ಪುಟ:ಕ್ರಾಂತಿ ಕಲ್ಯಾಣ.pdf/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೪೪

ಕ್ರಾಂತಿ ಕಲ್ಯಾಣ


ವರ್ಷಗಳನ್ನು ಕಳೆದ ಮೇಲೆ ಜಗದೇಕಮಲ್ಲನಿಗೆ ವಿವೇಕೋದಯವಾಯಿತು. ತನ್ನ ನಿರುದ್ದೇಶ ವ್ಯರ್ಥಜೀವನಕ್ಕಾಗಿ ಪಶ್ಚಾತ್ತಾಪದಿಂದ ಕೊರಗಿದನು. ಈ ಅನುಕೂಲ ಸನ್ನಿವೇಶದಲ್ಲಿ ಬೊಮ್ಮರಸನು ಜಂಗಮವೇಷದಿಂದ ರಾಜಗೃಹಕ್ಕೆ ಬಂದು, ಚಾಲುಕ್ಯ ಪುನರುದ್ಧಾರಕ್ಕಾಗಿ ರಾಣಿ ಕಾಮೇಶ್ವರಿ ನಡೆಸುತ್ತಿರುವ ಕ್ರಾಂತಿ ಸಂಧಾನವನ್ನು ವಿವರಿಸಿದಾಗ ಸಂತೋಷದಿಂದ ಅದಕ್ಕೊಪ್ಪಿದನು. ತನ್ನ ರಾಜಕೀಯ ಒಳಸಂಚನ್ನು ಮುಚ್ಚಿಡಲು ಬೊಮ್ಮರಸನು ಪ್ರಾರಂಭಿಸಿದ ಶರಣಧರ್ಮವನ್ನು ಕುರಿತ ಪ್ರವಚನಗಳು ಜಗದೇಕಮಲ್ಲನ ಮೇಲೆ ಹೆಚ್ಚು ಪ್ರಭಾವ ಬೀರಿದವು. ಜಾತಿ ಪಂಥಗಳ ವಿರುದ್ಧ ಶರಣರು ಪ್ರಾರಂಭಿಸಿದ್ದ ಕ್ರಿಯಾತ್ಮಕ ಚಳುವಳಿ, ಕಾಯಕ ದಾಸೋಹಗಳ ಬಗೆಗೆ ಅವರು ಅಂಗೀಕರಿಸಿದ್ದ ರಚನಾತ್ಮಕ ನಿಬಂಧನೆಗಳು, ಅನುಭವಮಂಟಪದ ಚರ್ಚಾಗೋಷ್ಠಿ, ಇವು ಕಾಲೋಚಿತವಾದ ಸುಧಾರಣೆಗಳೆಂದು ಅವನಿಗೆ ಅರಿವಾಯಿತು. ಇವೆಲ್ಲಕ್ಕಿಂತ ಮುಖ್ಯವಾದ ಶರಣಧರ್ಮದಿಂದ ಪ್ರಭಾವಿತರಾದ ಸಾಮಂತರು ಮತ್ತು ಜನಸಮುದಾಯ ಚಾಲುಕ್ಯ ಪುನರುದ್ಧಾರದಲ್ಲಿ ವಹಿಸಬಹುದಾದ ಪಾತ್ರ, ಜಗದೇಕಮಲ್ಲನನ್ನು ಹೆಚ್ಚಿಗೆ ಆಕರ್ಷಿಸಿತು. ರಾಜ್ಯೋದಯದಂತೆ ಶರಣಧರ್ಮದ ಅಭ್ಯುದಯವೂ ಅವನ ಕನಸಾಯಿತು.

ಈ ಪರಿಸ್ಥಿತಿಯಲ್ಲಿ ಕಾಮೇಶ್ವರಿಯ ಮರಣವಾರ್ತೆ ಮೇಘವಿಲ್ಲದ ಗಗನದಿಂದ ಸಿಡಿಲೆರಗಿ ಬಂದಂತೆ ಜಗದೇಕಮಲ್ಲನನ್ನು ಸ್ತಂಭಿತಗೊಳಿಸಿತು. ಶೂನ್ಯ ಹೃದಯನಾಗಿ ನಿಶ್ಚೇಷ್ಟಿತನಂತೆ ನಿದ್ರೆಯಿಲ್ಲದೆ ಅವನು ಬಹಳ ಹೊತ್ತು ಮಲಗಿದನು. ಜಗತ್ತಿನ ಕಾರ್ಗತ್ತಲೆ ರಾಶೀಭೂತವಾಗಿ, ಗೋಡೆಕಟ್ಟೆ ಸುತ್ತ ನಿಂತಂತೆ ಭಾವಿಸಿದನು. ರಾಣಿಯ ಸಂದೇಶದ ನುಡಿಗಳು ವಿದ್ಯುತ್ತಿನಿಂದ ಬರೆದ ಲಿಪಿಯಂತೆ ಕಣ್ಣುಗಳ ಮುಂದೆ ಚಲಿಸುವುದನ್ನು ಕಂಡನು.

“ಸರಿರಾತ್ರಿಯಲ್ಲಿ ಬಿಜ್ಜಳನು ವಂಚನೆಯಿಂದ ಬಂದು ನನ್ನ ಮಾನಹರಣ ಮಾಡಿದನು.....”

“ಆ ದಾನವನ ಸ್ಪರ್ಶದಿಂದ ಕಳಂಕಿತವಾದ ದೇಹವನ್ನು ಅಗ್ನಿಯಿಂದ ದಹಿಸಲು ನಿರ್ಧರಿಸಿದ್ದೇನೆ....”

ಬಿಜ್ಜಳನ ಅತ್ಯಾಚಾರಕ್ಕೆ ಬಲಿಯಾಗಿ ಕಾಮೇಶ್ವರಿ ಬಿಡಾರಕ್ಕೆ ತಾನೇ ಬೆಂಕಿ ಹಚ್ಚಿರಬೇಕು. ಚಾಲುಕ್ಯ ಕುಲಗೌರವಕ್ಕೆ ಎಷ್ಟೊಂದು ಅಪಮಾನಕರವಾದ ಘಟನೆ ಇದು! ಅಕ್ರಮಶೀಲ ಕ್ಷತ್ರಿಯ ಸಂಪ್ರದಾಯದಂತೆ ಚಾಲುಕ್ಯ ರಾಣಿ ತನ್ನವಳಾಗುವುದರಿಂದ ರಾಜ್ಯಾಪಹಾರ ಪೂರ್ಣವಾಗುವುದೆಂದು ಭಾವಿಸಿದನು ಆ ನಿರಂಕುಶ ದುರಾಚಾರಿ ಬಿಜ್ಜಳ !