ಪುಟ:ಕ್ರಾಂತಿ ಕಲ್ಯಾಣ.pdf/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೬೫


ಕರ್ಣದೇವ. ಸಭೆಯಲ್ಲಿ ಇನ್ನೂ ಅನೇಕ ಮುಖ್ಯ ವಿಷಯಗಳನ್ನು ಪರ್ಯಾಲೋಚಿಸಬೇಕಾಗಿದೆ,” ಎಂದು ಅವನು ಎಚ್ಚರಿಕೆ ಕೊಟ್ಟನು.

“ಮಾಧವನಾಯಕರ ಸಲಹೆಯನ್ನು ನಾನು ವಿರೋಧಿಸುತ್ತೇನೆ,” ಎಂದು ಕರ್ಣದೇವನು ಪ್ರಾರಂಭಿಸಿದಾಗ, ಆ ರಾತ್ರಿ ಎರಡನೆಯ ಸಾರಿ ಸಭಾಸದರು ಸ್ತಂಭಿತರಾದರು.

ಮಾಧವ ನಾಯಕನ ಅವಸರ ಕಾರ್ಯಾಚರಣೆಯ ಸಲಹೆ ಬಿಜ್ಜಳನ ಅನುಮೋದನೆ ಪಡೆದಿತ್ತೆಂದು ಸಭಾಸದರು ತಿಳಿದಿದ್ದರು. ಕೆಲವರ ದೃಷ್ಟಿಯಲ್ಲಿ ಅದು ಬಿಜ್ಜಳನ ಸಲಹೆಯೇ ಆಗಿತ್ತು. ಅಣ್ಣನ ಸಲಹೆಯನ್ನು ತಮ್ಮನು ವಿರೋಧಿಸುವುದೆ? ಎಂದಿನಿಂದ ಈ ಭ್ರಾತೃಕಲಹ ? ಎಂದು ಅವರು ವಿಸ್ಮಿತರಾದರು.

ಈ ಆಶ್ಚರ್ಯ ನಿಮಗ್ನ ವಿರುದ್ಧ ವಾತಾವರಣದಲ್ಲಿ ಕರ್ಣದೇವ, ಮಾತು ಮಾತಿಗೆ ಮುಗ್ಗರಿಸಿ, ಸರಿಯಾದ ಶಬ್ದಗಳನ್ನು ಹುಡುಕುತ್ತಾ, ಸೂಚನೆಯನ್ನು ವಿರೋಧಿಸಲು ಕಾರಣಗಳನ್ನು ವಿವರಿಸಿದನು :

“ಬಸವೇಶ ದಂಡನಾಯಕರು ಮಂತ್ರಿಮಂಡಲದಿಂದ ನಿವೃತ್ತರಾಗಿ ಆರು ವರ್ಷಗಳು ಕಳೆದಿದ್ದರೂ ಈಗಲೂ ಅವರು ರಾಜ್ಯದಲ್ಲಿ ಪ್ರಭಾವಶಾಲಿಯಾದ ವ್ಯಕ್ತಿ. ಅವರು ಆಚರಣೆಗೆ ತಂದ ಧಾರ್ಮಿಕ ಆರ್ಥಿಕ ಸುಧಾರಣೆಗಳನ್ನು ಚಾಲುಕ್ಯ ರಾಜ್ಯದ ಪ್ರಜೆಗಳು ಇಂದಿಗೂ ಕೃತಜ್ಞತೆಯಿಂದ ನೆನೆಸಿಕೊಳ್ಳುತ್ತಾರೆ. ಅಂತಹವರನ್ನು 'ಕಸಪಯಾದಿ ದುರ್ಮಂತ್ರಿಗಳು,' ಎಂದು ಕರೆದು ಮಾಧವ ನಾಯಕರು ಸಭೆಗೆ ಅಪಮಾನ ಮಾಡಿದ್ದಾರೆ. ಬಸವೇಶ ದಂಡನಾಯಕರು ಈಗ ಮಂತ್ರಿಮಂಡಲದಲ್ಲಿದ್ದಿದ್ದರೆ, ಈಗ ನಾವು ಎದುರಿಸಬೇಕಾಗಿರುವ ವಿಷಮ ಪರಿಸ್ಥಿತಿ ಉಂಟಾಗುತ್ತಲೇ ಇರಲಿಲ್ಲ.

“ಮಾಧವ ನಾಯಕರು ಹೇಳುವಂತೆ ಶರಣಧರ್ಮದ ಪ್ರಸಾರ ಈ ಪರಿಸ್ಥಿತಿಯ ಕಾರಣವಲ್ಲ. ನಮ್ಮ ಅವಿವೇಕದ ವರ್ತನೆಯಿಂದ ನಾವೇ ಈ ವಿಪತ್ತನ್ನು ತಂದುಕೊಂಡಿದ್ದೇವೆ. ಮಧುವರಸಾದಿಗಳ ವಿಚಾರಣೆಯಲ್ಲಿ ಧರ್ಮಶಾಸ್ತ್ರ ನಿಬಂಧನೆಗಳ ಅಪಚಾರವಾಗಿದೆಯೆಂಬ ಕೂಗು ಕಲ್ಯಾಣದ ನಾಗರಿಕರಲ್ಲಿ ಬೆಳೆಯುತ್ತಿದ್ದಾಗ ಆಪಾದಿತರಿಗೆ ಮರಣದಂಡನೆ ವಿಧಿಸುವ ಆಜ್ಞೆ ಪ್ರಕಟವಾಯಿತು. ಅಮಾನುಷ ಕ್ರೌರ್ಯ ಪ್ರದರ್ಶನದಿಂದ ಮಾಧವ ನಾಯಕರು ದಂಡಾಜ್ಞೆಯನ್ನು ಕಾರ್ಯಗತ ಮಾಡಿದರು. ಈ ಘಟನೆಗಳಿಂದ ಬೆದರಿದ ಶರಣರು ಕಲ್ಯಾಣವನ್ನೇ ಬಿಡಲು ಯೋಚಿಸಿದ್ದು ಸಹಜವಾಗಿದೆ. ಅವರನ್ನು ತಡೆಯುವುದರಿಂದ ಪರಿಸ್ಥಿತಿ ಇನ್ನಷ್ಟು ಕೆಡುವುದು. ಪ್ರಭುಗಳು ಅದಕ್ಕೆ ಅವಕಾಶ ಕೊಡಲಾಗದೆಂದು ಬೇಡುತ್ತೇನೆ.