ಪುಟ:ಕ್ರಾಂತಿ ಕಲ್ಯಾಣ.pdf/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೪೬

ಕ್ರಾಂತಿ ಕಲ್ಯಾಣ


ಓದಿ, “ಒಂದು ದಿನ ಅನುಭವಮಂಟಪದಲ್ಲಿ ಈ ವಚನವನ್ನು ಕುರಿತು ದೀರ್ಘ ವ್ಯಾಖ್ಯಾನ ನಡೆಯಿತು. ಅದನ್ನು ಸಂಗ್ರಹವಾಗಿ ನಿಮಗೆ ಹೇಳುತ್ತೇನೆ, ಪ್ರಭುಗಳು ದಯಮಾಡಿ ಕುಳಿತುಕೊಂಡರೆ ಒಳಿತು,” ಎಂದನು.

ಸಿದ್ಧವಾಗಿದ್ದ ಆಸನಗಳಲ್ಲಿ ಇಬ್ಬರೂ ಕುಳಿತುಕೊಂಡರು. ಜಗದೇಕಮಲ್ಲನು ಪಸಾಯಿತನ ಕಡೆ ತಿರುಗಿ, “ನಮ್ಮ ಅಧ್ಯಯನಕ್ಕೆ ಅಡಚಣೆಯಾಗದಂತೆ ಎಚ್ಚರವಾಗಿರುವಂತೆ ಕಾವಲುಗಾರರಿಗೆ ಹೇಳು. ನಾನು ಕರೆಯುವವರೆಗೆ ಯಾರೂ ಇಲ್ಲಿಗೆ ಬರಲಾಗದು,” ಎಂದನು. ಪಸಾಯಿತನು ವಂದಿಸಿ ಹೊರಗೆ ಹೋದನು.

ಕೆಲವು ವಾರಗಳಿಂದ ಗುರುಶಿಷ್ಯರ ಏಕಾಂತ ಅಧ್ಯಯನ ನಿತ್ಯದ ಘಟನೆಯಾಗಿ ಮಂಗಳವೇಡೆಯಿಂದ ಬಂದಮೇಲೆ ಕರ್ಣದೇವನಿಗೆ ವರದಿಯಾಗಿತ್ತು. ಕರ್ಣದೇವನು ಹಾಸ್ಯಮಾಡಿ ನಕ್ಕು, ಗುರುಶಿಷ್ಯರು ಕಾಯವೆರಸು ಕೈಲಾಸಕ್ಕೆ ಹೋಗಲು ಹವಣಿಸುತ್ತಿದ್ದಾರೆ. ಅವರಿಗೆ ತೊಂದರೆಯಾಗದಂತೆ ನಡೆದುಕೊಳ್ಳತಕ್ಕದ್ದು,” ಎಂದು ಆಜ್ಞೆಮಾಡಿದ್ದನು.

ಅಧ್ಯಯನ ಶಾಲೆ ಬರಿದಾಯಿತು. ಉಷಾವತಿಯ ಪತ್ರ ಮತ್ತು ರಾಣಿಯ ಸಂದೇಶವನ್ನು ಬೊಮ್ಮರಸನಿಗೆ ಕೊಟ್ಟು ಜಗದೇಕಮಲ್ಲನು, “ನಿನ್ನಿನ ರಾತ್ರಿ ದಾಸಿಯೊಬ್ಬಳು ಇದನ್ನು ತಂದು ಕೊಟ್ಟಳು.” ಎಂದನು.

ಬೊಮ್ಮರಸನು ಪತ್ರಗಳನ್ನು ಓದಿ, "ದಾಸಿ ಬಂದ ವಿಚಾರ ನನಗೆ ತಿಳಿದಿತ್ತು. ಆದರೆ ಪ್ರಕರಣ ಇಷ್ಟೊಂದು ಉಗ್ತಾವಸ್ಥೆಗೇರಿದೆಯೆಂದು ನಾನು ಭಾವಿಸಿರಲಿಲ್ಲ.” ಎಂದನು.

“ದಾಸಿಯ ವಿಚಾರ ತಿಳಿದದ್ದು ಹೇಗೆ? ಗಣಿಕಾವಾಸದ ಹೆಂಗಸರಿಂದಲೆ?” ಎಂದು ಜಗದೇಕಮಲ್ಲ ಕೇಳಿದನು.

ಬೊಮ್ಮರಸನು ಹೇಳಿದನು : “ಬಿಲ್ವಪತ್ರೆಗಾಗಿ ಮಹಮನೆಗೆ ಹೋಗಿದ್ದ ಬ್ರಹ್ಮಶಿವ ಇಂದು ಮುಂಜಾವಿನಲ್ಲಿ ಹಿಂದಿರುಗಿದ. ಅವನಿಂದ ಎಲ್ಲ ವಿಚಾರವನ್ನೂ ತಿಳಿದೆ. ದಾಸಿ ನಿನ್ನನ್ನು ನೋಡಿದ್ದು ಹೇಗೆ? ಈಗ ಅವಳೆಲ್ಲಿದ್ದಾಳೆ?”

ಜಗದೇಕಮಲ್ಲ ನಡೆದುದನ್ನು ವಿವರಿಸಿ, “ಇಷ್ಟು ಹೊತ್ತಿಗೆ ಮೇನೆಯಲ್ಲಿ ನಗರವನ್ನು ಸೇರಿದ್ದಾಳೆ. ಅವಳ ವಿಚಾರ ಚಿಂತಿಸುವ ಅಗತ್ಯವಿಲ್ಲ. ಈಗ ನಾವೇನು ಮಾಡುವುದು?” ಎಂದು ಪ್ರಶ್ನಿಸಿದನು.

“ಏನು ಮಾಡಬೇಕೆಂದು ನಿನ್ನ ಇಷ್ಟ?”

“ಒಂದು ಪ್ರಶ್ನೆಗೆ ಇನ್ನೊಂದು ಪ್ರಶ್ನೆ ಉತ್ತರವಾಗುವುದಿಲ್ಲ, ಬೊಮ್ಮರಸ. ನಾನು ನಿನ್ನ ಸಲಹೆ ಕೇಳುತ್ತಿದ್ದೇನೆ.”