ಪುಟ:ಕ್ರಾಂತಿ ಕಲ್ಯಾಣ.pdf/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೫೧


ಕಾರ್ಯ ಸುಗಮವಾಗಿ ನಡೆದದ್ದಕ್ಕಾಗಿ ಪರಶಿವನಿಗೆ ವಂದನೆ ಸಲ್ಲಿಸಿದಳು. ರಾಜ ಗೃಹದ ವೇಷಭೂಷಣಗಳನ್ನು ಅವಳು ಅಲ್ಲಿಯೇ ತೆಗೆದಿಟ್ಟು ಹಿಂದಿನಂತೆ ಬಿಳಿಯ ಸೀರೆ ಕುಪ್ಪಸಗಳನ್ನು ಧರಿಸಿದ್ದರಿಂದ ದೇಗುಲಕ್ಕೆ ಬರುತ್ತಿದ್ದ ಭಕ್ತಾದಿಗಳಾದರೂ ಅವಳನ್ನು ಗಮನಿಸಲಿಲ್ಲ.

ತುಸು ಹೊತ್ತಿನ ಮೇಲೆ ಅವಳು ಮಹಮನೆಯ ಕಡೆಗೆ ಹೋಗುತ್ತಿದ್ದಂತೆ, ನಗರದ ಜಂಗಮ, ಸನ್ಯಾಸಿ, ದೀನ ದರಿದ್ರ, ಸ್ತ್ರೀ ಪುರುಷರು ತಂಡ ತಂಡವಾಗಿ ಅದೇ ದಾರಿಯಲ್ಲಿ ಹೋಗುತ್ತಿರುವುದನ್ನು ಕಂಡು ಅಚ್ಚರಿಯಿಂದ ವೃದ್ಧೆಯೊಬ್ಬಳನ್ನು “ನೀವೆಲ್ಲ ಎಲ್ಲಿಗೆ ಹೋಗುತ್ತಿದ್ದೀರಿ?” ಎಂದು ಕೇಳಿದಳು.

"ಮಹಮನೆಗೆ. ನೀ ಕೂಡ ಅಲ್ಲಿಗೆ ತಾನೆ?” -ವೃದ್ಧೆ ಉತ್ತರ ಕೊಟ್ಟಳು. :“ಏನು ಈ ದಿನ ಅಲ್ಲಿ ವಿಶೇಷ?”
“ತಿಳೀದೇನು ನಿನಗ? ದವಸ, ಧಾನ್ಯ, ದುಡ್ಡು, ಅರಿವೆ -ಎಲ್ಲ ಕೊಡ್ತಾರಂತ ಅಲ್ಲಿ”
“ಕೊಡಲು ಕಾರಣ? ಏನಾದರೂ ಹಬ್ಬವೆ ಇವೊತ್ತು?”

“ನನಗ ತಿಳೀದವ್ವ ಅದೆಲ್ಲ. ಮಹಮನಿ ದಣೇರು ವರ್ಷಕ್ಕೆ ಒಂದ್ಸಾರಿ ಎರಡು ಸಾರಿ ಹಿಂಗ ದಾನಾ ಕೊಡೋದುಂಟು,”-ಎಂದು ವೃದ್ಧೆ ಬಸವಣ್ಣನವರ ಕಾಲದಿಂದ ಮಹಮನೆಯಲ್ಲಿ ಆಗಾಗ ನಡೆಯುತ್ತಿದ್ದ ದಾನ ಧರ್ಮ ದಾಸೋಹಗಳನ್ನು ಬಣ್ಣಿಸಲು ಮೊದಲುಮಾಡಿದಳು. ಉಷಾವತಿ ಹೂಗುಟ್ಟುತ್ತ ನಡೆದಳು.

ಅವರು ಮಹಮನೆಯನ್ನು ಮುಟ್ಟಿದಾಗ ಮಹಾದ್ವಾರದ ಮುಂದಿನ ಬಯಲಿನಲ್ಲಿ ದೊಡ್ಡ ಗುಂಪು ಸೇರಿದ್ದಿತು. ಮಾಚಿದೇವರ ನೇತೃತ್ವದಲ್ಲಿ ಹಲವು ಮಂದಿ ಶರಣರು ಜನರನ್ನು ಜಂಗಮ ಸನ್ಯಾಸಿಗಳು, ದೀನರು, ದರಿದ್ರರು, ಸ್ತ್ರೀಯರು ಎಂದು ಪ್ರತ್ಯೇಕ ಗುಂಪುಗಳಾಗಿ ವಿಭಾಗಿಸಿ, ಒಂದು ಸಾರಿಗೆ ಪ್ರತಿ ಗುಂಪಿಗೆ ಒಬ್ಬರಂತೆ ಐದು ಮಂದಿಯನ್ನು ಒಳಗೆ ಬಿಡುತ್ತಿದ್ದರು.

ಉಷಾವತಿ ಹೆಂಗಸರ ಗುಂಪಿನಲ್ಲಿ ತನ್ನ ಸರದಿಗಾಗಿ ಕಾಯುತ್ತ ನಿಂತಳು. ಮೊದಲೆ ಒಳಗೆ ಹೋಗಿದ್ದವರು ಧಾನ್ಯ ಬಟ್ಟೆ ಮುಂತಾದುವನ್ನು ಕೈಯಲ್ಲಿ ಹಿಡಿದು ಬೇರೆ ಬಾಗಿಲಿಂದ ಹೊರಗೆ ಬರುತ್ತಿದ್ದರು.

ಸ್ವಲ್ಪ ಹೊತ್ತಿನ ಮೇಲೆ ಅವಳು ಮಹಾದ್ವಾರವನ್ನು ದಾಟಿ ಒಳಗೆ ಹೋದಾಗ ಅಲ್ಲಿ ಕಂಡ ದೃಶ್ಯ ಅಚ್ಚರಿಗೊಳಿಸುವಂತಿತ್ತು. ಮೊಗಶಾಲೆ ಅಂಗಣಗಳಲ್ಲಿ ಧಾನ್ಯ ಬಟ್ಟೆಪಾತ್ರೆ ಪದಾರ್ಥಗಳು ರಾಶಿ ರಾಶಿಯಾಗಿ ಶೇಖರಿಸಲ್ಪಟ್ಟಿದ್ದವು. ಚೆನ್ನಬಸವಣ್ಣನವರ ಮತ್ತು ಸಕಲೇಶ ಮಾದರಸರ ನೇತೃತ್ವದಲ್ಲಿ ಶರಣರು, ನಾಗಲಾಂಬೆ