ಪುಟ:ಕ್ರಾಂತಿ ಕಲ್ಯಾಣ.pdf/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೫೨

ಕ್ರಾಂತಿ ಕಲ್ಯಾಣ


ನೀಲಲೋಚನೆಯರ ನೇತೃತ್ವದಲ್ಲಿ ಶರಣೆಯರು, ಬೇಡಲು ಬಂದವರಿಗೆ ಅವುಗಳನ್ನು ಹಂಚುತ್ತಿದ್ದರು. ಅರ್ಥಿಗಳ ಅಪೇಕ್ಷೆ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷಪಾತವಿಲ್ಲದೆ ಹಂಚುತ್ತಿದ್ದರು. ಗಮನದಲ್ಲಿಟ್ಟುಕೊಂಡು ಪಕ್ಷಪಾತವಿಲ್ಲದೆ ಹಂಚಿಕೆ ನಡೆಯುತ್ತಿದ್ದುದರಿಂದ ಎಲ್ಲರೂ ತೃಪ್ತಿಯಿಂದ ಹಿಂದಿರುಗುತ್ತಿದ್ದರು.

ಉಷಾವತಿ ಈ ದೃಶ್ಯವನ್ನು ಕೊಂಚ ಹೊತ್ತು ನೋಡುತ್ತಿದ್ದು ಬಳಿಕ ಅಗ್ಗಳನನ್ನು ನೋಡಲು ಅತಿಥಿಶಾಲೆಯ ಕಡೆಗೆ ಹೋದಳು.

ಬಾಗಿಲಲ್ಲಿ ನಿಂತಿದ್ದ ಅಗ್ಗಳನು, “ನಿನಗಾಗಿ ನಾನು ಭೀತನಾಗಿದ್ದೆ, ಉಷಾ. ಈಗ ಸಮಾಧಾನವಾಯಿತು. ರಾಜಗೃಹದಲ್ಲಿ ಏನು ನಡೆಯಿತು? ಜಗದೇಕಮಲ್ಲರಸರಿಗೆ ಸಂದೇಶ ಮುಟ್ಟಿಸಿದೆಯಾ? ಅನುಮತಿ ಪತ್ರ ನಿನಗೆ ಕೊಡಲು ಮರೆತದ್ದಕ್ಕಾಗಿ ಬ್ರಹ್ಮಶಿವ ಪಂಡಿತನಿಗೆ ತಕ್ಕ ಶಾಸ್ತಿ ಆಯಿತು,” ಎಂದನು.

“ಅನುಮತಿ ಪತ್ರ ನನ್ನ ಹತ್ತಿರ ಇಲ್ಲದಿದ್ದುದು ಒಳ್ಳೆಯದೇ ಆಯಿತು,” ಎಂದು ಪ್ರಾರಂಭಿಸಿ ಉಷಾವತಿ, ಕಳೆದ ರಾತ್ರಿ ತಾನು ರಾಜಗೃಹದ ಮಹಾದ್ವಾರಕ್ಕೆ ಹೋದಾಗಿನಿಂದ, ಮುಂಜಾವಿನಲ್ಲಿ ನಗರಕ್ಕೆ ಬಂದವರೆಗೆ ನಡೆದುದೆಲ್ಲವನ್ನೂ ವಿವರವಾಗಿ ಹೇಳಿದಳು.

ಕೊನೆಗವಳು, “ಈಗ ಬ್ರಹ್ಮಶಿವ ಪಂಡಿತರೆಲ್ಲಿ? ಅವರಿಗೆ ನೀವು ಮಾಡಿದ ಶಾಸ್ತಿಯೇನು?” ಎಂದು ಕೇಳಿದಳು.

ಅಗ್ಗಳನು ನಕ್ಕು ಹೇಳಿದನು : ಶಾಸ್ತಿ ಕಠಿಣವೇನೂ ಅಲ್ಲ. ಮಾಚಿದೇವರು ಪಂಡಿತನಿಗೆ ಕೊಟ್ಟ ತಿಳಿಗೇಡಿ ಪ್ರಶಸ್ತಿಯ ಪುರಶ್ಚರಣ. ನಿನ್ನಿನ ರಾತ್ರಿ ನಾವು ಮಹಮನೆಗೆ ಹಿಂದಿರುಗಿದಾಗಿನಿಂದ, ಮುಂಜಾವಿನಲ್ಲಿ ಪಂಡಿತನು ರಾಜಗೃಹಕ್ಕೆ ಹೋಗುವವರೆಗೆ ನೂರೊಂದು ಸಾರಿ ಅವನನ್ನು ಈ ಹೆಸರಿನಿಂದ ಕರೆದಿದ್ದೇನೆ. ಕೊನೆಗೆ ಅವನು ಇಲ್ಲಿಂದ ಹೊರಟಾಗ ನನ್ನೊಡನೆ ಮಾತಾಡುವಷ್ಟು ಸಹನೆಯೂ ಉಳಿದಿರಲಿಲ್ಲ ಅವನಲ್ಲಿ.”

ಅಗ್ಗಳನ ರೂಢಾಚರಣೆಯಿಂದ ಕೋಪಗೊಂಡ ಉಷಾವತಿ, “ನಾನು ಪಂಡಿತರ ಸ್ಥಾನದಲ್ಲಿದ್ದರೆ ನಿಮಗೆ ಚನ್ನಾಗಿ ಬುದ್ಧಿ ಕಲಿಸುತ್ತಿದ್ದೆ,” ಎಂದಳು.

“ಏನು ಮಾಡುತ್ತಿದ್ದೆ?”

“ರಾಜಗೃಹದಲ್ಲಿ ಪ್ರಭುಗಳ ಕಾವ್ಯೋಪದೇಶಕರಾಗಿ ನೀವು ನಡೆಸಿದ ಭಂಡ ಜೀವನವನ್ನು ಬಹಿರಂಗಪಡಿಸುತ್ತಿದ್ದೆ. ನೀವು ಎಂತಹ ಲಜ್ಜೆಗೇಡಿ ಅತಿ ಕಾಮುಕರೆಂಬುದನ್ನು ಎಲ್ಲರಿಗೂ ಹೇಳುತ್ತಿದ್ದೆ.”

“ನಾನು ಲಜ್ಜೆಗೇಡಿಯೂ ಅಲ್ಲ. ಬ್ರಹ್ಮಶಿವನು ತಿಳಿಗೇಡಿಯೂ ಅಲ್ಲ. ನಿನ್ನ