ಪುಟ:ಕ್ರಾಂತಿ ಕಲ್ಯಾಣ.pdf/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೫೮

ಕ್ರಾಂತಿ ಕಲ್ಯಾಣ


ಪುನರಾರಂಭವಾಗಿ ಮುಗಿಯುತ್ತ ಬಂದಿದ್ದಾಗ ಬ್ರಹ್ಮಶಿವ ಪಂಡಿತ ಅಲ್ಲಿಗೆ ಬಂದನು. ಅವನ ಕಪಿನಿ ಮುಂಡಾಸು ಜೋಳಿಗೆಗಳನ್ನು ಕಂಡು ಅಗ್ಗಳನಿಗೆ ಸಮಾಧಾನವಾಯಿತು. ಮೊದಲೇ ಗೊತ್ತಾಗಿದ್ದಂತೆ ಹಿಂದಿನ ಸಂಜೆ ಉಷಾವತಿ ಕರ್ಹಾಡಕ್ಕೆ ಪಯಣಮಾಡಿದ ಮೇಲೆ, ಅಗ್ಗಳನು ಏಕಾಂಗಿಯಾಗಿ, ರಾಜಗೃಹದಲ್ಲಿ ಏನಾಯಿತೆಂಬುದನ್ನು ತಿಳಿಯುವ ಆತುರದಿಂದ ಬ್ರಹ್ಮಶಿವನ ಎದುರು ನೋಡುತ್ತಿದ್ದನು.

ಹಾಸ್ಯ ಪ್ರವೃತ್ತಿಯ ಬ್ರಹ್ಮಶಿವನ ಮುಖ ಯಾವುದೋ ಚಿಂತೆಯಿಂದ ಮಲಿನವಾಗಿರುವುದನ್ನು ಕಂಡು ಅಗ್ಗಳನು, “ಏಕೆ ಪಂಡಿತರೆ, ನಿಮ್ಮ ಗುರುಗಳ ತಪಶ್ಚರ್ಯೆ ನಿರ್ವಿಘ್ನವಾಗಿ ನಡೆಯುತ್ತಿಲ್ಲವೆ ? ಅಪ್ಸರೆಯರಿಂದ ಅಡಚಣೆಯಾಗುತ್ತಿದೆಯೆ ?” ಎಂದು ನಗೆಯಾಡಿದನು.

“ರಾಜಗೃಹದಲ್ಲಿ ಅಪ್ಸರೆಯರ ಕಾಟ ಎಂದಿನಂತಿದ್ದರೂ ಗುರುಗಳ ತಪಶ್ಚರ್ಯೆ ನಿರ್ವಿಘ್ನವಾಗಿ ನಡೆಯುತ್ತಿದೆ, ಅಗ್ಗಳದೇವ. ನಮ್ಮ ಗುರುಗಳಿಗಿರುವ ಒಂದೇ ಒಂದು ಅಡಚಣೆಯೆಂದರೆ, ಕಾಲಾನುಗುಣವಾಗಿ ಬದಲಾವಣೆಯಾಗುವ ಅವರ ಅಸ್ಥಿರ ಮನೋವೃತ್ತಿ.” -ತತ್ವಶಾಸ್ತ್ರಿಯಂತೆ ಕೈಯಾಡಿಸುತ್ತ ಬ್ರಹ್ಮಶಿವನು ಉತ್ತರ ಕೊಟ್ಟನು.

“ಏಕೆ? ಈಗೇನಾಗಿದೆ ಅವರಿಗೆ ?”

ಬ್ರಹ್ಮಶಿವ ದನಿ ತಗ್ಗಿಸಿ ಹೇಳಿದನು : “ಬೊಮ್ಮರಸರಿಗೆ ಪುನಃ ವೇಷಾಂತರದ ಹುಚ್ಚು ಹಿಡಿದಿದೆ. ಗಡ್ಡ ಜಟೆಗಳನ್ನು ತೆಗೆದು ಹಾಕಿ, ಇಷ್ಟು ದಿನಗಳ ಪರಿಶ್ರಮದಿಂದ ಗಳಿಸಿದ ಶಿವಯೋಗಿ ಪ್ರಶಸ್ತಿಗೆ ತಿಲಾಂಜಲಿ ಕೊಡಲು ಯೋಚಿಸಿದ್ದಾರೆ.”

“ಈಗ ಅವರಿಗೆ ಬೇಕಾದ್ದೇನು?” -ಅಗ್ಗಳ ರಹಸ್ಯವಾಗಿ ಕೇಳಿದನು.

ಬಿಜ್ಜಳರಾಯರ ಪರಿವಾರ ಧರಿಸುವ ಎರಡು ಸಮವಸ್ತ್ರಗಳು, ನಾಟಕದ ಉದ್ದಾನಯ್ಯನಿಂದ ಗಡ್ಡ ಜಟೆಗಳನ್ನು ಕೊಂಡು ತಂದು ಶಿವಯೋಗಿಯನ್ನಾಗಿ ಮಾಡಿದೆ. ಈಗ ಸಮವಸ್ತ್ರಗಳನ್ನು ಎಲ್ಲಿಂದ ತರಲಿ? ಬೆಲೆ ಕೊಟ್ಟರೆ ಸಿಕ್ಕುವ ವಸ್ತುಗಳಲ್ಲ ಅವು,” -ಎಂದು ಬ್ರಹ್ಮಶಿವ ತನ್ನ ಚಿಂತೆಯ ಕಾರಣ ಹೇಳಿಕೊಂಡನು.

ಅಗ್ಗಳನು ತಿಳಿದನು, ರಾಜಗೃಹದಿಂದ ತಪ್ಪಿಸಿಕೊಂಡು ಹೊರಗೆ ಬರುವ ಹಂಚಿಕೆ ನಡೆದಿದೆಯೆಂದು. “ರಹಸ್ಯ ವಿಚಾರ, ಇಲ್ಲಿ ಮಾತಾಡಬಾರದು,” ಎಂದು ಅವನು ಬ್ರಹ್ಮಶಿವನನ್ನು ಅತಿಥಿಶಾಲೆಯ ವಾಸಗೃಹಕ್ಕೆ ಕರೆದುಕೊಂಡು ಹೋದನು. ಅಲ್ಲಿ ಅವರು ಕೊಂಚ ಹೊತ್ತು ಕಿವಿ ಮಾತಾಡಿದ ಮೇಲೆ ಅಗ್ಗಳನು, ನಿಮ್ಮ ಸಮವಸ್ತ್ರ ಸಮಸ್ಯೆಯ ಪರಿಹಾರ ನನಗೆ ತಿಳಿದಿದೆ,” ಎಂದು ಬ್ರಹ್ಮಶಿವನನ್ನು ಮಹಮನೆಯ ವಸ್ತ್ರ ಭಂಡಾರದ ಕೋಣೆಗೆ ಕರೆದುಕೊಂಡು ಹೋದನು.