ಪುಟ:ಕ್ರಾಂತಿ ಕಲ್ಯಾಣ.pdf/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೪೮

ಕ್ರಾಂತಿ ಕಲ್ಯಾಣ


ತಾನೇ ಹಚ್ಚಿದ ಬೆಂಕಿಯಲ್ಲಿ ಅಸುನೀಗಿ, ರಾಣಿ ತನ್ನ ಹೊಣೆಯಿಂದ ಪಾರಾದಳು. ಕೊನೆಗಾಲದಲ್ಲಿ ಅವಳು ಕಳುಹಿಸಿದ ಉದ್ರೇಕದ ಸಂದೇಶದಿಂದ ಉದ್ರಿಕ್ತನಾದ ನೀನು ಪ್ರತೀಕಾರಕ್ಕೆ ತೊಡಗಿದರೆ ಚಾಲುಕ್ಯರಾಜ್ಯದ ಪುನಃಪ್ರತಿಷ್ಠೆಯ ನಮ್ಮ ಮೂಲೋದ್ದೇಶಕ್ಕೆ ಭಂಗ ತಂದಂತಾಗುವುದು. ಅದು ನಿನಗೊಪ್ಪಿಗೆಯೆ ಎಂದು ನನ್ನ ಪ್ರಶ್ನೆ.”

ಬೊಮ್ಮರಸನ ಉದ್ದೇಶ ಆಗ ಅರ್ಥವಾಯಿತು ಜಗದೇಕಮಲ್ಲನಿಗೆ. “ಹಾಗಾದರೆ ನಾವು ರಾಣಿಯ ಸಂದೇಶವನ್ನು....” ಎಂದು ಜಗದೇಕಮಲ್ಲನು ನುಡಿಯುತ್ತಿದ್ದಂತೆ ಬೊಮ್ಮರಸನು,

“ಸಂದೇಶವನ್ನು ನಾವು ರಹಸ್ಯವಾಗಿಡಬೇಕು. ಅದರ ಸುಳಿವು ಕೂಡ ಯಾರಿಗೂ ತಿಳಿಯಬಾರದು. ತನ್ನ ಮೇಲೆ ನಡೆಯಬಹುದಾದ ಅತ್ಯಾಚಾರದ ಭಯದಿಂದ ಬಿಡಾರಕ್ಕೆ ಬೆಂಕಿಹಚ್ಚಿ ರಾಣಿ ಕಾಮೇಶ್ವರಿ ಆತ್ಮಹತ್ಯೆ ಮಾಡಿಕೊಂಡಳೆಂದು ಈಗ ಎಲ್ಲರೂ ತಿಳಿದಿದ್ದಾರೆ. ಸಂದೇಶದ ವಿಚಾರ ಪ್ರಕಟವಾಗುವುದರಿಂದ ರಾಣಿಯ ಸತೀತ್ವಭಂಗದ ಅಪಮಾನವನ್ನು ನಾವಾಗಿ ಬಯಲಿಗೆಳೆದಂತಾಗುವುದು. ಚಾಲುಕ್ಯ ರಾಣಿಯೊಬ್ಬಳ ಅಪಮಾನವನ್ನು-ಕೆಲವರು ಹೇಳುವಂತೆ ಅವಳು ಸ್ವೈರಿಣಿಯೇ ಆಗಿರಲಿ, ಈ ಸಂದರ್ಭದಲ್ಲಿ ಬಹಿರಂಗ ಪಡಿಸುವುದು ನಮ್ಮ ರಾಜಕೀಯ ಉದ್ದೇಶಕ್ಕೆ ಸಹಾಯಕವಲ್ಲ,” ಎಂದು ಮುಗಿಸಿದನು.

ಕೆಲವು ಕ್ಷಣಗಳು ಯೋಚಿಸುತ್ತಿದ್ದು ಜಗದೇಕಮಲ್ಲನು, “ದಾಸಿ ಉಷಾವತಿಯ ಅಜಾಗರೂಕತೆಯಿಂದ ಅದು ಜನರಿಗೆ ತಿಳಿದರೆ,” ಎಂದನು.

ಬೊಮ್ಮರಸನು ಹೇಳಿದನು : “ಉಷಾವತಿ ಚತುರೆಯಾದ ಹೆಣ್ಣು. ಇದುವರೆಗೆ ಸಂದೇಶದ ವಿಚಾರವನ್ನು ರಹಸ್ಯವಾಗಿಟ್ಟಿದ್ದ ಅವಳು ಮುಂದೆಯೂ ರಹಸ್ಯವಾಗಿಡುವಳು. ಅಲ್ಲದೆ ಅವಳನ್ನು ಈ ದಿನವೇ ಪ್ರೇಮಾರ್ಣವನ ಸಂಗಡ ಕರ್ಹಾಡಕ್ಕೆ ಕಳುಹಿಸಲು ಮಾಚಿದೇವರು ಏರ್ಪಡಿಸಿದ್ದಾರೆ.”

“ಅವರು ಇಂದೇ ಹೊರಡುವರೆಂದು ಯಾರು ನಿನಗೆ ಹೇಳಿದವರು?”
“ಬ್ರಹ್ಮಶಿವ ಪಂಡಿತ”.

ಜಗದೇಕಮಲ್ಲನು ನಿಟ್ಟುಸಿರಿಟ್ಟು, ಹಾಗಾದರೆ ನನ್ನ ಪ್ರತೀಕಾರದ ಚಿಂತನೆ ಗಾಳಿಯೊಡನೆ ಸೆಣಸಿದಂತಾಯಿತು,” ಎಂದನು.

ಬೊಮ್ಮರಸನ ಮುಖ ಮಿದುನಗೆಯಿಂದ ಅರಳಿತು. ಅವನು ದನಿ ತಗ್ಗಿಸಿ ಹೇಳಿದನು : “ನಿನ್ನ ಸಾಹಸ ಪ್ರತೀಕಾರಗಳಿಗೆ ಭಂಗ ಬರುವುದಿಲ್ಲ, ಜಗದೇಕಮಲ್ಲ. ನಾನು ಎಲ್ಲವನ್ನೂ ಯೋಚಿಸಿ ಕಾರ್ಯವಿಧಾನ ನಿರ್ಧರಿಸಿದ್ದೇನೆ. ಇಂದೋ