ಪುಟ:ಕ್ರಾಂತಿ ಕಲ್ಯಾಣ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೨೫

ತಿಳಿಯುವುದು."

"ಸಂತೆಯಲ್ಲಿ ನೀನು ಮಾರಲು ತಂದಾಗ ಒರೆ ಹಚ್ಚಿನೋಡಿ ಒಪ್ಪಿಗೆಯಾದರೆ, ಕೊಂಡುಕೊಳ್ಳುತ್ತೇನೆ. ಈಗ ನಾನು ಹೇಳಿದಂತೆ ಮಾಡು."

"ಏನು ಮಾಡಬೇಕು?"

"ಮೊದಲು ಸ್ನಾನಕ್ಕೆ ಸಿದ್ದಪಡಿಸು, ಆಮೇಲೆ ಉಪಾಹಾರ ತಂದುಕೊಡು, ಆಮೇಲೆ......"

"ಹೇಳಿರಿ ಒಡೆಯರೆ, ನಾನು ಕಿವಿಯರಳಿಸಿ ಕಾದಿದ್ದೇನೆ."

"ಹೆಗ್ಗಡೆಗೆ ಹೋಗಿ ಹೇಳು. ಧರ್ಮಾಧಿಕರಣದ ಒಬ್ಬ ಹಿರಿಯ ಅಧಿಕಾರಿ ನನ್ನನ್ನು ನೋಡಲು ಬರುತ್ತಾರೆ, ಅವರನ್ನು ಇಲ್ಲಿ ಕರೆತರಬೇಕೆಂದು."

"ಆಜ್ಞೆ", ಎಂದು ದಾಸಿ ಕುಣಿಯುತ್ತ ಕುಲುಕುತ್ತ ಹೋದಳು.

ಪ್ರಹರಾನಂತರ ಅಗ್ಗಳನು ಸ್ನಾನ ಉಪಾಹಾರಗಳನ್ನು ಮುಗಿಸಿ, ಕುಳಿತಿದ್ದಂತೆ ಮನೆಹೆಗ್ಗಡೆ ಕ್ರಮಿತನನ್ನು ಕರೆದುಕೊಂಡು ಅಲ್ಲಿಗೆ ಬಂದನು. ಸಂಗಡ ಇಬ್ಬರು ಸೇವಕರು ಪಾಂಥ ನಿವಾಸದಲ್ಲಿ ಬಿಟ್ಟಿದ್ದ ಅಗ್ಗಳನ ಉಡಿಗೆ ತೊಡಿಗೆ ಸಾಮಾನು ಸರಂಜಾಮುಗಳ ಗಂಟು ಮೂಟೆ ಪೆಟ್ಟಿಗೆಗಳನ್ನು ತಂದು ಕೋಣೆಯಲ್ಲಿಟ್ಟರು.

ಸೇವಕರು, ಮನೆ ಹೆಗ್ಗಡೆ ಹೊರಗೆ ಹೋದ ಮೇಲೆ ಅಗ್ಗಳನು, "ನನ್ನ ವಸ್ತುಗಳನ್ನು ತಂದು ಕೊಟ್ಟಿದ್ದಕ್ಕಾಗಿ ವಂದನೆಗಳು, ಕ್ರಮಿತರೆ," ಎಂದನು.

"ನಿಮ್ಮನ್ನು ಈ ಚಿನ್ನದ ಪಂಜರದಲ್ಲಿ ಕೂಡಿಟ್ಟವನು ನಾನು, ನಿಮ್ಮ ವಸ್ತುಗಳನ್ನು ತಂದುಕೊಡುವುದು ನನ್ನ ಕರ್ತವ್ಯವಾಗಿತ್ತು. ಅದನ್ನು ನೆರವೇರಿಸಿದ್ದೇನೆ. ಪ್ರಭುಗಳ ಸಮಯವನ್ನು ತಿಳಿದು ಹೆಗ್ಗಡೆ ಹಿಂದಿರುಗಲು ಹೆಚ್ಚು ಹೊತ್ತಾಗುತ್ತದೆ. ಅಷ್ಟರಲ್ಲಿ ನಿಮ್ಮ ಸಂಗಡ ಕೆಲವು ವಿಚಾರಗಳನ್ನು ಪ್ರಸ್ತಾಪಿಸಬೇಕಾಗಿದೆ. -"ಕೋಣೆಯಲ್ಲಿದ್ದ ಸುಖಾಸನದಲ್ಲಿ ಕುಳಿತು ಕ್ರಮಿತನು ಹೇಳಿದನು.

"ನಾನು ಸಿದ್ಧವಾಗಿದ್ದೇನೆ."

"ಈಗ್ಗೆ ಆರು ವರ್ಷಗಳ ಮೊದಲು ಜಗದೇಕಮಲ್ಲರಸರು ನವರಾತ್ರಿಯಲ್ಲಿ ಸಿಂಹಾಸನಾರೋಹಣ ಮಾಡಿದ್ದು ನಿಮಗೆ ನೆನಪಿದೆಯೆ?"

"ಆಗ ನಾನು ಸ್ವಸ್ಥಳವಾದ ಇಂಗಳೇಶ್ವರದಲ್ಲಿದ್ದೆ. ಜನರಿಂದ ಆ ವಿಚಾರ ಕೇಳಿದ್ದೇನೆ."

"ಪಟ್ಟಾಭಿಷೇಕವಾದ ಮೇಲೆ ಮಹಾರಾಜರು ನವರಾತ್ರಿಯಲ್ಲಿ ಅದೇ ಮೊದಲಸಾರಿ ಸಭೆ ನಡೆಸಿದರು. ದುರ್ದೈವದಿಂದ ಅದೇ ಕೊನೆಯ ಸಾರಿಯೂ ಆಯಿತು. ಈ ಆರು ವರ್ಷಗಳಲ್ಲಿ ಒಂದು ಸಾರಿಯೂ ಅವರು ಸಿಂಹಾಸನದ