ಪುಟ:ಕ್ರಾಂತಿ ಕಲ್ಯಾಣ.pdf/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೫೯


ಅಲ್ಲಿ ಕರಣಿಕನಾಗಿದ್ದ ಉತ್ತಣ್ಣನೆಂಬ ಶರಣನು ಕಳೆದೆರಡು ದಿನಗಳಿಂದ ಅಗ್ಗಳನಿಗೆ ಪರಿಚಿತನಾಗಿದ್ದನು. ಹರೀಶರುದ್ರ ಅರ್ಥಾತ್ ಬ್ರಹ್ಮಶಿವನ ಪರಿಚಯವೂ ಅವನಿಗಿತ್ತು.

“ನಿಮ್ಮ ವಸ್ತ್ರ ದಾಸೋಹದಲ್ಲಿ ಪಾಲಿಗೆ ಬಂದಿದ್ದೇವೆ, ಉತ್ತಣ್ಣನವರೆ, ನಮಗೇನು ಕೊಡುತ್ತೀರಿ?” -ಅಗ್ಗಳನು ಕೇಳಿದನು, ಅರ್ಥಿಯಾಗಿ ಬಂದವನಂತೆ ವಿನಯ ನಮ್ರತೆಗಳಿಂದ.

“ಕೊಂಚ ಹೊತ್ತಿಗೆ ಮೊದಲು ಬಂದಿದ್ದರೆ ಒಂದೆರಡು ಒಳ್ಳೆಯ ಬಟ್ಟೆಗಳಾದರೂ ಸಿಕ್ಕುತ್ತಿದ್ದವು. ಈಗ ಉಳಿದಿರುವುದು ಅರಮನೆಯ ಚಾವಡಿಗೆ ಕಳುಹಿಸಬೇಕಾದ ಈ ಸಮವಸ್ತ್ರಗಳು ಮಾತ್ರ” -ಎಂದು ಉತ್ತಣ್ಣ ಪಾರ್ಶ್ವದಲ್ಲಿ ಅಡಕವಾಗಿ ಮಡಿಸಿಟ್ಟಿದ್ದ ಬಟ್ಟೆಗಳನ್ನು ತೋರಿಸಿದನು.

“ಸಮವಸ್ತ್ರಗಳು! ಅವುಗಳನ್ನು ಅರಮನೆಯ ಚಾವಡಿಗೇಕೆ ಕಳುಹಿಸಬೇಕು?” -ಅಚ್ಚರಿಗೊಂಡವನಂತೆ ಅಗ್ಗಳನ್ನು ಕೇಳಿದನು.

ಉತ್ತಣ್ಣ ಹೇಳಿದನು : “ಇವು ಅರಮನೆಯ ಬೋಯಿಗಳು, ಪಸಾಯಿತರು, ಅಂಗರಕ್ಷಕರು, ದೀವಟಿಗೆಯವರು ಮುಂತಾದ ಪರಿವಾರದ ಜನ ತೊಡುವ ಸಮವಸ್ತ್ರಗಳು. ಚಿಕ್ಕ ಡಣ್ಣಾಯಕರು ಮಂತ್ರಿಗಳಾದಾಗ ಅವರ ಪರಿವಾರದ ಉಪಯೋಗಕ್ಕೆಂದು ಅರಮನೆಯ ಹೆಗ್ಗಡೆ ಇವುಗಳನ್ನು ನಮಗೆ ಕಳುಹಿಸಿದ್ದನು. ಈಗ ಅವುಗಳನ್ನು ಹಿಂದಕ್ಕೆ ಕಳುಹಿಸಬೇಕಾಗಿದೆ.”

“ನೀವು ಅನುಮತಿ ಕೊಟ್ಟರೆ ಇದರಲ್ಲಿಯೇ ನಮಗೆ ಬೇಕಾದ್ದನ್ನು ಆರಿಸಿಕೊಳ್ಳುತ್ತೇವೆ,” -ಅಗ್ಗಳನೆಂದನು, ಅನುನಯದ ನಗೆ ಹಾರಿಸಿ.

ಆರಿಸಿಕೊಳ್ಳಿರಿ. ಅರಮನೆಯ ಚಾವಡಿಗೆ ಆರು ಕೊರೆಯಾಗಲಿ, ಮೂರು ಹೆಚ್ಚಾಗಲಿ, ಎರಡೂ ಒಂದೇ,” -ಎಂದು ಉತ್ತಣ್ಣ ಅರಮನೆಯ ಚಾವಡಿಯ ವೆಚ್ಚದಲ್ಲಿ ತನ್ನ ಔದಾರ್ಯವನ್ನು ಮೆರೆಸಿದನು.

ನೀಲಿ ಕೆಂಪು ಪಟ್ಟೆಗಳಿದ್ದ ಒಂದೇ ಮಾದರಿಯ ಎರಡು ಚಲ್ಲಣ, ಅಂಗಿ ಮತ್ತು ಕುಲಾವಿಗಳನ್ನು ಅಗ್ಗಳನು ಬಟ್ಟೆಯ ರಾಶಿಯಿಂದ ಆರಿಸಿ ಬೇರಿಡುತ್ತಿದ್ದಂತೆ ಮಾಚಿದೇವರು ಅಲ್ಲಿಗೆ ಬಂದು, “ನಾವು ಇಂದೇ ಕಲ್ಯಾಣವನ್ನು ಬಿಡಬಹುದು, ಮುಂದೆ ನೀವೇನು ಮಾಡುವಿರಿ?” ಎಂದು ಕೇಳಿದನು.

“ಕಲಿದೇವನ ದಯದಿಂದ ಕಲ್ಯಾಣದಲ್ಲಿ ನನ್ನ ಮಣಿಹ ಮುಗಿಯಿತು. ನಿಮ್ಮ ಸಂಗಡ ಉಳಿವೆಗೆ ಬರಲು ಅನುಮತಿ ಬೇಡುತ್ತೇನೆ,” ಎಂದು ಅಗ್ಗಳ ಕೈಮುಗಿದು ಹೇಳಿದನು.