ಪುಟ:ಕ್ರಾಂತಿ ಕಲ್ಯಾಣ.pdf/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೫೫


ಹೋದ ಮೇಲೆ ನೀವೇನು ಮಾಡುತ್ತೀರಿ?” ಎಂದು ಕೇಳಿದಳು.

“ರಾಜಗೃಹದ ಸಂಚು ಯಾವ ರೀತಿ ಮುಗಿಯುವುದೆಂದು ನೋಡುತ್ತಿದ್ದೇನೆ. ಆಮೇಲೆ ಚೆನ್ನಬಸವಣ್ಣನವರೊಡನೆ ಕಲ್ಯಾಣವನ್ನು ತೊರೆದು ಉಳಿವೆಗೆ ಹೋಗುವುದು.”

“ಉಳಿವೆ ! ಎಲ್ಲಿದೆ ಅದು ?”
“ಸಹ್ಯಾದ್ರಿಯ ಒಂದು ರಮ್ಯ ಸ್ಥಾನದಲ್ಲಿ.”

“ಎರಡು ದಿನಗಳಿಂದ ಮಹಮನೆಯ ಅನ್ನ ತಿಂದು ನೀವೂ ಅರ್ಧ ಶರಣರೇ ಆದಿರಿ. ಇನ್ನುಳಿದಿರುವುದು ದೀಕ್ಷೆಯೊಂದೇ!” -ಎಂದು ಉಷಾದೇವಿ ನಗೆಯಾಡಿದಳು.

ಕಳೆದೆರಡು ದಿನಗಳಿಂದ ಕಲ್ಯಾಣದ ಶೈವಮಠದಲ್ಲಿ ಉಳಿವೆಯ ವಿಚಾರ ಪ್ರಸ್ತಾಪಿಸಲ್ಪಡುತ್ತಿತ್ತು. ಅದು ಎಲ್ಲಿದೆ? ಕಲ್ಯಾಣದಿಂದ ಎಷ್ಟು ಹರದಾರಿ ದೂರ? ದಾರಿಯಲ್ಲಿ ಯಾವ ಯಾವ ನದಿ ಬೆಟ್ಟಗಳನ್ನು ದಾಟಬೇಕು? ಮಾರ್ಗದ ಕಷ್ಟ ಕಾರ್ಪಣ್ಯಗಳೇನು? ಈ ವಿಚಾರಗಳನ್ನು ಕುರಿತ ಚಿತ್ರ ವಿಚಿತ್ರ ಕಥೆಗಳು ಪ್ರಚಾರವಾಗಿದ್ದವು.

“ಇದುವರೆಗೆ ಯಾರೂ ನೋಡದ, ಕೇಳದ, ರಹಸ್ಯ ಸ್ಥಳ ಅದು. ಚೆನ್ನ ಬಸವಣ್ಣನವರಿಗೆ ಮಾತ್ರ ಅದರ ಮಾರ್ಗ ತಿಳಿದದ್ದು ಹೇಗೆ ? ಯಾವನೋ ಯಕ್ಷ ಕನಸಿನಲ್ಲಿ ಕಾಣಿಸಿಕೊಂಡು ಹೇಳಿರಬೇಕು,” ಎಂದು ಕೆಲವರು ಹಾಸ್ಯಮಾಡಿದ್ದರು.

“ಅದು ಬಸವಣ್ಣನವರ ಕಲ್ಪನೆ. ಚೆನ್ನಬಸವಣ್ಣನವರು ಅದಕ್ಕೆ ಬಣ್ಣ ಹಚ್ಚಿಕೋಡು ಕಟ್ಟಿ ದೊಡ್ಡದು ಮಾಡಿದ್ದಾರೆ. ಅವರ ಸವಿನುಡಿಗಳಿಗೆ ಬೆರಗಾಗಿ ಸಂಗಡ ಹೋದವರು ಅರಣ್ಯದಲ್ಲಿ ಅನ್ನವಿಲ್ಲದೆ ಸಾಯಬೇಕಾಗುತ್ತದೆ.” ಎಂದು ಕೆಲವರು ಅಮಂಗಲ ನುಡಿದರು.

“ಪುರಾಣಗಳಲ್ಲಿ ಹೇಳುವ ಗೊಂಡವನದ ನಡುವೆ ಇರುವ ಪರ್ವತ ಶೃಂಗವೇ ಉಳಿವೆ. ಯಕ್ಷರು, ವಿದ್ಯಾಧರರು, ಸಿದ್ದರು, ಅಲ್ಲಿ ಸಂಚರಿಸುತ್ತಾರೆ. ಎತ್ತರವಾದ ಅದರ ಶಿಖರದ ಮೇಲೆ ನಿಂತು ನಾವು ರೆಕ್ಕೆಯಿಲ್ಲದೆ ಕೈಲಾಸಕ್ಕೆ ಹಾರಬಹುದು,” ಎಂದು ಕೆಲವರು ಕಟಕಿಯಾಡಿದರು.

“ಕಲ್ಯಾಣದ ಸುಖವಾಸವನ್ನು ಬಿಟ್ಟು ಕಾಣದ ಯಾವುದೋ ವಸ್ತುವನ್ನು ಹುಡುಕಲು ಹೋದರೆ ಕೈಗೆ ಬಂದದ್ದನ್ನು ಬಿಟ್ಟು ಎಟುಕದ ಹಣ್ಣಿಗೆ ಕೈಚಾಚಿದ ಮೋಟರಾಗುವೆವು ನಾವು,” ಎಂದು ಕೆಲವರು ವಿವೇಕ ನುಡಿದರು.

ತಮ್ಮ ಸಂಗಡ ಉಳಿವೆಗೆ ಬರುವಂತೆ ಚೆನ್ನಬಸವಣ್ಣನವರು ಕಳುಹಿಸಿದ್ದ