ಪುಟ:ಕ್ರಾಂತಿ ಕಲ್ಯಾಣ.pdf/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೩೯


ಜಗದೇಕಮಲ್ಲನನ್ನು ಚಕಿತಗೊಳಿಸಿದ್ದವು. ಮಂಗಳವೇಡೆಯ ಅಗ್ನಿದಾಹದಲ್ಲಿ ಕಾಮೇಶ್ವರಿಯ ಮೃತ್ಯು, ಮಧುವರಸಾದಿಗಳ ಶೂಲಾರೋಪಣ, ಶರಣರ ಮೇಲೆ ನಡೆಯುತ್ತಿರುವ ದುರಾಗ್ರಹದ ದಬ್ಬಾಳಿಕೆ, ಇವೆಲ್ಲ ಜಗತ್ತಿನಲ್ಲಿ ನಡೆಯುತ್ತಿರುವ ವಾಸ್ತವ ಘಟನೆಗಳು. ಕರ್ಣದೇವ ಹೇಳುವಂತೆ ಬಿಜ್ಜಳನ ಉನ್ಮಾದವೇ ಈ ಎಲ್ಲ ದುರ್ಘಟನೆಗಳ ಕಾರಣ. ಈ ಸುಸಜ್ಜಿತ, ವಿಲಾಸಮಯ ಅರಮನೆಯಲ್ಲಿ ಬಂದಿಯಾಗಿ ನಾನು ವಾಸ್ತವ ಜಗತ್ತನ್ನೇ ಮರೆತಿದ್ದೇನೆ. ಕಾಮೇಶ್ವರಿ ಕಾಣುತ್ತಿದ್ದ ಚಾಲುಕ್ಯ ಪುನಃ ಪ್ರತಿಷ್ಠೆಯ ಕನಸು ಈ ದುರಂತದಲ್ಲಿ ಮುಗಿಯಬೇಕೆ? ತೀವ್ರ ಚಿಂತೆಯ ಆವೇಗದಿಂದ ಜಗದೇಕಮಲ್ಲನು ತನ್ನನ್ನು ತಾನೇ ಮರೆತನು. ತನ್ನ ನಿರುದ್ದೇಶ ಜೀವನದ ನಿರರ್ಥಕ ಘಟನೆಗಳು ಕೆಟ್ಟ ಕನಸಿನ ಕಪ್ಪು ನೆರಳುಗಳಂತೆ ಅವನ ಕಣ್ಣುಗಳ ಮುಂದೆ ಸುಳಿದವು. ನೋಡುತ್ತಿದ್ದಂತೆ ಅವು ಭೂತಾಕಾರವಾಗಿ ಬೆಳೆದು, ತನ್ನನ್ನು ಸುತ್ತು ಗಟ್ಟಿ, ಎದೆಯ ಮೇಲೆ ಕುಳಿತು ಪರ್ವತಸಮನಾದ ಭಾರದಿಂದ ಒತ್ತುತ್ತಿರುವಂತೆ ಅವನಿಗೆ ಭಾಸವಾಯಿತು. ಉಸಿರುಕಟ್ಟಿ ಮೈ ಬೆವರಿತು. ಬಿಡಿಸಿಕೊಳ್ಳಲು ಒದ್ದಾಡಿದನು. ಕೊನೆಗೆ ಭೀಮ ಪರಾಕ್ರಮದಿಂದ ಎರಗಿ ಬಂದ ನೆರಳುಗಳನ್ನು ಸರಿಸಿ ಕಣ್ತೆರೆದಾಗ ಐದಾರು ವರ್ಷದ ಸುಂದರ ಕಾಯದ ಬಾಲಕನೊಬ್ಬನು ಎದುರಿಗೆ ನಿಂತಿರುವುದನ್ನು ಕಂಡನು.

ಯಾರು ಈ ಬಾಲಕ ?
ಎಷ್ಟೊಂದು ತೀಕ್ಷ್ಣತೆ ಅವನ ನೋಟದಲ್ಲಿ !
ಎಂತಹ ಹೃದಯ ವಿದ್ರಾವಕ ವಿಷಣ್ಣತೆ ಅವನ ಮುಖದಲ್ಲಿ !

ಅಗ್ನಿಶಲಾಕೆಯಂತೆ ಆ ದೃಷ್ಟಿ ತನ್ನೆದೆಯ ಸಂದು ಸಂದುಗಳನ್ನು ಸುಡುತ್ತಿರುವಂತೆ ಜಗದೇಕಮಲ್ಲನು ಭಾವಿಸಿದನು.

ಯಾರು ಈ ಬಾಲಕ ?
ನಾನು ಕನಸು ಕಾಣುತ್ತಿರುವೆನೆ?
ಇದು ನನ್ನ ಕನಸೆ? ಅಥವಾ ಈ ಬಾಲಕನ ಕನಸೆ?

ಕಾರ್ಗತ್ತಲಲ್ಲಿ ಮಿಂಚಿನ ಲತೆಯೊಂದು ಬೆಳಗಿದಂತಾಯಿತು ಜಗದೇಕಮಲ್ಲನಿಗೆ. ಬಾಲಕನು ಕಾಮೇಶ್ವರಿಯ ಕ್ಷೇತ್ರಜಪುತ್ರ, ಆ ವಿಚಿತ್ರ ಹೆಣ್ಣಿನ ಅಸೀಮ ಸಾಹಸದ ಫಲವಾಗಿ, ಅರಣ್ಯ ಮಧ್ಯದ ಶಿಬಿರದಲ್ಲಿ, ಮರೆಯಲಾಗದ ಆ ರಾತ್ರಿ ಘಟಿಸಿದ ಅಪೂರ್ವ ಮಿಲನದ ಸಂತಾನ-ಪ್ರೇಮಾರ್ಣವ

ಈಗ ಅವನೆಲ್ಲಿದ್ದಾನೆ?
ಅಗ್ನಿದಾಹದಲ್ಲಿ ಸುಟ್ಟು ಭಸ್ಮವಾದನೆ?