ಪುಟ:ಕ್ರಾಂತಿ ಕಲ್ಯಾಣ.pdf/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೪೦

ಕ್ರಾಂತಿ ಕಲ್ಯಾಣ


ಬಾಲಕನು ನಿಂತಿದ್ದ ಸ್ಥಳವೀಗ ಶೂನ್ಯ !
ಹೇಗೆ ಕಾಣಿಸಿಕೊಂಡನೋ ಹಾಗೇ ಮಾಯವಾಗಿದ್ದನು ಅವನು.

ಜಗದೇಕಮಲ್ಲ ಬೆಚ್ಚಿ ಕಣ್ತೆರೆದಾಗ ಉಷಾವತಿ, ಪರ್ಯಂಕದ ಬಳಿ ನಿಂತು ನಿಶ್ಚೇಷ್ಟಿತನಾಗಿ ಮೈಮರೆತು ಮಲಗಿದ್ದ ಕರ್ಣದೇವನ ಹೊದ್ದಿಕೆಯನ್ನು ಸರಿಪಡಿಸುತ್ತಿದ್ದಳು. ಕುಡಿದು ಮತ್ತೇರಿ ಬಿದ್ದಿರಬೇಕು. ಕರ್ಣದೇವನಿಗೆ ಅದು ಪ್ರತಿನಿತ್ಯದ ಘಟನೆಯಾಗಿತ್ತು.

ತನ್ನ ಸೇವಾಕಾರ್ಯವನ್ನು ಮುಗಿಸಿ ಉಷಾವತಿ, ಗಂಭೀರ ಭಾವದಿಂದ ಅರ್ಥಗರ್ಭಿತವಾಗಿ ತನ್ನನ್ನು ನೋಡುತ್ತಿರುವುದನ್ನ ಕಂಡು ಜಗದೇಕಮಲ್ಲನು ವಿಸ್ಮಿತನಾದನು. ಅವಳ ನೋಟದಲ್ಲಿ ವಿಲಾಸದ ಚಂಚಲತೆ ಇರಲಿಲ್ಲ. ದೈನ್ಯದ ನಮ್ರತೆ ಇರಲಿಲ್ಲ. ಪುರುಷನೊಬ್ಬನು ಇನ್ನೊಬ್ಬ ಪುರುಷನನ್ನು ನೋಡುವ ನಿರ್ಲಿಪ್ತ ಸಚೇತಕ ಶಕ್ತಿ ಅದರಲ್ಲಿ ಜಾಗ್ರತವಾಗಿದ್ದಂತೆ ಜಗದೇಕಮಲ್ಲನು ಭಾವಿಸಿದನು.

ನಗರದ ವಣಿಕ್ ಪುತ್ರಿಯೆಂದು ಹೆಗ್ಗಡೆ ಹೇಳಿದ ಪರಿಚಯ ನಿಜವಿರಲಾರದು. ಯಾವುದೋ ರಾಜಕೀಯ ರಹಸ್ಯೋದ್ದೇಶದಿಂದ ಇವಳು ಇಲ್ಲಿಗೆ ಬಂದಿರಬೇಕೆಂದು ಜಗದೇಕಮಲ್ಲನು ತಿಳಿದನು. ಬಾಗಿಲ ಕಡೆ ದೃಷ್ಟಿ ಹಾಯಿಸಿ, ಹೆಗ್ಗಡೆ ಬರುತ್ತಿಲ್ಲವೆಂದು ತಿಳಿದು ಸನ್ನೆಮಾಡಿ ಉಷಾವತಿಯನ್ನು ಹತ್ತಿರ ಕರೆದನು.

ಉಷಾವತಿ ಎದುರಿಗೆ ಬಂದು ನಿಂತಳು. ಆಗಲೂ ಅವಳ ಕಣ್ಣುಗಳಲ್ಲಿ ಹಿಂದಿನಂತೆ ನಿರ್ಲಿಪ್ತ ಸಚೇತಕ ದೃಷ್ಟಿ ಹಠಾತ್ತಾಗಿ ಜಗದೇಕಮಲ್ಲನು ಅವಳ ಕೈ ಹಿಡಿದೆಳೆದು ಆಲಿಂಗಿಸಿ, ಮುಖವನ್ನು ಎದೆಯ ಮೇಲಿಟ್ಟುಕೊಂಡು, ಕೆನ್ನೆಗಳನ್ನು ಮುದ್ದಿಸುವವನಂತೆ ತಲೆಬಾಗಿ ಪಿಸುದನಿಯಿಂದ, “ನೀನು ಯಾರು? ಇಲ್ಲಿಗೇಕೆ ಬಂದೆ?” ಎಂದು ಕೇಳಿದನು.

ಉಷಾವತಿ ಸಂಭ್ರಮದ ಸೋಗಿನಿಂದ ಪ್ರತಿಚುಂಬನಕ್ಕಾಗಿ ತಲೆಯೆತ್ತಿ ಕೆನ್ನೆಗೆ ಕೆನ್ನಹೊತ್ತಿ ಪಿಸುದನಿಯಿಂದ, “ನಾನು ರಾಣಿ ಕಾಮೇಶ್ವರಿಯ ದಾಸಿ. ರಾಣಿಯ ಅಂತ್ಯ ಸಂದೇಶ ಇದರಲ್ಲಿದೆ. ಏಕಾಂತದಲ್ಲಿ ಓದಿಕೊಳ್ಳಿ.” ಎಂದು ಕಂಚುಕದ ಮರೆಯಿಂದ ಮಡಿಕೆ ಮಾಡಿದ್ದ ವಸ್ತ್ರವೊಂದನ್ನು ತೆಗೆದು ಜಗದೇಕಮಲ್ಲನಿಗೆ ಕೊಟ್ಟಳು.

ಹೆಜ್ಜೆಯ ಸಪ್ಪಳ ಕೇಳಿ ಅವರು ದೂರ ಸರಿದರು.

ಹೆಗ್ಗಡೆ ಒಳಗೆ ಬಂದಾಗ ಉಷಾವತಿ ಕರ್ಣದೇವನು ಮಲಗಿದ್ದ ಪರ್ಯಂಕದ ಬಳಿ ನಿಂತಿದ್ದಳು. ಜಗದೇಕಮಲ್ಲ ಹೊರಡಲು ಸಿದ್ಧನಾಗಿ ಉತ್ತರೀಯವನ್ನು ಸರಿ ಪಡಿಸಿಕೊಳ್ಳುತ್ತಿದ್ದನು.