ಪುಟ:ಕ್ರಾಂತಿ ಕಲ್ಯಾಣ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೨೩

"ಕೊನೆಯದಾಗಿ ನಿಮಗೆ ನನ್ನ ಹಿತವಚನವಿದು, ಅಗ್ಗಳದೇವರಸರೆ. ನೀವು ಮಹಾರಾಜ ಜಗದೇಕಮಲ್ಲರೊಡನೆ ಕಾವ್ಯ ಅಲಂಕಾರ, ಧರ್ಮಶಾಸ್ತ್ರ ಕಾಮ ಶಾಸ್ತ್ರ, ಶಿಲ್ಪ, ಸಂಗೀತ, ನಾಟ್ಯ, ಇವುಗಳ ವಿಚಾರದಲ್ಲಿ ಬೇಕಾದಹಾಗೆ ಮಾತಾಡಬಹುದು. ಆದರೆ ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸದಿದ್ದರೆ ಒಳ್ಳೆಯದು."

ಕ್ರಮಿತನು ಮಾತು ಮುಗಿಸುತ್ತಿದ್ದಂತೆ ಹೆಗ್ಗಡೆ ಪುನಃ ಬಂದು, "ಕಾವ್ಯೋಪದೇಶಕರ ಬಿಡಾರ ಸಿದ್ಧವಾಗಿದೆ," ಎಂದನು.

ಅಗ್ಗಳನಿಂದ ಬೀಳ್ಕೊಂಡು ಕ್ರಮಿತನು ಅಲ್ಲಿಂದ ಹೊರಟನು. ರಥವೇರುವ ಮೊದಲು ಹೆಗ್ಗಡೆಯೊಡನೆ ರಹಸ್ಯವಾಗಿ, "ಈ ಹೊಸ ಅತಿಥಿಯ ಬಗೆಗೆ ನೀವು ಬಹಳ ಎಚ್ಚರದಿಂದ ನೋಡಿಕೊಳ್ಳಬೇಕು. ಯಾವ ಕಾರಣದಿಂದಲೇ ಆಗಲಿ ಅವರು ಹೊರಗೆ ಹೋಗಲು ಅವಕಾಶಕೊಡಲಾಗದು. ಹೊರಗಿನವರೊಡನೆ ಮಾತಾಡುವ ಅಥವಾ ಸಂಬಂಧವಿಟ್ಟುಕೊಳ್ಳುವ ಅವಕಾಶವಿರಬಾರದು. ಉಳಿದೆಲ್ಲ ವಿಚಾರಗಳಲ್ಲಿ ಅವರ ಬಗ್ಗೆ ಗೌರವಸ್ಥ ಮಾನ್ಯ ಅತಿಥಿಯಂತೆ ನಡೆದುಕೊಳ್ಳತಕ್ಕದ್ದು, ಎಂದು ಹೇಳಲು ಮರೆಯಲಿಲ್ಲ.

ಚೆಲುವೆಯಾದ ಒಬ್ಬ ತರುಣದಾಸಿ, ಸುಸಜ್ಜಿತವಾದ ಎರಡು ಕೋಣೆಗಳು, ಅಗ್ಗಳನ ಸುಖ ವಸತಿಗೆ ಸಿದ್ದವಾಗಿದ್ದವು. ದಾಸಿ ತಂದಿಟ್ಟ ಆಹಾರದ ತಟ್ಟೆಗಳಲ್ಲಿ ತನಗೆ ಬೇಕಾದುದನ್ನು ತಿಂದು ತಾಂಬೂಲ ಮೆಲ್ಲುತ್ತಾ ಅಗ್ಗಳನು ಅವಳನ್ನು ಕೇಳಿದನು:

"ಅರಮನೆಯಲ್ಲಿ ಪುಸ್ತಕ ಭಂಡಾರವಿದೆಯ?"

"ಇದೆ, ಒಡೆಯರೆ. ಆದರೆ ಪ್ರಭುಗಳು ಆ ಕಡೆ ಹೋಗುವುದೂ ಇಲ್ಲ. ಹೆಗ್ಗಡೆ ಕೋಣೆಗೆ ಬೀಗಮುದ್ರೆ ಹಾಕಿದ್ದಾರೆ."

"ಅವರನ್ನು ಕೇಳಿ ಒಂದೆರಡು ಹೊತ್ತಿಗೆಗಳನ್ನು ತರುವ ಕೆಲಸ ನಿನ್ನಿಂದಾಗುವುದೆ?"

"ಈಗ ಅವರನ್ನು ಕೇಳಿದರೆ ರೇಗಿಬಿಡುತ್ತಾರೆ. ನನ್ನ ಹತ್ತಿರ ಎರಡು ಹೊತ್ತಿಗೆಗಳಿವೆ. ಅವುಗಳನ್ನು ತಂದುಕೊಡಲೆ?"

"ತೆಗೆದುಕೊಂಡು ಬಾ."

ದಾಸಿ ಹೊರಗೆ ಹೋಗಿ ಸ್ವಲ್ಪ ಹೊತ್ತಿನ ಮೇಲೆ ಎರಡು ಸಣ್ಣ ಹೊತ್ತಿಗೆಗಳನ್ನು ತಂದು ಕೊಟ್ಟಳು. ಒಂದು ಅಶ್ಲೀಲ ನಾಡಹಾಡುಗಳ ಸಂಗ್ರಹ ಇನ್ನೊಂದು ದಕ್ಷಿಣ ಭಾರತದ ಪ್ರಮುಖ ಕ್ಷೇತ್ರಗಳನ್ನು ಸರಳ ಗದ್ಯದಲ್ಲಿ ವಿವರಿಸುವ ಯಾತ್ರಾ ಪ್ರಬಂಧ.

ಅಗ್ಗಳನು ನಾಡಹಾಡುಗಳ ಸಂಗ್ರಹವನ್ನು ಕುರಿತು ಚಿಂತಿಸಿದನು: ಪ್ರಾತಃಕಾಲ