ಪುಟ:ಕ್ರಾಂತಿ ಕಲ್ಯಾಣ.pdf/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೪೯


ನಾಳೆಯೋ ನಾವು ರಾಜಗೃಹದಿಂದ ಪಾರಾಗುವ ಅವಕಾಶ ದೊರಕುತ್ತದೆ. ಮಾಧವ ನಾಯಕನ ನೇಮಕದಿಂದ ಕರ್ಣದೇವ ಅಣ್ಣನ ಮೇಲೆ ಅಸಮಾಧಾನಗೊಂಡಿದ್ದಾನೆ. ರಾಜಗೃಹದ ರಕ್ಷಣಾ ವ್ಯವಸ್ಥೆ ಸಡಿಲವಾಗುತ್ತಿದೆ. ಬಿಜ್ಜಳನ ಗಮನವೆಲ್ಲ ಶರಣರ ದಮನ ಕಾರ್ಯದಲ್ಲಿ ಮಗ್ನವಾಗಿದೆ. ಮಧುವರಸಾದಿಗಳ ವಧೆಯಿಂದ ನಾಗರಿಕರಲ್ಲಿ ಅಸಮಾಧಾನ ಬೆಳೆಯುತ್ತಿದೆ, ರಾಜಗೃಹದ ಬಂಧನವನ್ನು ಕಿತ್ತೊಗೆಯುವ ಇಂತಹ ಸದವಕಾಶ ಜೀವಿತಕಾಲವೆಲ್ಲ ಕಾದರೂ ನಮಗೆ ದೊರಕುವುದಿಲ್ಲ.”

“ನಾವು ಇಲ್ಲಿಂದ ಸುಲಭವಾಗಿ ಪಾರಾಗಬಹುದು, ಆದರೆ ಆಮೇಲೆ ನಾವೇನು ಮಾಡುವುದು?” -ಸಂದೇಹಗ್ರಸ್ತನಂತೆ ಜಗದೇಕಮಲ್ಲನು ನುಡಿದನು.

ಬೊಮ್ಮರಸನು ಪಿಸುದನಿಯಲ್ಲಿ ಹೇಳಿದನು : “ಅದನ್ನು ನೀನು ಮೊದಲೇ ನಿರ್ಧರಿಸಿರುವೆಯಲ್ಲವೇ, ಜಗದೇಕ? ಅದರಂತೆ ಕಾರ್ಯ ನಡೆಯುವುದು. ಆದರೆ ಕಾರಣಗಳು ಬೇರೆ.”

ಜಗದೇಕಮಲ್ಲನ ದೃಷ್ಟಿ ಮನಸ್ಸಿನ ಕುತೂಹಲವನ್ನು ಪ್ರಕಟಿಸುತ್ತಿತ್ತು.

ಬೊಮ್ಮರಸನು ಮುಂದುವರಿದು ಹೇಳಿದನು : “ಬಿಜ್ಜಳನ ವಧೆಗೆ ಸಾಕಾದಷ್ಟು ರಾಜಕೀಯ ಕಾರಣಗಳಿವೆ. ಧರ್ಮಾಧಿಕರಣದ ಅಪಚಾರ, ಶರಣರ ಮೇಲೆ ಪ್ರಾರಂಭಿಸಿರುವ ನಿರಂಕುಶ ದಬ್ಬಾಳಿಕೆ, ಪಟ್ಟಾಭಿಷಿಕ್ತನಾದ ಚಾಲುಕ್ಯ ಅರಸನನ್ನು ಬಂಧನದಲ್ಲಿಟ್ಟು ತಾನೇ ಅರಸನಂತೆ ಮೆರೆಯುತ್ತಿರುವುದು, ಮಾಧವ ನಾಯಕನಂತಹ ದುರ್ಮಂತ್ರಿಗೆ ನಗರ ರಕ್ಷಣೆಯ ಅಧಿಕಾರ ವಹಿಸಿ ಸರ್ವಸೇನಾನಾಯಕನಾಗಿ ನೇಮಿಸಿಕೊಂಡಿರುವುದು, ಈ ಕಾರಣಗಳು ಸಾಕು ನಮ್ಮ ಪ್ರತೀಕಾರಕ್ಕೆ.”

“ನಿನ್ನ ಆತ್ಮವಿಶ್ವಾಸ ನನಗೆ ಆಶ್ಚರ್ಯವನ್ನುಂಟುಮಾಡುತ್ತಿದೆ, ಬೊಮ್ಮರಸ. ಮರಳ ಮನೆಯಾಗದಿರಲಿ ನಿನ್ನ ಆಶಾಕಲ್ಪನೆ.” -ಅವಿಶ್ವಾಸದಿಂದ ನುಡಿದನು ಜಗದೇಕಮಲ್ಲ.

ಬೊಮ್ಮರಸನ ಕಂಠ ಹೆಚ್ಚು ಗಂಭೀರವಾಯಿತು. ಅವನು ಹೇಳಿದನು : “ಈಗ ನೀನು ನಿಜವಾಗಿ ಭಂಡರಾಜನಂತೆ ಮಾತಾಡುತ್ತಿರುವೆ, ಜಗದೇಕ. ಈ ಸಾರಿ ನನ್ನ ಸಂಚು ಸುಳ್ಳಾಗುವುದಿಲ್ಲ. ಬಿಜ್ಜಳನು ತನ್ನ ಕಡೆಯ ಸಾಮಂತರ ರಹಸ್ಯ ಸಭೆಯನ್ನು ಕರೆದಿದ್ದಾನೆ, ಅದಕ್ಕಾಗಿ ರಾಜ್ಯದ ಎಲ್ಲಾ ಮಂಡಲಗಳಿಂದ ಪ್ರತಿನಿಧಿಗಳು ಬರುತ್ತಾರೆ. ಆಗ ನಾವು ವೇಷಾಂತರದಿಂದ ಸಭೆಯಲ್ಲಿರಲು ಹಂಚಿಕೆ ಹೂಡಿದ್ದೇನೆ. ನೀನು ಅಪೇಕ್ಷಿಸುವ ಅವಕಾಶ ಬೇಗ ದೊರಕುತ್ತದೆ.”

ಜಗದೇಕಮಲ್ಲನು ಉತ್ತರ ಕೊಡಲಿಲ್ಲ, ಯಾವ ಪ್ರತೀಕಾರದ ಕಲ್ಪನೆಯಿಂದ