ಪುಟ:ಕ್ರಾಂತಿ ಕಲ್ಯಾಣ.pdf/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೪೨

ಕ್ರಾಂತಿ ಕಲ್ಯಾಣ


ಜಗದೇಕಮಲ್ಲನು ಪತ್ರದೊಡನಿದ್ದ ಬಟ್ಟೆಯ ಮಡಿಕೆ ಬಿಚ್ಚಿ, ಸುಕ್ಕುಗಳನ್ನು ಸರಿಪಡಿಸಿ, ಪೀಠದ ಮೇಲಿಟ್ಟು ನೋಡಿದನು. ಬಟ್ಟೆಯ ನಡುವೆ ಕೆಂಪು ಬಣ್ಣದಿಂದ ಗುಂಡಾದ ಅಕ್ಷರಗಳಲ್ಲಿ ಬರೆದಿದ್ದ ಕಾಮೇಶ್ವರಿಯ ಸಂದೇಶ ಈ ರೀತಿ ಇತ್ತು :

ಕುಮಾರ ಸೋಮೇಶ್ವರನ ಪಟ್ಟಾಭಿಷೇಕಕ್ಕಾಗಿ ರಾಜಾತಿಥಿಯಾಗಿ ಮಂಗಳವೇಡೆಗೆ ಹೋಗಿದ್ದ ನನ್ನ ಬಿಡಾರಕ್ಕೆ ಮಾಘ ಶುದ್ಧ ನವಮಿಯಂದು ಸರಿರಾತ್ರಿಯಲ್ಲಿ ಬಿಜ್ಜಳನು ವಂಚನೆಯಿಂದ ಬಂದು ನನ್ನ ಮಾನಹರಣ ಮಾಡಿದನು. ಆ ದಾನವನ ಸ್ಪರ್ಶದಿಂದ ಕಳಂಕಿತವಾದ ದೇಹವನ್ನು ಅಗ್ನಿಯಿಂದ ದಹಿಸಲು ನಿರ್ಧರಿಸಿದ್ದೇನೆ. ನನ್ನ ಭಾಗಕ್ಕೆ ಮರಣವೇ ಮಹಾ ನವಮಿ. ಈ ಸಂದೇಶ ನಿಮಗೆ ತಲಪುವಷ್ಟರಲ್ಲಿ ಈ ಅಭಾಗಿಯ ಮರಣದ ಸುದ್ದಿಯನ್ನು ನೀವು ಕೇಳುವಿರಿ. ಬಿಜ್ಜಳನು ಶರಣಧರ್ಮದ ಪರಮಶತೃ. ಚಾಲುಕ್ಯ ರಾಜ್ಯದ ಎಲ್ಲ ಶೈವಮಠಗಳನ್ನು ನಾಶಮಾಡಿ ಶರಣಧರ್ಮವನ್ನು ನಿರ್ಮೂಲಗೊಳಿಸುವುದು ಅವನ ಉದ್ದೇಶ. ಚಾಲುಕ್ಯರ ಹೆಸರನ್ನು ಇತಿಹಾಸದಿಂದ ತೊಡೆದು ಹಾಕಿ ಕಲಚೂರ್ಯ ಸಾಮ್ರಾಜ್ಯವನ್ನು ಸ್ಥಾಪಿಸಲು ಅವನು ಹವಣಿಸುತ್ತಿದ್ದಾನೆ. ಈ ದಾನವರೂಪೀ ನಿರಂಕುಶ ಪ್ರಜಾಪೀಡಕನನ್ನು ವಧಿಸಿ ಚಾಲುಕ್ಯ ರಾಜ್ಯವನ್ನು, ಶರಣಧರ್ಮವನ್ನು, ವಿಪತ್ತಿನಿಂದ ಉದ್ಧರಿಸುವ ಧೈರ್ಯ ಸಾಹಸಗಳು ನಿಮಗಿದೆಯೆ? ಅದರಿಂದ ಮಾತ್ರವೆ ನಾನು ಕಳಂಕ ವಿಮುಕ್ತೆಯಾಗುವೆನು. ನನ್ನ ಆತ್ಮಕ್ಕೆ ಶಾಂತಿ ದೊರಕುವುದು.

ಇತಿ ಚರಣದಾಸಿ ಕಾಮೇಶ್ವರಿ.

ಸಂದೇಶವನ್ನು ಓದುತ್ತಿದ್ದಂತೆ ಜಗದೇಕಮಲ್ಲನ ದೇಹ ಕಂಪಿಸಿತು. ಹೃದಯ ಸ್ತಂಭಿತವಾಯಿತು. ರಕ್ತಚಲನೆಯ ವೇಗ ಹೆಚ್ಚಿಬೌಳಿ ಬಂದಂತಾಗಿ ಆಸನದಿಂದೆದ್ದು ತಲ್ಪದ ಬಳಿ ಹೋದನು. ಕೈಯಲ್ಲಿಯ ಓಲೆಗಳನ್ನು ದಿಂಬಿನಡಿಯಲ್ಲಿ ಸುರಕ್ಷಿತವಾಗಿಟ್ಟು ಮಲಗಿದನು. ತುಸು ಹೊತ್ತಿನ ಮೇಲೆ ಸಮುಖದ ಪಸಾಯಿತನು ಒಳಗೆ ಬಂದು ದೀಪಗಳನ್ನು ಆರಿಸಿ ಬಾಗಿಲುಗಳನ್ನು ಭದ್ರಪಡಿಸಿ ಹೋದಾಗಲೂ ಅವನಿಗೆ ನಿದ್ರೆ ಬಂದಿರಲಿಲ್ಲ.

ಎಲ್ಲ ಕಾಲ, ಎಲ್ಲ ದೇಶಗಳ ಪ್ರಭು ಸಾಮಂತ ಶ್ರೀಮಂತರಂತೆ ಜಗದೇಕ ಮಲ್ಲನು, ಪಾಪ ಪುಣ್ಯ ಸ್ವರ್ಗ ನರಕಗಳಲ್ಲಿ ವಿಶ್ವಾಸವಿಲ್ಲದ ವಾಸ್ತವವಾದಿ, ಪ್ರಯೋಜನಶೀಲ, ಶುಷ್ಕ ತಾರ್ಕಿಕನಾಗಿದ್ದನು. ಜಗತ್ಕರ್ತನನ್ನು ನಿರಾಕರಿಸುವ ಮನೋದಾರ್ಢ್ಯವಿಲ್ಲದಿದ್ದರೂ ಅವನ ವರ್ತನೆ ನಾಸ್ತಿಕವಾದಕ್ಕೆ ತೀರ ಸಮೀಪವಾಗಿತ್ತು. ದೈವ-ಧರ್ಮ-ನೀತಿ ಇವೇ ಮುಂತಾದ ಭಾವನೆಗಳು ಮಾನವ ಸಮುದಾಯವನ್ನು