ಪುಟ:ಕ್ರಾಂತಿ ಕಲ್ಯಾಣ.pdf/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೩೮

ಕ್ರಾಂತಿ ಕಲ್ಯಾಣ


ಹೂವಾದರೇನು ? ಕೊಟ್ಟಿದ್ದೆಲ್ಲ ಕಾಣಿಕೆ, ಅಟ್ಟಿದ್ದೆಲ್ಲ ನೈವೇದ್ಯ.”

“ಜಗದೇಕಮಲ್ಲರು ಒಪ್ಪಿದರೆ ಮುಗಿಯಿತು, ಹೆಗ್ಗಡೆ. ಮೂಕಳಾದರೂ ನಾವಾಡುವ ಮಾತು ಅರ್ಥವಾಗುವುದಲ್ಲವೆ?” ಎಂದು ಕರ್ಣದೇವ ಉಷಾವತಿಯನ್ನು ಸಂಬೋಧಿಸಿ, “ನಿನ್ನ ಹೆಸರೇನು ಚೆಲುವೆ?” ಎಂದು ಕೇಳಿದನು.

ಉಷಾವತಿ ತಲೆಯಾಡಿಸಿದಳು.
“ಅಂದರೆ ಹೆಸರೇ ಇಲ್ಲವೆ?” -ಮತ್ತೆ ಕರ್ಣದೇವನ ಪ್ರಶ್ನೆ.

ಉಷಾವತಿ, ಒಂದು ಸಾರಿ ಮೇಲಿಂದ ಕೆಳಗೆ, ಒಂದು ಸಾರಿ ಎಡದಿಂದ ಬಲಕ್ಕೆ ತಲೆಯಾಡಿಸಿದಳು.

ಕರ್ಣದೇವನಿಗೆ ಅರ್ಥವಾಗಲಿಲ್ಲ. ಹೆಗ್ಗಡೆ ಸಹಾಯಕ್ಕೆ ಬಂದು, “ಹೆಸರಿದೆ, ಹೇಳುವುದಿಲ್ಲ ಎಂದು ಅದರ ಅರ್ಥ, ಒಡೆಯರೆ. ಹೆಣ್ಣು ನಗರದ ಶ್ರೀಮಂತ ವಣಿಕನೊಬ್ಬನ ಮಗಳು. ರಹಸ್ಯ ರಕ್ಷಣೆಗಾಗಿ ಹೆಸರು ಹೇಳುತ್ತಿಲ್ಲ. ಮುಂಜಾವಿಗೆ ಅವಳನ್ನು ಮೇನೆಯಲ್ಲಿ ನಗರಕ್ಕೆ ಕಳುಹಿಸಬೇಕು,” ಎಂದನು.

ಉಷಾವತಿ ಕಟಾಕ್ಷದ ಮಿಂಚು ಹಾರಿಸಿ, ನಗುತ್ತ ನಲಿಯುತ್ತ ಕರ್ಣದೇವನ ಹತ್ತಿರ ಹೋಗಿ ಕುಳಿತು, ಪಾನಪಾತ್ರೆಗೆ ಮಧು ತುಂಬಿ, ಕೈಚಾಚಿ ಮುಖದ ಮುಂದೆ ಹಿಡಿದಳು.

ಅವಳ ಒಂದೊಂದು ಚಲನೆಯನ್ನೂ ಆಸಕ್ತಿಯಿಂದ ಎವೆಯಿಕ್ಕದೆ ನೋಡುತ್ತಿದ್ದ ಕರ್ಣದೇವ, ಸುಪ್ರೀತನಾಗಿ ಕೈಯನ್ನು ಚುಂಬಿಸಿ ಬಟ್ಟಲನ್ನು ತೆಗೆದುಕೊಂಡು ಒಂದೇ ಗುಟುಕಿಗೆ ಎಲ್ಲವನ್ನೂ ಕುಡಿದನು.

ಕಥಾನಾಯಕಿಯ ಪ್ರವೇಶದಿಂದ ನಾಟಕ ಕಳೆಯೇರುವಂತೆ ಉಷಾವತಿ ಬಂದ ಮೊದಲು ಪಾನಗೋಷ್ಠಿ ಹೊಸ ರೂಪ ತಾಳುತ್ತಿರುವುದನ್ನು ಕಂಡು ಹೆಗ್ಗಡೆಗೆ ಸಮಾಧಾನವಾಯಿತು. ತುಸು ಹೊತ್ತಿನ ಮೇಲೆ ಅವನು ಕಾವಲು ಭಟರ ಸರದಿ ಬದಲಾವಣೆಯ ನೆವದಿಂದ ಹೊರಗೆ ಹೋದನು.

ಆಮೇಲಿನ ಅರ್ಧಗಳಿಗೆಯಲ್ಲಿ ಉಷಾವತಿ ಅದೆಷ್ಟು ಸಾರಿ ಪಾನಪಾತ್ರೆಯನ್ನು ತುಂಬಿಕೊಟ್ಟಳು, ಅದೆಷ್ಟು ಸಾರಿ ಕರ್ಣದೇವ ಅದನ್ನು ಬರಿದು ಮಾಡಿದನು, ಎಂಬುದನ್ನು ಕುತೂಹಲದಿಂದ ಅವರನ್ನೇ ನೋಡುತ್ತಿದ್ದ ಜಗದೇಕಮಲ್ಲ ಗಮನಿಸಿದ್ದರೆ ಉಷಾವತಿಯ ವರ್ತನೆಯಲ್ಲಿ ಏನೋ ರಹಸ್ಯೋದ್ದೇಶವಿದೆಯೆಂದು ಸಹಜವಾಗಿ ತಿಳಿಯುತ್ತಿದ್ದನು. ಆದರವನು ಜಿಗುಪ್ಸೆಯಿಂದ ಮುಖ ತಿರುಗಿಸಿ, ದಿಂಬಿಗೊರಗಿ ಚಿಂತಾಮಗ್ನನಾಗಿ ಕಣ್ಣು ಮುಚ್ಚಿದನು.

ಕರ್ಣದೇವನ ವರ್ತನೆಗಿಂತ ಅವನು ಪ್ರಾಸಂಗಿಕವಾಗಿ ತಿಳಿಸಿದ ಸುದ್ದಿಗಳು