ಪುಟ:ಕ್ರಾಂತಿ ಕಲ್ಯಾಣ.pdf/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೬೦

ಕ್ರಾಂತಿ ಕಲ್ಯಾಣ


ಮಾಚಿದೇವರು ಬ್ರಹ್ಮಶಿವನ ಕಡೆ ತಿರುಗಿ, “ನೀನು, ಹರೀಶರುದ್ರ?” ಎಂದರು.

“ಗುರುಗಳು ರಾಜಗೃಹದ ಸುಖವಾಸದಲ್ಲಿ ಇನ್ನೂ ಕೆಲವು ದಿನಗಳಿರಲು ಯೋಚಿಸಿದ್ದಾರೆ. ನಾನು ನಿಮ್ಮ ಸಂಗಡ ಉಳಿವೆಗೆ ಬರುತ್ತೇನೆ,” ಎಂದು ಬ್ರಹ್ಮ ಶಿವ ವಿನಯದಿಂದ ಉತ್ತರ ಕೊಟ್ಟನು.

“ಬರುವವರನ್ನು ನಾವು ಬೇಡವೆನ್ನುವುದಿಲ್ಲ, ಬಾರದವರನ್ನು ಬಲಾತ್ಕಾರಿಸುವುದಿಲ್ಲ. ಬರುವ ಇಚ್ಛೆ ನಿಮಗಿದ್ದರೆ ಅಗತ್ಯವಾಗಿ ಬರಬಹುದು. ಅದಕ್ಕಾಗಿ ಈ ದೀವಟಿಗೆಯವರ ಸಮವಸ್ತ್ರಗಳನ್ನು ಆರಿಸಿಕೊಂಡಂತೆ ಕಾಣುತ್ತದೆ. ಈ ಜಮದಂಡಿಗಳನ್ನೂ ತೆಗೆದುಕೊಳ್ಳಿ. ಸಮವಸ್ತ್ರ ಹಾಕಿಕೊಂಡಾಗ ಇವು ಕೈಯಲ್ಲಿ ಇರಬೇಕು. ಕಲಿದೇವರ ದೇವನು ನಿಮ್ಮನ್ನು ರಕ್ಷಿಸುವನು.”

-ಎಂದು ಮಾಚಿದೇವರು ಉಗ್ರಾಣದ ಮೂಲೆಯಲ್ಲಿದ್ದ ಎರಡು ದಂಡಗಳನ್ನು ತೆಗೆದು ಅಗ್ಗಳ ಬ್ರಹ್ಮಶಿವರಿಗೆ ಕೊಟ್ಟು ಉತ್ತರಕ್ಕಾಗಿ ಕಾಯದೆ ಅಲ್ಲಿಂದ ತೆರಳಿದರು.

ಬ್ರಹ್ಮಶಿವ ಅಗ್ಗಳರು ಉತ್ತಣ್ಣನಿಗೆ ವಂದಿಸಿ ಅತಿಥಿ ಶಾಲೆಗೆ ಹೋದರು. ಬಟ್ಟೆಯ ಗಂಟು ಮತ್ತು ದಂಡಗಳನ್ನು ಅಲ್ಲಿಟ್ಟು ಬ್ರಹ್ಮಶಿವನು, “ಬೊಮ್ಮರಸರು ಹೇಳಿದ್ದದ್ದು ಇಂತಹ ದೊಣ್ಣೆ ಮತ್ತು ಸಮವಸ್ತ್ರಗಳನ್ನೇ. ಹುಡುಕಾಡದೆ ಅವು ನಮಗೆ ಸಿಕ್ಕಿದವು,” ಎಂದನು.

“ಇವು ದೊಣ್ಣೆಗಳಲ್ಲ, ಬ್ರಹ್ಮಶಿವ ಪಂಡಿತರೆ. ಜಮದಂಡಿ ಎಂದು ಮಾಚಿ ದೇವರು ಹೇಳಿದ್ದು ಕೇಳಲಿಲ್ಲವೇ?” ಎಂದನು ನಗುತ್ತ ಅಗ್ಗಳ.

“ಜಮದಂಡಿ ಎಂದರೆ?”

“ಯಮದಂಡ. ರಾತ್ರಿ ಕಾಲದಲ್ಲಿ ದೀವಟಿಗೆಯವರು ಅಂಗರಕ್ಷಕ ಭಟರಂತೆ ಪ್ರಭುಗಳ ಸನಿಹದಲ್ಲಿ ಇರಬೇಕಾಗುತ್ತದೆ. ಕಾರಣ ಅವರಲ್ಲಿ ನಂಬಿಕಸ್ಥರಾದವರಿಗೆ ಪ್ರಭುರಕ್ಷಣೆಗಾಗಿ ಈ ರಹಸ್ಯ ಆಯುಧಗಳನ್ನು ಕೊಡುತ್ತಾರೆ.”

ಎಂದು ಹೇಳಿ ಅಗ್ಗಳನು ದಂಡಗಳ ಹಿಡಿಗಳನ್ನು ಕಳಚಿ ಒಳಗೆ ಅಡಕವಾಗಿ ಜೋಡಿಸಿಟ್ಟಿದ್ದ ಸುರಗಿಗಳನ್ನು ತೆಗೆದು ತೋರಿಸಿದನು.

ಬ್ರಹ್ಮಶಿವ ಬೆಬ್ಬೆರಗಾಗಿ, “ಬೊಮ್ಮರಸರು ಹೇಳಿದ್ದು ಇಂತಹ ಮಾರಕ ಶಸ್ತ್ರಗಳನ್ನಲ್ಲ,” ಎಂದನು.

“ನರನೊಂದ ಕೇಳಿದರೆ ಹರನೊಂದ ಕೊಟ್ಟಂತಾಯಿತು. ಈ ವಿಚಾರದಲ್ಲಿ ನಾವು ನಿರುಪಾಯರು, ಪಂಡಿತರೆ. ನೀವು ಇದನ್ನು ಬಹಳ ಎಚ್ಚರದಿಂದ ತೆಗೆದುಕೊಂಡು ಹೋಗಬೇಕು. ಮಹಾದ್ವಾರದಲ್ಲಿ ಕಾವಲುಗಾರರು ಕಂಡರೆ ಪ್ರಾಣಕ್ಕೆ ಸಂಚಕಾರ,”