ಪುಟ:ಕ್ರಾಂತಿ ಕಲ್ಯಾಣ.pdf/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೩೬

ಕ್ರಾಂತಿ ಕಲ್ಯಾಣ


ಮಹಾರಾಜರ ಆಳ್ವಿಕೆಯಲ್ಲಿರುವೆನೆಂದು ಅವರು ತಿಳಿದಿದ್ದಾರೆ.

ಪಾತ್ರೆಯನ್ನು ಬರಿದಾಗಿಸಿ ಕೆಳಗಿಟ್ಟು ಕರ್ಣದೇವನೆಂದನು : “ಶಿವಯೋಗಿಗಳೆಲ್ಲ ಇಂತಹ ವಿಚಿತ್ರ ವ್ಯಕ್ತಿಗಳು, ಭಂಡರಾಜ. ಎರಡು ವರ್ಷಗಳ ಹಿಂದೆ ಅಂತಹ ಮಹಾತ್ಮರೊಬ್ಬರ ಅನುಭವವಾಗಿದೆ ನನಗೆ.”

“ಯಾರು ಆ ಮಹಾತ್ಮರು?” -ಜಗದೇಕಮಲ್ಲ ಆತುರಗೊಂಡವನಂತೆ ಪ್ರಶ್ನಿಸಿದನು.

ಕರ್ಣದೇವ ಹೇಳಿದನು : “ಆಗ ನಾನು ಸೊನ್ನಲಾಪುರಕ್ಕೆ ಪ್ರವಾಸ ಹೋಗಿದ್ದೆ. ನಗರವೆಲ್ಲ ಯಾತ್ರಿಕರಿಂದ ತುಂಬಿರುವುದನ್ನು ಕಂಡು, 'ಇವರೆಲ್ಲ ಏಕೆ ಇಲ್ಲಿಗೆ ಬಂದಿದ್ದಾರೆ?” ಎಂದು ನಗರ ರಕ್ಷಕ ಅಧಿಕಾರಿಯನ್ನು ಕೇಳಿದೆ. 'ನೀವು ಸಿದ್ಧರಾಮ ಶಿವಯೋಗಿಗಳ ಹೆಸರು ಕೇಳಿಲ್ಲವೆ? ಅವರು ಈ ಪ್ರಾಂತದಲ್ಲಿ ಬಸವಣ್ಣನವರಷ್ಟೇ ಪ್ರಸಿದ್ಧರು. ಅವರ ದರ್ಶನಕ್ಕಾಗಿ ಪ್ರತಿದಿನ ಯಾತ್ರಿಕರು ಬರುತ್ತಾರೆ, ಎಂದು ಹೇಳಿದ ಅಧಿಕಾರಿ. 'ಒಂದು ಸಾರಿ ನಾವೂ ಅವರನ್ನು ನೋಡಬೇಕು. ಸಂದರ್ಶನಕ್ಕೆ ಏರ್ಪಡಿಸಿರಿ,' ಎಂದು ಅವನಿಗೆ ಹೇಳಿದೆ. ಮರುದಿನ ಪ್ರಾತಃಕಾಲ ನಾವು ಆ ಶಿವಯೋಗಿ ಶರಣನನ್ನು ನೋಡಿದೆವು. ನಗರ ಮಧ್ಯದಲ್ಲಿ ಒಂದು ದೊಡ್ಡ ಕೆರೆ. ಅದರ ತಡಿಯಲ್ಲಿ ಕಲ್ಲು ಮಂಟಪದಲ್ಲಿ ಅವರು ಕುಳಿತಿದ್ದರು. ಸುತ್ತ ಶಿಷ್ಯರ ತಂಡ. ನಾನು ಕೈ ಮುಗಿದು ಕಾಣಿಕೆ ಕೊಟ್ಟು ಎದುರಿಗೆ ಕುಳಿತುಕೊಂಡೆ. 'ಬಂದ ಕಾರಣವೇನು?' ಎಂದು ಅವರು ಕೇಳಿದರು. ನಾನು ಸಮಯಸ್ಫೂರ್ತಿಯಿಂದ, 'ನಿಮ್ಮಿಂದ ಶರಣ ದೀಕ್ಷೆ ಪಡೆಯುವುದಕ್ಕಾಗಿ', ಎಂದು ಉತ್ತರ ಕೊಟ್ಟೆ ಕೆಲವು ಕ್ಷಣಗಳು ಅವರು ನನ್ನನ್ನೇ ನೋಡುತ್ತಿದ್ದು ಬಳಿಕ.....ಏನು ಹೇಳಿದರು ಗೊತ್ತೆ, ಭಂಡರಾಜ?”

“ಏನು ಹೇಳಿದರು ?”

“ನಿಮ್ಮಂತಹ ಮದ್ಯಪಾಯಿ ಲಂಪಟರಿಗೆ ಶರಣ ಧರ್ಮದಲ್ಲಿ ಸ್ಥಾನವಿಲ್ಲ, ಕರ್ಣದೇವರಸರೆ. ನಿಮ್ಮ ನಡೆ ನುಡಿಗಳನ್ನು ಸುಧಾರಿಸಿಕೊಂಡು, ಒಂದು ವರ್ಷದ ಮೇಲೆ ಪುನಃ ಬಂದು ನೋಡಿದರೆ ಉತ್ತರ ಹೇಳುತ್ತೇನೆ-ಎಂದು.”

“ನಿನಗೆ ತಕ್ಕ ಉತ್ತರ, ಕರ್ಣದೇವ. ನಾವು ನಮ್ಮ ನಿಜಸ್ವರೂಪ ಕಾಣಬೇಕಾದರೆ ಶರಣರ ನುಡಿಗಳಲ್ಲಿ.” -ನಸುನಕ್ಕು ನುಡಿದನು ಜಗದೇಕಮಲ್ಲ.

ಕರ್ಣದೇವ ತುಸು ಕೋಪದಿಂದ-"ಶರಣರ ನುಡಿಗಳೇ ಏಕೆ? ಕನ್ನಡಿಯ ಮುಂದೆ ನಿಂತರೆ ಕಾಣುವುದಿಲ್ಲವೇ ನಿಜಸ್ವರೂಪ?”

ಜಗದೇಕಮಲ್ಲನೆಂದನು : “ಕನ್ನಡಿಯಲ್ಲಿ ಕಾಣುವುದು ಪ್ರತಿನಿತ್ಯದ ನಮ್ಮ