ಪುಟ:ಕ್ರಾಂತಿ ಕಲ್ಯಾಣ.pdf/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೨೫


ಉಷಾ ನಸುನಕ್ಕು ಹೇಳಿದಳು. “ನೀವು ಚಿಂತಿಸುವ ಅಗತ್ಯವಿಲ್ಲ, ಅಗ್ಗಳದೇವ. ನಾನು ನಿಮ್ಮ ಪ್ರಣಯಿನಿಯಾದರೂ ಸ್ವತಂತ್ರಳಾದ ಹೆಣ್ಣು. ರಾಣಿಯವರ ಸೇವೆಯಲ್ಲಿ ನನ್ನ ಪ್ರಾಣವನ್ನು ಸಲ್ಲದ ನಾಣ್ಯದಂತೆ ಬಿಸುಡುವ, ಅಥವಾ ಉಳಿಸಿಕೊಳ್ಳುವ ಸರ್ವ ಸ್ವಾತಂತ್ರ್ಯ ನನಗಿರುತ್ತದೆ,” -ಎಂದು ಅವಳು ಅಗ್ಗಳ ಬ್ರಹ್ಮಶಿವರಿಂದ ಬೀಳ್ಕೊಂಡು ರಾಜಗೃಹದ ಮಹಾದ್ವಾರದ ಕಡೆಗೆ ನಡೆದಳು.

***

ಅಂದು ಮಹಾದ್ವಾರದಲ್ಲಿ ನಾಲ್ವರು ಭಟರು ಕಾವಲಿದ್ದರು. ಅವರೆಲ್ಲರಿಗೂ ಬ್ರಹ್ಮಶಿವ ಅರ್ಥಾತ್ ಹರೀಶರುದ್ರನ ಪರಿಚಯವಿತ್ತು, ತುಸು ಹೊತ್ತಿನ ಮೇಲೆ ಬಿಲ್ವಪತ್ರೆ ತುಂಬಿದ ಜೋಳಿಗೆಯನ್ನು ಕಂಕುಳಲ್ಲಿ ಇರುಕಿಸಿ ಜಗ್ಗು ಹಾಕುತ್ತ ಮಹಾದ್ವಾರಕ್ಕೆ ಬಂದ ವ್ಯಕ್ತಿ ಹರೀಶರುದ್ರನೆಂದೇ ಅವರು ಭಾವಿಸಿದರು.

ಅವರಲ್ಲೊಬ್ಬನು ಅಣಕದ ದನಿಯಿಂದ, “ಇಂದು ಅಯ್ಯನೋರು ತಡವಾಗಿ ಬರ್ತದಾರ ; ಈಸೊಂದು ಪತ್ರ ಬಿಡಿಸಲಿಕ್ಕೆ ಬಾಳಹೊತ್ತು ಇಡಿದಿರಬೇಕು” ಎಂದು ನಗೆಯಾಡಿದನು.

ಕಾವಲುಗಾರರಿಗೆ ಹೇಗೆ ಉತ್ತರ ಕೊಡಬೇಕೆಂಬುದನ್ನು ಬ್ರಹ್ಮಶಿವ ಉಷಾವತಿಗೆ ತಿಳಿಸಿದ್ದನು. ಅದರಂತೆ ಅವಳು ಅಣಕದ ದನಿಯಿಂದ, “ಕೈಲಾಸಕ್ಕೆ ಹೋಗಿ ಬಂದೀನಿ, ಅಣ್ಣ. ಅದಕಾ ತಡಾ ಆತು.” ಎಂದು ಉತ್ತರ ಕೊಟ್ಟು ಒಳಗೆ ಹೋದಳು.

ಅಷ್ಟರಲ್ಲಿ ಹೊರಗೆ ಹೋಗಿದ್ದ ನಾಲ್ಕಾರು ಮಂದಿ ಊಳಿಗದವರು ಅಲ್ಲಿಗೆ ಬಂದರು. ಅವರಲ್ಲಿಬ್ಬರು ತುಂಬು ಪ್ರಾಯದ ತರುಣಿಯರು. ಕಾವಲುಗಾರರ ದೃಷ್ಟಿ ಸಹಜವಾಗಿ ಅವರ ಕಡೆ ತಿರುಗಿತು. ಅನುಮತಿ ಪತ್ರವನ್ನು ತೋರಿಸುವ ತೊಂದರೆಯೂ ತಪ್ಪಿತು ಉಷಾವತಿಗೆ.

ಮಹಾದ್ವಾರದಿಂದ ಒಳಗೆ ಹೋಗುತ್ತಲೆ ದೊಡ್ಡ ಉದ್ಯಾನ. ನಡುವೆ ಜಗದೇಕಮಲ್ಲರಸರನ್ನು ಬಂಧನದಲ್ಲಿಟ್ಟಿದ್ದ ದೊಡ್ಡ ಅರಮನೆ. ರಕ್ಷಕ ಸೈನ್ಯದಳದ ಅಧಿಕಾರಿಗಳ ಚಾವಡಿ ಬಿಡಾರಗಳೂ ಅಲ್ಲಿಯೇ ಇದ್ದವು. ಅರಮನೆಯ ಬಲಭಾಗದಲ್ಲಿ ಕರ್ಣದೇವ ವಾಸಮಾಡುತ್ತಿದ್ದ ಧವಳಾರ ಮತ್ತು ಗಣಿಕಾವಾಸದ ಕೊಠಡಿಗಳು. ಎಡಗಡೆಗೆ ಹೆಗ್ಗಡಿತಿಯರ ಪ್ರತ್ಯೇಕ ವಾಸಗೃಹಗಳು ಮತ್ತು ಅತಿಥಿಶಾಲೆ. ಹಿಂಭಾಗದಲ್ಲಿ ಅಡಿಗೆ ಸಾಲು, ಊಟದಮನೆ, ಸ್ನಾನದಮನೆ ಮುಂತಾದವು. ರಾಜಗೃಹದ ಈ ಹರವನ್ನು ಬ್ರಹ್ಮಶಿವನು ಉಷಾವತಿಗೆ ಮೊದಲೇ ವಿವರಿಸಿದ್ದನು. ಅವನು ಹೇಳಿದ್ದಂತೆ ಉಷಾವತಿ ತೋಟವನ್ನು ದಾಟಿ ಅರಮನೆಯ ಎಡಭಾಗಕ್ಕೆ ಬಂದಳು. ಅಲ್ಲಿ