ಪುಟ:ಕ್ರಾಂತಿ ಕಲ್ಯಾಣ.pdf/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೪೫


“ಈ ದಾನವರೂಪೀ ನಿರಂಕುಶ ಪ್ರಜಾಪೀಡಕನನ್ನು ವಧಿಸಿ, ಚಾಲುಕ್ಯ ರಾಜ್ಯವನ್ನು, ಶರಣಧರ್ಮವನ್ನು ವಿಪತ್ತಿನಿಂದ ಉದ್ಧರಿಸುವ ಧೈರ್ಯ ಸಾಹಸಗಳು ನಿಮಗಿದೆಯೆ?”

ಕಾಮೇಶ್ವರಿಯ ಪ್ರಶ್ನೆಗೆ ತಾನು ಕೊಡಬಹುದಾದದ್ದು ಒಂದೇ ಉತ್ತರವೆಂದು ಜಗದೇಕಮಲ್ಲನಿಗೆ ತಿಳಿದಿತ್ತು. ಬಿಜ್ಜಳನನ್ನು ವಧಿಸುವ ಮುನ್ನ ತಾನು ಕಾರಾಗೃಹದಿಂದ ಮುಕ್ತನಾಗಬೇಕು. ಅದರ ಉಪಾಯವೇನು? ರಾಜ್ಯಲೋಭದ ಆಸೆಯನ್ನು ಮನಸ್ಸಿನಿಂದ ಒಂದೇ ಸಾರಿಗೆ ಕಿತ್ತುಹಾಕಿ ಇದುವರೆಗೆ ಬಿಡುಗಡೆಗಾಗಿ ಪ್ರಯತ್ನಿಸದೆ ಇದ್ದದ್ದು ಈ ಅವಕಾಶಕ್ಕಾಗಿಯೆ? ಆಲಸ್ಯದ ಗಾಢನಿದ್ರೆಯಿಂದ ನನ್ನನ್ನು ಎಚ್ಚರಗೊಳಿಸಲು ಕಾಮೇಶ್ವರಿಯ ಬಲಿದಾನ ಅಗತ್ಯವಾಗಿತ್ತೆ? ಧಿಃಕ್ಕಾರ ನನ್ನ ಹೇಡಿತನಕ್ಕೆ ! ಎಂದು ಅವನು ತನ್ನನ್ನು ತಾನೆ ನಿಂದಿಸಿಕೊಂಡನು.

ರಾತ್ರಿ ಬಹಳ ಹೊತ್ತಾದ ಮೇಲೆ ಅವನಿಗೆ ನಿದ್ರೆ ಹತ್ತಿತ್ತು. ಸೂರ್ಯೋದಯಕ್ಕೆ ಮೊದಲೇ ಎದ್ದು ಸ್ನಾನಾದಿಗಳನ್ನು ಮುಗಿಸಿಕೊಂಡು ಪಸಾಯಿತನನ್ನು ಕರೆದು, "ಗುರುದೇವರು ಎದ್ದಿರುವರೇ ನೋಡಿ ಬಾ,” ಎಂದು ಹೇಳಿದನು.

ಪಸಾಯಿತನು ಪುನಃ ಬಂದು, “ಗುರುದೇವರು ಪೂಜೆಗೆ ಕುಳಿತಿದ್ದಾರೆ,” ಎಂದು ಹೇಳಿದನು.

“ಪೂಜೆ ಮುಗಿದೊಡನೆಯೇ ಅವರನ್ನು ಇಲ್ಲಿಗೆ ಕರೆತರತಕ್ಕದ್ದು,” ಎಂದು ಪಸಾಯಿತನಿಗೆ ಹೇಳಿ ಜಗದೇಕಮಲ್ಲನು ಅಧ್ಯಯನ ಶಾಲೆಗೆ ಹೋದನು. ಪ್ರವಚನಕ್ಕೆ ಬೇಕಾಗುವ ಕೆಲವು ಹೊತ್ತಿಗೆಗಳನ್ನು ಅಲ್ಲಿ ಸಂಗ್ರಹಿಸಿತ್ತು. ದಾಸೋಹದ ಸಂದರ್ಭದಲ್ಲಿ ಚೆನ್ನಬಸವಣ್ಣನವರು ಕಳುಹಿಸಿದ್ದ ವಚನಶಾಸ್ತ್ರದ ಹೊತ್ತಿಗೆಗಳೂ ಅವುಗಳಲ್ಲಿದ್ದವು. ಜಗದೇಕಮಲ್ಲನು ಅವುಗಳಲ್ಲಿ ತನಗೆ ಬೇಕಾದ ಹೊತ್ತಿಗೆಯನ್ನು ಆರಿಸಿ ತೆಗೆದುಕೊಂಡು ಓದುತ್ತ ಕುಳಿತನು.

ಕೊಂಚ ಹೊತ್ತಿನ ಮೇಲೆ ಬೊಮ್ಮರಸ ಅರ್ಥಾತ್ ಬ್ರಹ್ಮೇಂದ್ರ ಶಿವಯೋಗಿ ಅಲ್ಲಿಗೆ ಬಂದಾಗಲೂ ಅವನ ವ್ಯಾಸಂಗ ಮುಗಿದಿರಲಿಲ್ಲ.

“ಏನು ಓದುತ್ತಿದ್ದೀರಿ, ಮಹಾಪ್ರಭು? ವಚನಶಾಸ್ತ್ರದಲ್ಲಿ ನಿಮ್ಮ ಆಸಕ್ತಿ ಅಭಿನಂದನೀಯ,” ಎಂದು ಬೊಮ್ಮರಸನೇ ಮಾತಿಗೆ ಪ್ರಾರಂಭಿಸಿದನು.

ಜಗದೇಕಮಲ್ಲನು ಎದ್ದು ನಮಸ್ಕಾರ ಮಾಡಿ, “ಪ್ರಭುದೇವರ ಒಂದು ವಚನ ಅರ್ಥವಾಗದೆ ರಾತ್ರಿಯೆಲ್ಲ ಯೋಚಿಸುತ್ತ ಮಲಗಿದ್ದೆ, ಗುರುದೇವ, ನಿಮ್ಮಿಂದ ಅದರ ವಿವರಣೆ ಅಪೇಕ್ಷಿಸುತ್ತೇನೆ,” ಎಂದು ಕೈಯಲ್ಲಿದ್ದ ಹೊತ್ತಿಗೆಯನ್ನು ಮುಂದಿಟ್ಟನು.

ಬೊಮ್ಮರಸನು ಹೊತ್ತಿಗೆಯನ್ನು ತೆರೆದು, ಗುರುತು ಮಾಡಿದ್ದ ವಚನವನ್ನು