಡಿತರಿಗೆ ತಿಳಿಸಿ ನಾವು ಹಿಂತಿರುಗಬಹುದು.”

ಉಷಾವತಿ ತಲೆಯಾಡಿಸಿ ಉತ್ತರ ಕೊಟ್ಟಳು : ನನ್ನ ಮೇಲಿನ ಪ್ರೇಮ ನಿಮ್ಮನ್ನು ನುಡಿಸುತ್ತಿದೆ, ಅಗ್ಗಳದೇವ. ಚಾಲುಕ್ಯ ರಾಜ್ಯೋದ್ಧಾರದ ಈ ಒಳ ಸಂಚಿಗೆ ಸೇರಿದಾಗಲೇ ನಾವು ನಮ್ಮ ವೈಯಕ್ತಿಕ ಸಂಬಂಧಗಳನ್ನು ಮರೆತವಲ್ಲವೆ? ರಾಣಿಯ ಅವಸಾನವಾಗಿ ಈಗಾಗಲೆ ಎಷ್ಟು ದಿನಗಳು ಕಳೆದವು ! ಆದರೂ ಅವರ ಕೊನೆಯ ಸಂದೇಶವನ್ನು ಜಗದೇಕಮಲ್ಲರಸರಿಗೆ ಮುಟ್ಟಿಸಲು ನಾವು ಶಕ್ತರಾಗಿಲ್ಲ. ಏನೇ ಆಗಲಿ, ಈ ದಿನ ನಾನು ರಾಜಗೃಹವನ್ನು ಪ್ರವೇಶಿಸಿ ಜಗದೇಕಮಲ್ಲರಸರನ್ನು ನೋಡಲು ನಿರ್ಧರಿಸಿದ್ದೇನೆ. ಅದಕ್ಕಾಗಿ ವೇಷ ಹಾಕಿಕೊಂಡು ಬಂದದ್ದಾಯಿತು. ಈಗ ಹಿಂದಿರುಗುವುದಿಲ್ಲ.”

ಅಗ್ಗಳನು ತುಸು ಗಂಭೀರವಾಗಿ, “ನಿನ್ನ ಸ್ಟೇಚ್ಛೆಯಿಂದಲೆ ಈ ಕಾರ್ಯ ಮಾಡುತ್ತಿರುವೆ, ಉಷಾ. ಇದರಲ್ಲಿ ನನ್ನ ಒತ್ತಾಯವೇನೂ ಇಲ್ಲ, ನೆನಪಿರಲಿ,” ಎಂದನು.