ಪುಟ:ಕ್ರಾಂತಿ ಕಲ್ಯಾಣ.pdf/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೫೭


ಈ ಲಂಪಟರು ಸುಳಿವರು ಕ್ಷುದೆ ಕಾರಣ.
“ತೋರಿ, ಮಾರಿ,' ಎಂಬ ವ್ಯವಹಾರಿಗಳಿವರು,
ನಿರ್ಣಯ ನಿರ್ಲೇಪಭಕ್ತಿಯುಳ್ಳವರನಲ್ಲದೊಲ್ಲ
ಸಕಲೇಶ್ವರ ದೇವಾ !”

ಆ ವೃದ್ದ ಜಂಗಮನ ಅನುಭವದ ನುಡಿಗಳು ಚೆನ್ನಬಸವಣ್ಣನವರಿಗೆ ಸ್ಫೂರ್ತಿದಾಯಕವಾಯಿತು. ಅವರು ಭಾವಾವೇಶದಿಂದ ನುಡಿದರು :

“ಬಟ್ಟ ಬಯಲೆಲ್ಲ ಗಟ್ಟಿಗೊಂಡೊಡೆ, ಸ್ವರ್ಗ ಮರ್ತ್ಯ
ಪಾತಾಳಕ್ಕೆ ಠಾವಿನ್ನೆಲ್ಲಿಹುದೊ ?
ಮೇಘಜಲವೆಲ್ಲ ಮುತ್ತಾದಡೆ ಸಪ್ತ ಸಾಗರಂಗಳಿಗೆ
ಉದಕವನ್ನೆಲ್ಲಿಹುದೋ ?
ಕಷ್ಟಜೀವಿ ಮನುಜರೆಲ್ಲ ನೆಟ್ಟನೆ ಶಿವಜ್ಞಾನಿಗಳಾದಡೆ
ಮುಂದೆ ಭವದ ಬಳ್ಳಿಗೆ ಬೀಜ ಇನ್ನೆಲ್ಲಿಹುದೊ ?
ನಮ್ಮ ಕೂಡಲಚೆನ್ನ ಸಂಗಯ್ಯನಲ್ಲಿ
ಸಾವಿರಕ್ಕೊಬ್ಬ ಸತ್ಯ, ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ
ಶರಣ !”
ಸಕಲೇಶ ಮಾದರಸರ ಮುಖದಲ್ಲಿ ಮೆಚ್ಚುಗೆಯ ನಗೆ ಮೂಡಿತು. :ಮಾಚಿದೇವರು ಅನುಮೋದಿಸಿ ತಲೆದೂಗಿದರು.

“ಅನುಭವ ವೃದ್ಧರಾದ ನೀವು ಒಪ್ಪುವುದಾದರೆ, ನಮ್ಮ ಆಹ್ವಾನವನ್ನು ನಿರಾಕರಿಸಿದ ಮಠಾಧಿಪತಿಗಳೆಲ್ಲರಿಗೆ ಈ ವಚನದ ಪ್ರತಿ ಮಾಡಿಸಿ ಉತ್ತರ ಕಳುಹಿಸುತ್ತೇನೆ,” ಎಂದರು ಚೆನ್ನಬಸವಣ್ಣನವರು.

ಸಕಲೇಶ ಮಾದರಸರು ಯೋಚಿಸುತ್ತ ಮೌನವಾಗಿದ್ದರು.

ಮಾಚಿದೇವರು ಹೇಳಿದರು : “ಈ ಉತ್ತರ ಪ್ರತ್ಯುತ್ತರಗಳ ಆಲಸ್ಯ ಕಾರ್ಯದಲ್ಲಿ ಕಾಲಹರಣ ಮಾಡಲು ಈಗ ನಮಗೆ ಅವಕಾಶವಿಲ್ಲ, ಚೆನ್ನಬಸವಣ್ಣನವರೆ. ಹೇಳಿ ಕಳುಹಿಸಿ ನಾವು ನಮ್ಮ ಕಾರ್ಯ ಮಾಡಿದ್ದೇವೆ. ಬರುವುದೂ ಬಿಡುವುದೂ ಅವರ ಹೊಣೆ. ಬುದ್ಧಿಃ ಕರ್ಮಾನುಸಾರಿಣೀ ಎಂದು ಕೇಳಿಲ್ಲವೆ ನೀವು ? ನಾಳೆ ದಾಸೋಹ ಮುಗಿದ ತಕ್ಷಣ ನಾವು ಹೊರಡಲು ಸಿದ್ಧರಾಗಿರಬೇಕು. ಅದಕ್ಕಾಗಿ ನಾನು ಎಲ್ಲವನ್ನೂ ಏರ್ಪಡಿಸುತ್ತಿದ್ದೇನೆ.”

ಚೆನ್ನಬಸವಣ್ಣನವರು ಒಪ್ಪಿದರು.

***

ಮರುದಿನ ಪ್ರಾತಃಕಾಲ ಮಹಮನೆಯ ಧನ ಧಾನ್ಯ ದಾಸೋಹ