ಪುಟ:ಕ್ರಾಂತಿ ಕಲ್ಯಾಣ.pdf/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೬೬

ಕ್ರಾಂತಿ ಕಲ್ಯಾಣ


“ನಗರದ ಶೈವಮಠಗಳೆಲ್ಲವನ್ನು ನಾಶಮಾಡಬೇಕೆಂಬ ಮಾಧವ ನಾಯಕರ ಸಲಹೆ ನನಗೆ ಆಶ್ಚರ್ಯವನ್ನುಂಟುಮಾಡಿದೆ. ರಾಜ್ಯದಲ್ಲಿ ಎಲ್ಲ ಧರ್ಮಗಳನ್ನು ರಕ್ಷಿಸುವುದು ರಾಜನ ಕರ್ತವ್ಯವೆಂಬುದನ್ನು ಮರೆತು ನಾವು, ಮಾಧವನಾಯಕರ ಸಲಹೆಯಂತೆ ನಡೆದರೆ ಚಾಲುಕ್ಯರಾಜ್ಯದ ವಿನಾಶ ಸಮೀಪಿಸಿದಂತೆಯೇ ಎಂದು ತಿಳಿಯಬಹುದು. ಕಲ್ಯಾಣದ ಶೈವಮಠಗಳು ಚಾಲುಕ್ಯರಾಜ್ಯದಲ್ಲಿ ಅತ್ಯಂತ ಪ್ರಭಾವಶಾಲಿ ಸಂಸ್ಥೆಗಳೆಂದು ಹೆಸರಾಗಿವೆ. ದೇಶದ ಬಹುಸಂಖ್ಯಾತ ಪ್ರಜೆಗಳು, ಸಾಮಂತರು ಈ ಮಠಗಳ ಭಕ್ತರಾಗಿದ್ದಾರೆ. ಈ ಮಠಗಳನ್ನು ನಾಶಮಾಡುವುದರಿಂದ ಅವರೆಲ್ಲ ನಮ್ಮ ಶತೃಗಳಾಗುತ್ತಾರೆ. ಅಂತಃಕಲಹ ಪ್ರಾರಂಭವಾಗುತ್ತದೆ. ಶರಣಧರ್ಮದ ಮೇಲಿನ ವಿದ್ವೇಷದಿಂದ ಮಾಧವನಾಯಕರು ಈ ಅವಿವೇಕದ ಕಾರ್ಯಕ್ರಮವನ್ನು ಸೂಚಿಸಿದ್ದಾರೆ. ಸಭೆ ಅದನ್ನು ನಿರಾಕರಿಸಿ, ರಾಜ್ಯದಲ್ಲಿ ಸುಖ ಶಾಂತಿ ಸಮೃದ್ಧಿಗಳನ್ನು ಸ್ಥಾಪಿಸಲು ಸಹಾಯಕವಾದ ಶಾಂತಿಧರ್ಮಗಳ ಮಾರ್ಗವನ್ನು ಅನುಸರಿಸಬೇಕಾಗಿ ಬೇಡುತ್ತೇನೆ.”

ಕರ್ಣದೇವನ ವಾದದಲ್ಲಿ ನೈಪುಣ್ಯ ಚತುರೋಕ್ತಿಗಳಿಲ್ಲದಿದ್ದರೂ ಸರಳತೆ ಸದುದ್ದೇಶಗಳ ಪ್ರಾಸಾದಿಕ ಗುಣದಿಂದ ಅದು ಶ್ರೋತೃಗಳನ್ನು ತನ್ನ ಕಡೆಗೆ ತಿರುಗಿಸಿಕೊಂಡಿತು. ಸಭಾಸದರಲ್ಲಿ ಹೆಚ್ಚು ಮಂದಿ ಮನದಲ್ಲೇ ಅದನ್ನು ಮೆಚ್ಚಿಕೊಂಡರು. ಆದರೆ ಬಿಜ್ಜಳನನ್ನು ವಿರೋಧಿಸುವ ಧೈರ್ಯ ಸಾಹಸಗಳು ಅವರಲ್ಲಿ ಯಾರಿಗೂ ಇರಲಿಲ್ಲ. ಮಾಧವ ನಾಯಕನು ಉತ್ತರ ಕೊಡಲು ಎದ್ದು ನಿಂತಾಗ ಅವರು, ವಧಾಪೀಠಕ್ಕೆ ಕಟ್ಟಿದ ಬಲಿಪಶುಗಳಂತೆ ನಿಶ್ಚೇಷ್ಟವಾಗಿ ಸುಮ್ಮನಿದ್ದರು.

ಮಾಧವ ನಾಯಕನು ಹೇಳಿದನು : “ಎಲ್ಲ ವೃತ್ತಿಗಳಂತೆ ಪ್ರಭುತ್ವ ಅಧಿಕಾರಗಳೂ ಶಿಕ್ಷಣ ಅಭ್ಯಾಸಗಳಿಂದ ಕಲಿಯಬೇಕಾದ ಒಂದು ವಿಶಿಷ್ಟ ವೃತ್ತಿ, ಕಲಿತು ಮಾಡಿದ ಕೆಲಸ ಯಶಸ್ವಿಯಾಗಿ ಫಲ ಕೊಡುವುದು. ಬಸವೇಶ ದಂಡನಾಯಕರು ಧಾರ್ಮಿಕ ವಿಚಾರದಲ್ಲಿ ಅನುಭಾವಿಗಳೂ ಶ್ರೇಷ್ಠರೂ ಆಗಿರಬಹುದು. ಆದರೆ ಅವರು ತಮಗೆ ಪರಿಚಯವಿಲ್ಲದ ರಾಜಿಕಕ್ಷೇತ್ರಕ್ಕೆ ಪ್ರವೇಶಿಸಿ ಅನರ್ಥಕ್ಕೆ ಕಾರಣರಾದರು. ಅವರು ಮಹಾಮಂತ್ರಿಯಾಗಿ ಅನುಸರಿಸಿದ ಕಾರ್ಯವಿಧಾನದಿಂದ ಚಾಲುಕ್ಯರಾಜ್ಯದ ಪ್ರಜೆಗಳಲ್ಲಿ ರಾಜಕೀಯ ಧಾರ್ಮಿಕ ಜಾಗೃತಿ ಎಚ್ಚರಗೊಂಡಿತು. ನಾವು ಈಗ ಎದುರಿಸಬೇಕಾಗಿರುವ ವಿಷಮ ಪರಿಸ್ಥಿತಿಗೆ ಈ ಜಾಗೃತಿಯೇ ಮುಖ್ಯ ಕಾರಣ. ಪ್ರಭುತ್ವವು ಕ್ಷತ್ರಿಯನ ಜನ್ಮಸಿದ್ಧವಾದ ಅಧಿಕಾರ. ಬ್ರಹ್ಮ, ವೈಶ್ಯ, ಶೂದ್ರ ವರ್ಣಗಳವರು ಕ್ಷತ್ರಿಯನ ಅಧೀನರಾಗಿ ಅವನು ಹೇಳಿದಂತೆ ನಡೆದುಕೊಳ್ಳಬೇಕು. ಬಸವೇಶ ದಂಡನಾಥರು ಮಂತ್ರಿಯಾಗಿ ತಮ್ಮ ಆಡಳಿತ ನೀತಿಯಿಂದ ಈ ವರ್ಣ ವ್ಯವಸ್ಥೆಗೆ